ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರಾರು ಮಠಾಧೀಶರು ಸಾಕ್ಷಿ

Last Updated 22 ಜನವರಿ 2019, 19:54 IST
ಅಕ್ಷರ ಗಾತ್ರ

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಪಂಡಿತಾರಾಧ್ಯ ಸ್ವಾಮೀಜಿ, ಬಾಬಾ ರಾಮದೇವ್‌, ಕನಕಪುರ ದೇಗುಲಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಸೇರಿದಂತೆ ನಾಡಿನ ನೂರಾರು ಪೀಠಾಧಿಪತಿಗಳು ಅಂತಿಮ ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿದ್ದರು.

ಕ್ರಿಯಾ ಸಮಾಧಿ ನಡೆದ ಭವನ ಹಾಗೂ ಅದರ ಮುಂಭಾಗ ಕಾವಿಧಾರಿಗಳಿಂದ ತುಂಬಿ ಹೋಗಿತ್ತು. ಕೆಲವು ಜನ ಸ್ವಾಮೀಜಿಗಳು ಅಂತಿಮ ನಮನ ಸಲ್ಲಿಸುವ ಸಂದರ್ಭದಲ್ಲಿ ಭಾವುಕರಾಗಿ ಕಣ್ಣೀರು ಹಾಕಿದರು.

ಕತ್ತಲಾದರೂ ನಿಲ್ಲದ ಜನಸಾಗರ: ಜಾತಿ, ಧರ್ಮ, ಮತಗಳ ಎಲ್ಲೆ ಮೀರಿ ನಾಡಿನ ಎಲ್ಲ ಭಾಗಗಳಿಂದ ಜನ ಸ್ವಾಮೀಜಿಗೆ ಅಂತಿಮ ಗೌರವ ಸಲ್ಲಿಸಲು ಬಂದಿದ್ದರು. ಅಂತಿಮ ವಿಧಿ ಪೂರೈಸಲು ಸಂಜೆ 4ರ ಬಳಿಕ ಜನರನ್ನು ಒಳಹೋಗದಂತೆ ತಡೆಯಲಾಯಿತು. ಆದರೆ, ರಾತ್ರಿ ಗದ್ದುಗೆಯ ದರ್ಶನವಾದರೂ ಸಿಕ್ಕೀತು ಎಂದು ಜನಸಾಗರವೇ ಮಠದ ಹೊರ ಆವರಣದಲ್ಲಿ ಕಾಯ್ದು ನಿಂತಿತ್ತು.

ಹಿರಿಯ ಪೊಲೀಸ್‌ ಅಧಿಕಾರಿಗಳ ಪ್ರಕಾರ ಸೋಮವಾರ ಹಾಗೂ ಮಂಗಳವಾರ ಎರಡೂ ದಿನ ಸೇರಿ ಸುಮಾರು ಹತ್ತು ಲಕ್ಷ ಜನ ಅಂತಿಮದರ್ಶನ ಪಡೆದಿದ್ದಾರೆ.

ಕ್ರಿಯಾ ಸಮಾಧಿಯ ವಿಧಿಗಳ ವೀಕ್ಷಣೆಗೆ ಮಠದ ಆವರಣದ ವಿವಿಧ ಕಡೆಗಳಲ್ಲಿ ಹಾಗೂ ರಾಗಿ ಹೊಲ ಪ್ರದೇಶದಲ್ಲಿ ಬೃಹತ್‌ ಎಲ್‌ಇಡಿ ಪರದೆಗಳಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಜನ ಭಕ್ತಿಭಾವದಿಂದ ಅಲ್ಲಿನ ನೋಟಗಳನ್ನು ಕಣ್ತುಂಬಿಕೊಂಡರು.

ಸ್ವಾಮೀಜಿಯ ಶರೀರ ವಿಭೂತಿ ಗಟ್ಟಿಗಳಲ್ಲಿ ಮರೆಯಾಗುತ್ತಾ ಹೋದಂತೆ ನೆರೆದ ಭಕ್ತಸಮೂಹ ಕಣ್ಣೀರು ಒರೆಸಿಕೊಳ್ಳುತ್ತಿದ್ದ ನೋಟ ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT