ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರುಣ್ಯದ ನಿಧಿ, ಕಲ್ಯಾಣದ ಪ್ರತಿರೂಪ

Last Updated 21 ಜನವರಿ 2019, 19:55 IST
ಅಕ್ಷರ ಗಾತ್ರ

ಹನ್ನೆರಡನೇ ಶತಮಾನದ ಶರಣರ ಕನಸನ್ನು ನಾಡಿನಲ್ಲಿರುವ ಬಹುಪಾಲು ವಿರಕ್ತಮಠಗಳು ನನಸು ಮಾಡುತ್ತಿವೆ. ಅವುಗಳಲ್ಲಿ ಶ್ರೀಸಿದ್ಧಗಂಗಾ ಮಠ ಅಗ್ರಗಣ್ಯ ಎನಿಸಿದೆ. ಕಳೆದ ಎರಡು ಶತಮಾನಗಳ ನಿರಂತರ ತ್ರಿವಿಧ ದಾಸೋಹದ ಫಲಾನುಭವಿಗಳು ನಾಡಿನಾದ್ಯಂತ ಚದುರಿದ್ದಾರೆ. ಮಠ ಹಾಗೂ ಪರಮಪೂಜ್ಯ ಶಿವಕುಮಾರ ಸ್ವಾಮೀಜಿಯವರು ಸಮಾಜದ ಪ್ರಾಣವಾಯು ಆಗಿದ್ದಾರೆ. ಮಠದ ವಿದ್ಯಾರ್ಥಿಗಳಲ್ಲಿ ಹಲವರು ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ.

ನಾಡಿನ ಬಹುಪಾಲು ಪ್ರಾಥಮಿಕ ಶಾಲಾ ಶಿಕ್ಷಕರು ಮಠದ ಕೊಡುಗೆ. ಅವರಲ್ಲಿ ಮಹತ್ವದ ಸಂಶೋಧಕರಿರುವಂತೆ ಸರ್ಕಾರದ ವರಿಷ್ಠಾಧಿಕಾರಿಗಳು ಇರುವರು. ಮಾತೃರೂಪಿ ಶ್ರೀಮಠ ಬಡವಿದ್ಯಾರ್ಥಿಗಳನ್ನು ಪಾಲಿಸಿ ಪೋಷಿಸುವ ತೊಟ್ಟಿಲು. ವರ್ಷದಿಂದ ವರ್ಷಕ್ಕೆ ಇಲ್ಲಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗುತ್ತ ಸಾಗಿದೆ. ಈ ಸಾಲಿನಲ್ಲಿ ಶ್ರೀಮಠದಲ್ಲಿ ಆಶ್ರಯ ಪಡೆದಿರುವ ವಿದ್ಯಾರ್ಥಿಗಳು ಹತ್ತು ಸಹಸ್ರ ಸಂಖ್ಯೆಗೆ ಸನಿಹದಲ್ಲಿದ್ದಾರೆ.

ಸಿದ್ಧಗಂಗಾಮಠ! ಅದು ಶರಣರ ಕಲ್ಯಾಣದ ಪ್ರತಿರೂಪ. ಅದು ನಾಡಿನ ಹೆಮ್ಮೆ. ಕಳೆದೆರಡು ನೂರು ವರ್ಷಗಳಿಂದ ಅಡುಗೆಮನೆಯಲ್ಲಿನ ಒಲೆಯ ಬೆಳಕು ನಂದಾದೀವಿಗೆಯಾಗಿದೆ. ಪ್ರಸಾದದ ಪರಿಮಳ ನಾಡೊಂದೇ ಅಲ್ಲದೆ ದೇಶದಾದ್ಯಂತ ಹರಡಿದೆ. ಪ್ರತಿವರ್ಷ ಈ ತ್ರಿವಿಧ ದಾಸೋಹ ಸಾನ್ನಿಧ್ಯದ ಕಮ್ಮಟ ಸಹಸ್ರಾರು ಮಕ್ಕಳ ಭವಿಷ್ಯ ರೂಪಿಸುತ್ತಿದೆ. ಅವರನ್ನು ಅತ್ಯುತ್ತಮ ಪ್ರಜೆಗಳನ್ನಾಗಿಸುತ್ತಿದೆ.

ಮಠದ ಸಹಸ್ರ ಸಹಸ್ರ ಹಳೆ ವಿದ್ಯಾರ್ಥಿಗಳು ಜಗತ್ತಿನ ನಾನಾ ಕಡೆ ಚದುರಿರುವರು, ಅಂಥ ಹಳೇ ವಿದ್ಯಾರ್ಥಿಗಳಲ್ಲಿ ನಾನು ಸಹ ಒಬ್ಬ. ಇದು ನನಗೆ ಅಭಿಮಾನದ ಸಂಗತಿ. ಎಪ್ಪತ್ತರ ದಶಕದಲ್ಲಿ ಜಗತ್ತು ಈಗಿನಷ್ಟು ಕುಬ್ಜವಾಗಿರಲಿಲ್ಲ. ಜಿಲ್ಲಾ ಕೇಂದ್ರಗಳ ನಡುವೆ ಅಗಾಧ ಅಂತರವಿತ್ತು. ಇನ್ನು ತುಮಕೂರು ಜಿಲ್ಲೆ ಹಲವು ಯೋಜನೆಗಳಿಂದ ದೂರವಿರುವಂತೆ ಭಾಸವಾಗುತ್ತಿತ್ತು. ಹ್ಹಾಂ! ಅಂದಹಾಗೆ ಪ್ರಥಮ ಪಂಚವಾರ್ಷಿಕ ಯೋಜನೆ ಅವಧಿ ರಾಹುಗ್ರಸ್ತವಾಗಿತ್ತು. ಕ್ಷಾಮ ಸಾಂಕ್ರಾಮಿಕ ವ್ಯಾಧಿಗಳಿವೆಲ್ಲಕ್ಕಿಂತ ಆಪತ್ಕಾಲೀನ ಪರಿಸ್ಥಿತಿ! ಇಂಥ ಹಲವು ಅನಿಷ್ಟಗಳೊಂದಿಗೆ ಮುಖಾಮುಖಿಯಾದವರೆಂದರೆ ಆ ಸಂಕ್ರಮಣ ಕಾಲದಲ್ಲಿ ಜನಿಸಿದ ನನ್ನಂಥವರು. ಬದುಕಿನ ಎರಡು ಮುಖಗಳೆಂದರೆ ಹಸಿವು ಮತ್ತು ಅಕ್ಷರ. ಸವಾಲು, ಸಾಹಸ, ಹುಂಬತನವನ್ನು ಪರಿಚಯಿಸಿದ ಕಾಲಘಟ್ಟ ಅದು. ಅಲೆಮಾರಿಗಳಾಗಿದ್ದ, ನಿಶ್ಚಿತ ಕಟ್ಟಡಗಳಿಲ್ಲದ, ಡೋಲಾಯಮಾನ ಬದುಕಿನ ಶಿಕ್ಷಕರಿದ್ದ ಶಾಲೆಗಳಲ್ಲಿ ಕಲಿಸುವ ಕಲಿಯುವ ಉತ್ಸಾಹಕ್ಕೆ ಬರವಿರಲಿಲ್ಲ. ವಿಶ್ವವಿದ್ಯಾಲಯಗಳಂತೆ ಶೋಭಿಸುತ್ತಿದ್ದ ಪ್ರೌಢಶಾಲೆಗಳ ಮೆಟ್ಟಿಲು ಹತ್ತಿಳಿಯುವುದು ನನ್ನಂಥ ಕುಂಭಸಂಭವರಿಗೆ ಸುಲಭದ ಸಂಗತಿಯಾಗಿರಲಿಲ್ಲ, ಅದೂ ಆತಂಕದ ದಿವಸಗಳಲ್ಲಿ. ಮುಂದೆ ಒಂದೆರಡು ವರ್ಷಗಳ ಕಾಲ ತಾಪತ್ರಯವನ್ನು ಕಷ್ಟಕೋಟಲೆಗಳನ್ನು ಅಮೂಲಾಗ್ರ ಅನುಭವಿಸಿ ಅನುಭಾವಿಯಾದೆ.

ಶಿಕ್ಷಕೋಪಾಸಕನಾಗುವುದು ನನ್ನ ಅದಮ್ಯ ಬಯಕೆ. ಶಿಕ್ಷಣ ಮತ್ತು ಪ್ರಸಾದ ಇವೆರಡರ ದಾಸೋಹಕ್ಕೆ ಮಠ ಹೆಸರಾಗಿತ್ತು. ಅಲ್ಲಿ ಸೀಟು ದೊರಕುವುದು ಸುಲಭದ ಸಂಗತಿಯಾಗಿರಲಿಲ್ಲ. ‘ಹೋಗು, ಆದರೆ ಪುನಃ ಬರಬೇಡ’ ಎಂದು ಹೇಳಿ ಅಪ್ಪ ಬಸ್ಸಿಗೆ ಹತ್ತಿಸಿದ. ಮಠ ಸೇರಿಕೊಂಡೆ, ಆದರೆ ನನ್ನ ಜೀರ್ಣಾಂಗ ವ್ಯವಸ್ಥೆಗೂ ರಾಗಿಮುದ್ದೆಗೂ ಕೆಲಕಾಲ ಜುಗಲ್‌ಬಂದಿ ನಡೆಯಿತು. ಇವೆರಡರ ನಡುವೆ ರಾಜಿ ಕುದುರಿದರು ನನಗೆ ಸೀಟು ದೊರಕಲಿಲ್ಲ. ಮಗ್ಗಿ ಬಾರದ ಕಾರಣಕ್ಕೆ ಪುನಃ ನನಗೆ ಸೀಟು ನಿರಾಕರಿಸಲಾಯಿತು. ಶ್ರೀಗಳು ಸಾಹಿತ್ಯಪ್ರೇಮಿಗಳು ಎಂದು ಪತ್ತೆ ಹಚ್ಚಿದ್ದೆ. ಕೊನೆಗೆ ಭಾಮಿನಿಷಟ್ಪದಿ ನನ್ನ ಭವಿಷ್ಯದ ಮೇಲೆ ಬೆಳಕು ಚೆಲ್ಲಿತು. ಅದರಲ್ಲಿದ್ದ ಪದ್ಯಗಳನ್ನು ವಾಚಿಸಿದ ರೀತಿ ಶ್ರೀಗಳಿಗೆ ಹಿಡಿಸಿತು.

ಕಲಿಸುವ ಉತ್ಸಾಹಕ್ಕೆ ಅಲ್ಲಿನ ಸಾತ್ವಿಕ ಪರಿಸರ ಕಾರಣ. ವಿದ್ಯಾರ್ಥಿಗಳ ಆಕಳಿಕೆ ಸದ್ದು ಆರಂಭಗೊಳ್ಳುವುದು ಸೂರ್ಯೋದಯಕ್ಕೂ ಪೂರ್ವದಲ್ಲಿ. ಆಕಳಿಕೆ ಲಗುಬಗೆ ಓಡಾಟ, ಬಾವಿ ಬಳಿ ತಣ್ಣೀರ ಸ್ನಾನ, ಅಲ್ಲಿ ತ್ರಿಪುಂಡ್ರಧಾರಣ ಅನರ್ಘ್ಯ ಆಭರಣ. ಅರೆಮೈಯನ್ನು ಮರೆಮಾಚುವ ಕೆಂಪು ವಸ್ತ್ರ. ವಿಶೇಷ ತರಗತಿಗಳಿರುವ ಕಡೆ ಓಡುವವರೆಷ್ಟೋ, ಅಲ್ಲಲ್ಲಿ ಕುಳಿತು ಅಧ್ಯಯನ ಮಾಡುವವರೆಷ್ಟೋ, ವ್ಯಾಸಂಗ ಮಾಡುವವರಂತೆ ಅಭಿನಯಿಸುವವರೆಷ್ಟೋ! ದೇವಸ್ಥಾನವಿರುವ ಬೆಟ್ಟವನ್ನು ಸಕಾರಣವಾಗಿ ಹತ್ತಿ ಇಳಿಯುವವರೆಷ್ಟೋ! ಅಲ್ಲಲ್ಲಿ ನಿಂತು ಸಂಸ್ಕೃತಶ್ಲೋಕಗಳ ನಿನಾದವನ್ನು ತನ್ಮಯತೆಯಿಂದ ಆಲಿಸಿ ಮೈಮರೆಯುವವರೆಷ್ಟೋ! ನನ್ನ ಮನಸ್ಸು ಕನವರಿಸುತ್ತಿದ್ದುದು ಇದನ್ನೆ ಅಲ್ಲವೆ! ನನ್ನ ವ್ಯಕ್ತಿತ್ವದಲ್ಲಿ ನಿಗೂಢವಾಗಿ ಅವಿತಿದ್ದ ಪ್ರತಿಭೆಯ ವಿವಿಧ ಮುಖಗಳು ಮೊಳೆಯಲು ಟಿಸಿಲು ಚಾಚಲು ಮಠದಲ್ಲಿನ ಪವಿತ್ರ ವಾತಾವರಣ ಪೋಷಕಾಂಶಗಳನ್ನು ಒದಗಿಸುತ್ತದೆ.

ನನ್ನನ್ನೇ ಉದಾಹರಿಸುವುದಾದರೆ ಅಲ್ಲಲ್ಲಿ ಹಸಿ ಇದ್ದು ಕೊನರಲು ಸಾಧ್ಯವಿಲ್ಲದಂಥ ಕೊರಡಿನಂತಿದ್ದೆ.

ಪರಿಸರಕ್ಕೆ ಹೊಂದಿಕೊಂಡ ಕ್ಷಣದಿಂದ ಮಠದ ವಿದ್ವತ್ ಪರಿಸರ ನನ್ನನ್ನು ಪರವಶಗೊಳಿಸಲಾರಂಭಿಸಿತು. ನನಗರಿವಿಲ್ಲದ ರೀತಿಯಲ್ಲಿ ಸಂಸ್ಕೃತ ಶ್ಲೋಕಗಳನ್ನು ಗುನುಗಲಾರಂಭಿಸಿದೆ. ಅಲ್ಲೆಲ್ಲಾ ಹಬ್ಬದೋಪಾದಿಯಲ್ಲಿ ಗೋಚರಿಸುತ್ತಿದ್ದ ಕನ್ನಡ/ಸಂಸ್ಕೃತ ಭಾಷಾಪ್ರವೀಣರನ್ನು ಪರಿಚಯಿಸಿಕೊಳ್ಳಲು ಹಾತೊರೆಯಲಾರಂಭಿಸಿದೆ. ಅವರ ಚಿತ್ತಸೂರೆಗೊಳ್ಳಲು ಕವಿತೆ ಕತೆಗಳ ಆಸರೆ ಪಡೆದೆ. ಪ್ರಸಾದ ಉಚಿತ ಸರಿ; ಆದರೆ ಉಳಿದ ವ್ಯಂಜಕಗಳು ಸಹ ಮುಖ್ಯವಲ್ಲವೆ! ಅದಕ್ಕೆಂದೆ ಬಿ.ಇಡಿ ವಿದ್ಯಾರ್ಥಿಗಳ ಪಾಠೋಪಕರಣಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಬರೆದುಕೊಡುತ್ತಿದ್ದೆ. ಅದಕ್ಕೆ ಇಂತಿಷ್ಟು ಸಂಭಾವನೆ ಲಭಿಸುತ್ತಿತ್ತು.

ಮಠವು ಪಠ್ಯಕ್ಕೆ ನೀಡಿದಷ್ಟೆ ಮಹತ್ವವನ್ನು ಪಠ್ಯೇತರ ಚಟವಟಿಕೆಗಳಿಗೂ ನೀಡಿತ್ತು. ವಿದ್ಯಾರ್ಥಿಗಳು ಬಿಡುವಿನ ವೇಳೆಯನ್ನು ಸೃಜನಶೀಲವಾಗಿ ಬಳಸಿಕೊಳ್ಳುವುದು ಮುಖ್ಯವಲ್ಲವೆ! ಅದಕ್ಕೆಂದೇ ಅವರನ್ನು ಅಡುಗೆಮನೆಯ ಹಾಗೂ ಹೊಲದ ಕೆಲಸ ಕಾರ್ಯಗಳಿಗೆ ವಿನಿಯೋಗಿಸಿಕೊಳ್ಳಲಾಗುತ್ತಿತ್ತು. ಡಿಗ್ನಿಟಿ ಆಫ್ ಲೇಬರ್! ಸಮಾಜದ ಸ್ವಾಸ್ಥ್ಯಕ್ಕೆ ಇದು ಅಗತ್ಯ.

ನಾನಿದ್ದ ವೇಳೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಜಿ.ಎಸ್. ಶಿವರುದ್ರಪ್ಪ, ಚಿದಾನಂದಮೂರ್ತಿ, ಜವರೇಗೌಡ ಸೇರಿದಂತೆ ಹಲವರು ಭಾಗವಹಿಸಿದರು. ಸೃಜನಶೀಲ ಮನಸ್ಸುಗಳಿಗೆ ಮಠವು ವಾತ್ಸಲ್ಯದ ತೊಟ್ಟಿಲಾಗಿತ್ತು. ಶಕುಂತಲಾದೇವಿ, ವಾಟಾಳ್ ನಾಗರಾಜ್, ರಾಜಶೇಖರ ಕರ್ಕಿಯಂಥವರು ವಾರಕ್ಕೊಬ್ಬರಾದರೂ ಮಠ ಸಂದರ್ಶಿಸುತ್ತಿದ್ದರಲ್ಲದೆ ವಿದ್ಯಾರ್ಥಿಗಳ ಸಮಕ್ಷಮ ಪ್ರತಿಭೆಯನ್ನು ಅನಾವರಣಗೊಳಿಸಿ ದಿಗ್ಭ್ರಮೆಗೊಳಿಸುತ್ತಿದ್ದರು. ದೈನಂದಿನ ಸಾಮೂಹಿಕ ಪ್ರಾರ್ಥನೆಯೂ ಸದಾಸ್ಮರಣೀಯ. ಶರಣ ಸಂಪ್ರದಾಯದ ಸಮವಸ್ತ್ರ ಧರಿಸಿ ಸಹಸ್ರಾರು ವಿದ್ಯಾರ್ಥಿಗಳ ಪ್ರಾರ್ಥನಾ ಸಮಾವೇಶ ನೋಡುವ ಸೊಗಸಿಗೆ ಪರ್ಯಾಯವಿಲ್ಲ. ಸಾಕ್ಷಾತ್ ಶ್ರೀಗಳು ಉಪಸ್ಥಿತರಿರುತ್ತಿದ್ದರಲ್ಲದೆ ಪ್ರತಿದಿವಸ ಒಂದಲ್ಲಾ ಒಂದು ಕಥೆಯನ್ನು ಪ್ರವಚಿಸುತ್ತಿದ್ದರು. ಅವರು ಹೇಳಿದ ನೂರಾರು ಕಥೆಗಳು ನನ್ನ ಸೃಜನಶೀಲತೆಯನ್ನು ಉದ್ದೀಪಿಸಿವೆ. ಶಿಕ್ಷಕನಾಗಿ ಮಕ್ಕಳ ಕಲ್ಪನಾ ಪ್ರತಿಭೆ ಅರಳಿಸಲು ಆ ಕಥೆಗಳು ನೆರವಾಗಿವೆ.

ಪೂಜ್ಯಶ್ರೀಗಳು ಹಗಲಿರುಳುಗಳ ನಡುವೆ ಗೆರೆ ಎಳೆದಿರಲಿಲ್ಲ. ಅತ್ಯಂತ ಕಡಿಮೆ ಆಹಾರ ಸೇವಿಸುತ್ತಿದ್ದ ಅವರು ಅಷ್ಟೇ ಪ್ರಮಾಣದಲ್ಲಿ ಯೋಗನಿದ್ದೆ ಮಾಡುತ್ತಿದ್ದರು. ಪ್ರತಿದಿವಸನಾಲ್ಕೈದರವೇಳೆ ಮಠದ ಆವರಣದಲ್ಲಿ ಏಕಾಂಗಿಯಾಗಿ ಸಂಚರಿಸುತ್ತಿದ್ದರು. ಅವರ ಪಾದುಕೆ ಸದ್ದು ಡಮರುಗದ ನಾದಕ್ಕಿಂತ ಮಿಗಿಲಿರುತ್ತಿತ್ತು. ಆ ಪಾಂಚಜನ್ಯ ಸದೃಶ ನಾದಕ್ಕೆ ವಿದ್ಯಾರ್ಥಿಗಳು ಎದ್ದು ಓದುವ ಅನಿವಾರ್ಯತೆ ಇತ್ತು.ಶ್ರೀಗಳು ಮಾತೃಹೃದಯಿಗಳು; ಜ್ವರಪೀಡಿತ ವಿದ್ಯಾರ್ಥಿಗಳ ಆರೋಗ್ಯವನ್ನು ಖುದ್ದು ಪರಾಂಬರಿಸುತ್ತಿದ್ದರು. ಎಷ್ಟೋ ವಿದ್ಯಾರ್ಥಿಗಳ ಮರುಪ್ರಯಾಣಕ್ಕೆ ಹಣ ಸಹ ನೀಡುತ್ತಿದ್ದರು.

* ಸಾಲಕ್ಕೆ ಬಡ್ಡಿ ಎನ್ನುವುದು ಕೃತಜ್ಞತೆಗಾಗಿ ಕೊಡುವ ಧನವಾಗಿರಬೇಕೆ ಹೊರತು, ಬಡವರ ರಕ್ತ ಹೀರುವ ಜಿಗಣೆಯಾಗಬಾರದು.

*ಒಂದು ಅಗುಳು ಅನ್ನದ ಹಿಂದೆ ಸಾವಿರಾರು ಜನರ ಪರಿಶ್ರಮವಿದೆ, ಆದ್ದರಿಂದ ಪ್ರಸಾದ ಸೇವಿಸುವಾಗ ವ್ಯರ್ಥ ಮಾಡುವುದು ಶ್ರೇಯಸ್ಕರವಲ್ಲ.

–ಡಾ. ಶಿವಕುಮಾರ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT