ಸಿದ್ಧರಿಂದ ಉದ್ಭವಿಸಿದ ಗಂಗೆ!

7

ಸಿದ್ಧರಿಂದ ಉದ್ಭವಿಸಿದ ಗಂಗೆ!

Published:
Updated:
Prajavani

ಹರದನಹಳ್ಳಿ ಶೂನ್ಯಪೀಠ ಪರಂಪರೆಯ ಗೋಸಲ ಸಿದ್ದೇಶ್ವರರು 1300–1350ರಲ್ಲಿ ದೇಶಸಂಚಾರ ಕೈಗೊಂಡು ಜನರಲ್ಲಿ ಧರ್ಮಜಾಗೃತಿ ಮೂಡಿಸಿದರು. ತಮ್ಮ ನೂರೊಂದು ವಿರಕ್ತ ಶಿಷ್ಯರೊಡನೆ ಬಂದ ಶ್ರೀಗಳು ಇದೇ ಸ್ಥಳದಲ್ಲಿ ತಪೋನುಷ್ಠಾನ ಮಾಡಿ ಸಿದ್ಧಗಂಗಾಮಠ ನಿರ್ಮಿಸಿದರು.

ಇಲ್ಲಿನ ಗವಿಗಳಲ್ಲಿ ತಪಸ್ಸನ್ನು ಮಾಡುತ್ತಿದ್ದ ವಿರಕ್ತರಲ್ಲಿ ವೃದ್ಧರೊಬ್ಬರು ಮಧ್ಯರಾತ್ರಿ ತೀವ್ರ ತೃಷೆಗೊಂಡರು. ಆಗ ಗುರುಗಳಾದ ಗೋಸಲ ಸಿದ್ದೇಶ್ವರರನ್ನು ಧ್ಯಾನಿಸಿದರು.

ಗುರುಗಳು ಹಳೆಯ ಮಠದಿಂದ ಹೊರಟು ಮಹಾಗವಿಗೆ ಬಂದು, ತಮ್ಮ ಮೊಣಕಾಲಿನಿಂದ ಬಂಡೆಗೆ ಅಪ್ಪಳಿಸಿದಾಗ ಅಲ್ಲಿ ಪಡುವು (ಬಿರುಕು) ಬಿದ್ದು ಗಂಗೆ ಉದ್ಭವವಾಯಿತು ಎಂಬ ಪ್ರತೀತಿ ಇದೆ. ಸಿದ್ಧರಿಂದ ಉದ್ಭವಿಸಿದ ಗಂಗೆಯೇ ಭಕ್ತರ ಇಷ್ಟಾರ್ಥ ನೆರವೇರಿಸುತ್ತ ಸಿದ್ಧಗಂಗೆಯಾಗಿ ಪ್ರಸಿದ್ಧಿಯಾಯಿತು. 1470–80ರಲ್ಲಿ ಯಡಿಯೂರು ಸಿದ್ಧಲಿಂಗೇಶ್ವರರು ತಪೋನುಷ್ಠಾನಗೈದು ಇಲ್ಲಿಯ ನೆಲ–ಜಲವನ್ನು ಪಾವನಗೊಳಿಸಿದರು ಎಂಬ ಐತಿಹ್ಯ ಇದೆ.

ಭಕ್ತರ ಅಭೀಷ್ಟೆ ನೆರವೇರಿಸುವ ಸಿದ್ಧಗಂಗೆಯ ಜಲೋದ್ಭವ ಪವಿತ್ರಕುಂಡದ ದರ್ಶನವನ್ನು ಭಕ್ತರು ಈಗಲೂ ಪಡೆಯುತ್ತಿದ್ದಾರೆ.

ಅಧ್ಯಾತ್ಮ ಸಾಧಕರ ತಾಣ: ಸಂತರು, ಶಿವಯೋಗಿಗಳ ಆಧ್ಯಾತ್ಮಿಕ ಸಾಧನೆಯ ತಾಣವಾದ ಸಿದ್ಧಗಂಗಾಮಠವು ಧಾರ್ಮಿಕ, ಪ್ರೇಕ್ಷಣೀಯ ಸ್ಥಳವೂ ಆಗಿವೆ. ಭಕ್ತರ ಅಭೀಷ್ಟೆ ನೆರವೇರಿಸುವ ಸಿದ್ಧಗಂಗಾ ಜಲೋದ್ಭವ ಪವಿತ್ರಕುಂಡ ದರ್ಶನ, ಶತಾಯುಷಿ ಶ್ರೀಗಳ ಒಡನಾಟದ ಪರಿಸರದಲ್ಲಿ ಓಡಾಡುವುದೇ ಪುಣ್ಯ ಎಂಬ ಭಾವನೆ ಆಸ್ತಿಕರಲ್ಲಿದೆ. ಈ ಭಾವನೆಯೇ ರಾಜ್ಯದ ವಿವಿಧೆಡೆಯಿಂದ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.

ಸಿದ್ಧಗಂಗೆ ಬೆಟ್ಟದ ಮೇಲಿನ ಜಲೋದ್ಭವ, ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನವು ಮಠಕ್ಕೆ ಬರುವ ಭಕ್ತರನ್ನು ಆಕರ್ಷಿಸುತ್ತಿದೆ.

ಸಿದ್ಧಗಂಗೆಯ ತಪೋಭೂಮಿಗೆ ಬರುವ ಪ್ರತಿಯೊಬ್ಬರೂ ಸಿದ್ಧಲಿಂಗೇಶ್ವರ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಅಲ್ಲಿಂದ ಕೆಳಗೆ ಇಳಿದರೆ 2014ರಲ್ಲಿ ನಿರ್ಮಿಸಿರುವ ದೊಡ್ಡ ಬಸವ ಹಾಗೂ ಶಿವಲಿಂಗ ಮತ್ತೊಂದು ಆಕರ್ಷಣೆ.

ಹಳೆಯ ಮಠ, ಉದ್ಧಾನ ಶಿವಯೋಗಿಗಳ ಗದ್ದುಗೆ, ಪಾಕಶಾಲೆ, ಅಟವೀಶ್ರೀಗಳ ಗದ್ದುಗೆ, ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ತೆಪ್ಪೋತ್ಸವ ನಡೆಯುವ ತಿಳಿ ನೀರಿನ ಕಲ್ಯಾಣಿ, ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನಾ ಸಭೆ, ಸಿದ್ಧಲಿಂಗೇಶ್ವರ ಪುಸ್ತಕ ಮಳಿಗೆ, ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಆವರಣ ಪ್ರೇಕ್ಷಕರು ನೋಡುವ ಪ್ರಮುಖ ಸ್ಥಳಗಳಾಗಿವೆ.

ದೂರದ ಊರುಗಳಿಂದ ಬರುವ ಭಕ್ತರು, ಯಾತ್ರಾರ್ಥಿಗಳು ಉಳಿದುಕೊಳ್ಳಲು ಯಾತ್ರಿ ನಿವಾಸದ ಸೌಲಭ್ಯವೂ ಇದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !