ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರ ಸ್ವಾಮೀಜಿ 112ನೇ ಜಯಂತಿ: 112 ಮಕ್ಕಳಿಗೆ ಶ್ರೀಗಳ ಹೆಸರು

ವಿಶ್ವ ದಾಸೋಹ ದಿನವಾಗಿ ಘೋಷಿಸಬೇಕೆಂದು ಶ್ರೀಗಳ ಒತ್ತಾಯ
Last Updated 1 ಏಪ್ರಿಲ್ 2019, 20:27 IST
ಅಕ್ಷರ ಗಾತ್ರ

ತುಮಕೂರು: ನಡೆದಾಡುವ ದೇವರು, ಮಹಾಶಿವಯೋಗಿ ಡಾ.ಶಿವಕುಮಾರ ಸ್ವಾಮೀಜಿ ಅವರ 112ನೇ ಜಯಂತಿ ಮತ್ತು ಗುರುವಂದನೆ ಸೋಮವಾರ ಸಿದ್ಧಗಂಗಾಮಠದಲ್ಲಿ ಸಾವಿರಾರು ಭಕ್ತರು, ವಿವಿಧ ಮಠಾಧೀಶರ ಸಮ್ಮುಖದಲ್ಲಿ ನಡೆಯಿತು.

ಬೆಳಿಗ್ಗೆ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ,ಅವರ ಗುರುಗಳಾದ ಉದ್ಧಾನ ಶಿವಯೋಗಿಗಳ ಗದ್ದುಗೆಗೆ ಮಠದ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಪೂಜೆ, ಮಹಾಮಂಗಳಾರತಿ ನೆರವೇರಿಸಿದರು. ಬಳಿಕ ಸ್ವಾಮೀಜಿಯವರ ಪ್ರತಿಮೆ ಮೆರವಣಿಗೆ ನಡೆಯಿತು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶಿವಕುಮಾರ ಸ್ವಾಮೀಜಿಯವರ ವಿಶ್ವಮಾನವತ್ವ, ಶಿಕ್ಷಣ ಪ್ರೇಮ, ಜನಪರ ಕಾಳಜಿ, ಕಾಯಕ ಪ್ರಜ್ಞೆ ಗುಣಗಳನ್ನು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸುತ್ತೂರುಶ್ರೀ, ಪೇಜಾವರಶ್ರೀ, ಶಿವಮೂರ್ತಿ ಮುರುಘಾಶರಣರು, ಉಜ್ಜಯಿನಿಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಸ್ಮರಿಸಿದರು.

ಶಿವಕುಮಾರ ಸ್ವಾಮೀಜಿಗಳೇ ಜಗತ್ತಿನ ಶ್ರೇ‌ಷ್ಠ ರತ್ನ. ಅವರಿಗೆ ಭಾರತ ರತ್ನ, ಮತ್ತೊಂದು ರತ್ನ ಗೌರವದ ಅಗತ್ಯತೆ ಇಲ್ಲ ಎಂದು ಪ್ರತಿಪಾದಿಸಿದರು. ಜಗತ್ತಿನಲ್ಲಿ ದಾಸೋಹಕ್ಕೆ ಹೆಸರಾದ ಮಠ ಸಿದ್ಧಗಂಗಾಮಠ. ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನವಾದ ಏಪ್ರಿಲ್ 1 ವಿಶ್ವ ದಾಸೋಹ ದಿನ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಬಸವಾದಿ ಶರಣರು ಪ್ರತಿಪಾದಿಸಿದ ಕಾಯಕ ತತ್ಪರತೆಯನ್ನು ಅನುಸರಿಸಿದ ಶಿವಕುಮಾರ ಸ್ವಾಮೀಜಿಯವರು ತೋರಿದ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.

8 ಕಡೆ ಪ್ರಸಾದ: ಮಠದ ಆವರಣದಲ್ಲಿ ಭಕ್ತರಿಗೆ 8 ಕೊಪ್ಪಲಿನಲ್ಲಿ ಪ್ರಸಾದ ವ್ಯವಸ್ಥೆ ಮಾಡಿತ್ತು. ಸಿಹಿ ಪೊಂಗಲ್, ಖಾರಾ ಪೊಂಗಲ್ ಉಪಹಾರಕ್ಕೆ, ಊಟಕ್ಕೆ ಪಾಯಸ, ಬೂಂದಿ, ಖಾರಾ ಬೂಂದಿ, ಚಿತ್ರಾನ್ನ, ಅನ್ನ ಸಾಂಬಾರ್ ವ್ಯವಸ್ಥೆ ಮಾಡಲಾಗಿತ್ತು.

112 ಮಕ್ಕಳಿಗೆಶ್ರೀಗಳ ಹೆಸರು

ಬೆಂಗಳೂರಿನ ‘ಶಿವಕುಮಾರ ಮಹಾ ಸ್ವಾಮೀಜಿ ಡಿವೋಟಿಸ್ ಅಸೋಸಿಯೇಷನ್’, ಸ್ವಾಮೀಜಿಯವರ 112ನೇ ಜಯಂತಿ ಪ್ರಯುಕ್ತ 112 ಮಕ್ಕಳಿಗೆ ಶ್ರೀಗಳ ಹೆಸರಿಡುವ ನಾಮಕರಣ ಮಹೋತ್ಸವ ನಡೆಸಿತು.

ಮಠದ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಾಮಕರಣ ನಡೆಯಿತು. ಮಗುವಿಗೆ ತೊಟ್ಟಿಲು, ಶ್ರೀಗಳ ಭಾವಚಿತ್ರ ಇರುವ ಬೆಳ್ಳಿ ಪದಕ, ಹೊಸ ಉಡುಪು, ಹೊಸ ತೊಟ್ಟಿಲಿನ ಹಾಸಿಗೆ, ಜನ್ಮ ದಿನಕ್ಕೆ ತಕ್ಕಂತೆ ಜಾತಕ ವಿತರಿಸಲಾಯಿತು. ಅಸೋಸಿಯೇಷನ್ ಅಧ್ಯಕ್ಷರಾದ ಜಯಣ್ಣ, ಉಪಾಧ್ಯಕ್ಷ ವೀರೇಶ್ ಹಿರೇಮಠ, ಪ್ರಧಾನ ಕಾರ್ಯದರ್ಶಿ ಜಿ.ಧರ್ಮಪ್ರಕಾಶ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT