ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಊಟ ಮಾಡುವವ ಒಡೆಯ, ನೀಡುವವ ದಾಸ’

Last Updated 21 ಜನವರಿ 2019, 19:55 IST
ಅಕ್ಷರ ಗಾತ್ರ

1966ರಲ್ಲಿ ದೇಶದಲ್ಲಿ ಆಹಾರದ ಅಭಾವ ತಲೆದೋರಿತು. ಆ ಬಿಸಿ ಮಠದ ದಾಸೋಹಕ್ಕೂ ತಟ್ಟಿತು. ಹಣ ನೀಡಿದರೂ ಆಹಾರಪದಾರ್ಥಗಳು ಸರಬರಾಜು ಆಗುತ್ತಿರಲಿಲ್ಲ. ದಾಸೋಹ ಕ್ಷೇತ್ರವಾಗಿದ್ದರಿಂದ ಸಾವಿರಾರು ಜನ ಮಠಕ್ಕೆ ಅನ್ನವನ್ನು ಅರಸಿ ಬಂದರು. ಶ್ರೀಗಳ ಮನಸ್ಸು ಕಲಕಿತು.

ಸಾಮಾನ್ಯವಾಗಿ ಮಠದ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಭಕ್ತರಿಗೆ ದಾಸೋಹದ ವ್ಯವಸ್ಥೆಯಾಗುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಸಾವಿರಾರು ಜನ ಊಟಕ್ಕೆ ಬಂದಾಗ ಪ್ರಸಾದ ಕೊಡದೆ ಕಳುಹಿಸುವಂತಿಲ್ಲ. ಅಸಂಖ್ಯಾತ ಜನ ತುತ್ತಿಗಾಗಿ ಪರದಾಡುವ ಈ ಸಮಯದಲ್ಲಿ ನಮಗೆ ಪ್ರಸಾದ ಸ್ವೀಕರಿಸಲು ಅಧಿಕಾರ ಇದೆಯೇ? ಎನ್ನುವಷ್ಟರ ಮಟ್ಟಿಗೆ ಸ್ವಾಮೀಜಿ ಅವರ ಮನಸ್ಸು ಕಲಕಿತ್ತು.

ಮಠದಲ್ಲಿನ ದವಸ ಧಾನ್ಯಗಳೆಲ್ಲ ಖಾಲಿ ಆದರೂ ಪರವಾಗಿಲ್ಲ, ಮಠ ಬರಿದಾದರೂ ಚಿಂತೆಯಿಲ್ಲ, ಬಂದವರಿಗೆ ಪ್ರಸಾದ ಕೊಟ್ಟು ಕಳುಹಿಸಲೇಬೇಕು ಎಂಬ ಅಚಲ ನಿರ್ಧಾರಕ್ಕೆ ಸ್ವಾಮೀಜಿ ಬಂದರು.

ತಾವೇ ಅಡುಗೆಮನೆಯಲ್ಲಿ ನಿಂತರು. ಕೊಪ್ಪರಿಗೆಗಳಲ್ಲಿ ಮುದ್ದೆ ತಿರುವಲು ಅವರೂ ಸನ್ನದ್ಧರಾದರು. ಮಠದ ಮುಂದೆ ಅನ್ನಕ್ಕಾಗಿ ಸಾಲಗಟ್ಟಿದ್ದವರಿಗೆ ತಾವೇ ಬಡಿಸಿದರು. ಈ ಬಗ್ಗೆ ತಿಳಿದ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಹಾಗೂ ಆಹಾರ ಸಚಿವ ಬಿ.ಡಿ. ಜತ್ತಿ ಮಠಕ್ಕೆ ಬಂದು ದಾಸೋಹದ ಸಮರ್ಪಣಾಭಾವಕ್ಕೆ ಮನಸಾರೆ ಪ್ರಶಂಸೆ ವ್ಯಕ್ತಪಡಿಸಿದರು.

ತಿಂಗಳಿಗೆ ನೂರು ಮೂಟೆ ಗೋಧಿಯನ್ನು ನೀಡಿದರು. ಆದರೆ ಅಂದು ಈ ನೂರು ಮೂಟೆ ಗೋಧಿ 10 ದಿನಕ್ಕೆ ಮಾತ್ರ ಸಾಕಾಗುತ್ತಿತ್ತು. ಉಳಿದ ಅನ್ನಕ್ಕೆ ಮಠದ ಖಜಾನೆ ಬರಿದಾಗುತ್ತಿತ್ತು.

ದಾಸೋಹ ಎಂದರೆ ದಾಸಭಾವ ದಿಂದ ವರ್ತಿಸುವುದು. ‘ಊಟ ಮಾಡು ವವನೇ ಒಡೆಯ. ನೀಡುವವ ದಾಸ’ ಎನ್ನುವ ಮಾತುಗಳು ಅಂದಿನಿಂದ ಇಂದಿನವರೆಗೂ ಮಠದಲ್ಲಿ ನಡೆದುಕೊಂಡು ಬಂದಿದೆ.

1979ರಲ್ಲಿಯೇ ನಿತ್ಯಾನ್ನ ದಾಸೋಹಕ್ಕೆ 25ಕ್ಕೂ ಹೆಚ್ಚು ಚೀಲ ರಾಗಿ ಹಿಟ್ಟು ಅಗತ್ಯವಾಗಿತ್ತು. ಅದರಲ್ಲಿಯೂ ಶಿವರಾತ್ರಿಯ ವೇಳೆ ನಡೆಯುವ 10 ದಿನಗಳ ಜಾತ್ರೆ ದಾಸೋಹದ ಸುಗ್ಗಿ ಪರ್ವ. ಜಾತ್ರೆ ಒಂದು ತಿಂಗಳು ಇದೆ ಎನ್ನುವಾಗಲೇ ಪೂರ್ವ ತಯಾರಿಗಳು ನಡೆಯುತ್ತವೆ. ಅಂದು ಜಾತ್ರೆಯ ಒಂದು ದಿನಕ್ಕೆ 120ರಿಂದ 150 ಪಲ್ಲ ದವಸ ಧಾನ್ಯಗಳು ಬೇಕಾಗಿತ್ತು. ಅಡುಗೆಗೆ ಸೌದೆ ತರಲು ದೇವರಾಯನ ದುರ್ಗದಲ್ಲಿ ಶ್ರೀಗಳು ಅಲೆದಾಡಿದ ದಿನಗಳಿವೆ.

ಭಕ್ತರೂ ಅಷ್ಟೇ, ಶಿವಕುಮಾರ ಶ್ರೀಗಳು ಉಚ್ಛ್ರಾಯವಾಗಿ ಬೆಳೆಸಿರುವ ಅನ್ನದಾಸೋಹಕ್ಕೆ ತಮ್ಮ ಕೈಯಲ್ಲಾದ ನೆರವು ನೀಡಿದ್ದಾರೆ. ಅಕ್ಕಿ, ರಾಗಿ, ಬೇಳೆ ಹೀಗೆ ಎಲ್ಲ ರೀತಿಯ ಪಡಿಪದಾರ್ಥಗಳನ್ನು ಮಠಕ್ಕೆ ತಂದು ಒಪ್ಪಿಸುತ್ತಾರೆ.‌ ಸ್ವಾಮೀಜಿ ಮಠದ ಆಡಳಿತಕ್ಕೆ ಮತ್ತು ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಎಷ್ಟು ಪ್ರಾಮುಖ್ಯವನ್ನು ನೀಡಿದರೋ ದಾಸೋಹ ವ್ಯವಸ್ಥೆಯನ್ನು ಕಟ್ಟಲು ಹೆಚ್ಚಿನದಾಗಿಯೇ ಶ್ರಮವಹಿಸಿದರು.

ದರ್ಶನಕ್ಕೆ ಬಂದ ಜನರನ್ನು ಭೇಟಿ ಮಾಡಿದ ನಂತರ, ಅವರು ನೇರವಾಗಿ ಹೋಗುತ್ತಿದ್ದುದು ದಾಸೋಹದ ಮನೆಗೆ. ಅಲ್ಲಿ ಯಾವ ವ್ಯವಸ್ಥೆ ಆಗಿದೆ, ಮತ್ತೆ ಏನಾಗಬೇಕು ಎನ್ನುವ ಬಗ್ಗೆ ಪರಿಶೀಲಿಸುತ್ತಿದ್ದರು. ಅಷ್ಟೇಕೆ ಅನಾರೋಗ್ಯಕ್ಕೆ ತುತ್ತಾಗಿದ್ದಾಗ ಅವರನ್ನು ನೋಡಲು ಬರುತ್ತಿದ್ದ ಗಣ್ಯರಿಗೆ ಅವರು ಹೇಳುತ್ತಿದ್ದ ಮೊದಲ ಮಾತು, ‘ಪ್ರಸಾದ ಮಾಡಿದ್ರಾ, ಪ್ರಸಾದ ಸ್ವೀಕರಿಸಿ ಹೋಗಿ’ ಎನ್ನುವುದು.

* ಸಾಧಕನೊಬ್ಬನಿಗೆ ಸನ್ಮಾನವೆಂದರೆ ಅವನನ್ನು ಸಭೆಗೆ ಕರೆದು ಶಾಲು, ಪೇಟ ತೊಡಿಸಿ ಫಲ–ಪುಷ್ಪಗಳನ್ನಿತ್ತರೆ ಅದು ಸನ್ಮಾನವಲ್ಲ. ಬದಲಾಗಿ ಆ ವ್ಯಕ್ತಿಯಲ್ಲಿ ಇರಬಹುದಾದ ಒಳ್ಳೆಯ ಗುಣವೊಂದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಆ ವ್ಯಕ್ತಿಗೆ ಮಾಡಬಹುದಾದ ನಿಜವಾದ ಸನ್ಮಾನ.

* ಸ್ವಾಮಿತ್ವದ ಸೂಕ್ಷ್ಮತೆ, ಹಣಕಾಸಿನ ನಿರ್ವಹಣೆ, ಭಕ್ತರ ಒಡನಾಟ, ಆಂತರಿಕ ಮತ್ತು ಬಾಹ್ಯ ಆಡಳಿತ, ಆಧ್ಯಾತ್ಮಿಕ ಮನೋಭಾವ ಇವುಗಳೆಲ್ಲ ನಮ್ಮ ಪೂಜ್ಯ ಗುರುಗಳು ಹೇಳಿ ಕಲಿಸಿದವಲ್ಲ. ಬದಲಾಗಿ ಇದ್ದು ಆಚರಿಸಿ ಕಲಿಸಿದವು.

–ಡಾ. ಶಿವಕುಮಾರ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT