ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀ ಹೆಸರಲ್ಲಿ ಶಾಶ್ವತ ಯೋಜನೆ

ಪುಣ್ಯ ಸ್ಮರಣೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನುಡಿ
Last Updated 31 ಜನವರಿ 2019, 20:23 IST
ಅಕ್ಷರ ಗಾತ್ರ

ತುಮಕೂರು: ನಾಡಿನ ನೂರಾರು ಮಠಾಧೀಶರು, ಗಣ್ಯರು, ರಾಜಕಾರಣಿಗಳು, ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ಗುರುವಾರ ನಡೆಯಿತು.

ಗೋಸಲ ಸಿದ್ಧೇಶ್ವರರ ವೇದಿಕೆ ಮುಂಭಾಗದ ಸಭಾಂಗಣದಲ್ಲಿ ಭಕ್ತರು ಕಿಕ್ಕಿರಿದಿದ್ದರು. ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಯ ದರ್ಶನಕ್ಕೆ ರಾತ್ರಿಯವರೆಗೂ ಜನರು ಬರುತ್ತಲೇ ಇದ್ದರು.

ಬೆಳಿಗ್ಗೆ 9ಕ್ಕೆ ಪುಣ್ಯ ಸ್ಮರಣೆ ವಿಧ್ಯುಕ್ತವಾಗಿ ಆರಂಭವಾಯಿತು. ಮಠಾಧೀಶರು, ಗಣ್ಯರು ಗದ್ದುಗೆಯ ದರ್ಶನ ಪಡೆದು ಸ್ವಾಮೀಜಿ ಭಾವಚಿತ್ರದ ಮೆರವಣಿಗೆಗೆ ಜೊತೆಯಾದರು. ವೇದಿಕೆಯಲ್ಲಿದ್ದ 5.6 ಅಡಿ ಎತ್ತರದ ಸ್ವಾಮೀಜಿ ಅವರ ಕಂಚಿನ ಪುತ್ಥಳಿ ಗಮನ ಸೆಳೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘ಮುಖ್ಯಮಂತ್ರಿ ಆಗಿದ್ದಾಗ ಹಲವು ಸಲ ಸ್ವಾಮೀಜಿ ಭೇಟಿ ಮಾಡಿದ್ದೇನೆ. ಎಂದಿಗೂ ಮಠಕ್ಕೆ ಸೌಲಭ್ಯ ಬೇಕುಎಂದು ಕೋರಿದವರಲ್ಲ’ ಎಂದು ಸ್ಮರಿಸಿದರು.

ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸಿದ ವೈದ್ಯರು, ಮಠದ ಸಿಬ್ಬಂದಿಯನ್ನು ನೆನಪಿಸಿಕೊಳ್ಳುವಾಗ ಸಿದ್ಧಲಿಂಗ ಸ್ವಾಮೀಜಿ ಭಾವುಕರಾದರು.

ವೀರಾಪುರ ದತ್ತು: ‘ಸ್ವಾಮೀಜಿ ಹೆಸರಿನಲ್ಲಿ ಶಾಶ್ವತ ಯೋಜನೆ ರೂಪಿಸುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಆಗಿದೆ. ಶ್ರೀಗಳ ಹುಟ್ಟೂರು ಮಾಗಡಿ ತಾಲ್ಲೂಕಿನ ವೀರಾಪುರವನ್ನು ಸರ್ಕಾರ ದತ್ತು ಪಡೆದು ಅಭಿವೃದ್ಧಿಗೊಳಿಸಲಿದೆ’ ಎಂದು ಭರವಸೆ ನೀಡಿದರು.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ,ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ,ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀಶೈಲ ಪೀಠದ ಚನ್ನಸಿದ್ಧರಾಮದೇಶಿಕೇಂದ್ರ ಸ್ವಾಮೀಜಿ, ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ನುಡಿನಮನ ಸಲ್ಲಿಸಿದರು.

‘ಭಾರತರತ್ನ ನೀಡಲು ಶಕ್ತಿ ತುಂಬಿ’

ಪುಣ್ಯ ಸ್ಮರಣೆಯಲ್ಲಿ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡದ ವಿಚಾರವೂ ಪ್ರಸ್ತಾಪವಾಯಿತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬಂದರೆ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತರತ್ನ ಗೌರವ ನೀಡಲಾಗುವುದು ಎಂದು ಎಚ್‌.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ನುಡಿದರು.

‘ಮುಂದಿನ ಆರು ತಿಂಗಳಲ್ಲಿ ಕೇಂದ್ರ ಸರ್ಕಾರ ಬದಲಾವಣೆ ಆಗುವುದು ಖಚಿತ. ಆಗ ಸ್ವಾಮೀಜಿ ಅವರಿಗೆ ಭಾರತ ರತ್ನ ದೊರೆಕಿಸುವ ಬಗ್ಗೆ ನಾನು ಮತ್ತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಈಗಾಗಲೇ ತೀರ್ಮಾನಿಸಿದ್ದೇವೆ. ಇದನ್ನು ಜನರು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು ನಮಗೆ ಶಕ್ತಿ ತುಂಬಬೇಕು’ ಎಂದು ಕುಮಾರಸ್ವಾಮಿ ಕೋರಿದರು.

‘ಶ್ರೀಗಳಿಗೆ ಭಾರತ ರತ್ನ ನೀಡಿ ಎಂದು ಯಾರಲ್ಲೂ ಭಕ್ತರು ದಯವಿಟ್ಟು ಕೋರಬೇಡಿ. ಸ್ವಾಮೀಜಿ ವಿಶ್ವರತ್ನ’ ಎಂದರು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ.

ಮಠದ ಅಂಗಳದಲ್ಲಿ ಪುಟಿದ ರಾಜಕೀಯ

ಕಾರ್ಯಕ್ರಮದಲ್ಲಿ ರಾಜಕಾರಣದ ಮಾತುಗಳು, ವರಸೆಗಳು ಇಣುಕಿದ್ದವು. ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನು ಯಾರೇ ಪ್ರಸ್ತಾಪಿಸಿದರೂ ಸಭಿಕರ ಶಿಳ್ಳೆ, ಚಪ್ಪಾಳೆ ತೀವ್ರವಾಗುತ್ತಿತ್ತು. ಕಾರ್ಯಕ್ರಮದ ಆರಂಭದಲ್ಲಿಯೇ ಈ ದೃಶ್ಯಗಳು ಹೆಚ್ಚಿದವು. ಆಗ ಸಿದ್ಧಲಿಂಗ ಸ್ವಾಮೀಜಿ ಜನರತ್ತ ಸಮಾಧಾನದಿಂದ ಇರುವಂತೆ ಕೈ ಸನ್ನೆ ಮಾಡಿದರು.

ಭಾಷಣಕ್ಕೆ ತೆರಳುವಾಗ ಎಚ್‌.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಬಳಿ ಬಂದು ಕ್ಷಣ ಹೊತ್ತು ಚರ್ಚಿಸಿದರು. ಸಿದ್ದರಾಮಯ್ಯ ಅವರನ್ನು ಅಪ್ಪಿಕೊಂಡರು.

ವೀರಶೈವ–ಲಿಂಗಾಯತ ‘ಧರ್ಮ’ ವಿವಾದದಿಂದ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ಗೃಹಸಚಿವ ಎಂ.ಬಿ.ಪಾಟೀಲ್ ಕಾರ್ಯಕ್ರಮ ಮುಗಿಯುವವರೆಗೂ ಅಕ್ಕಪಕ್ಕದಲ್ಲಿಯೇ ಕುಳಿತು ನಗುಮುಖದಲ್ಲಿ ಮಾತನಾಡಿದರು.

‘ಶಿವಕುಮಾರ ಸ್ವಾಮೀಜಿ ಎಲ್ಲ ರಾಜಕೀಯ ಪಕ್ಷದವರನ್ನು ಸಮಾನವಾಗಿ ಕಂಡರು. ಈ ಮಠ ಜಾತ್ಯತೀತವಾದುದು. ಯಾವುದೇ ಕಾರಣಕ್ಕೂ ಇಲ್ಲಿ ರಾಜಕಾರಣ ಮಾಡುವುದಕ್ಕೆ ಸಿದ್ಧಲಿಂಗ ಸ್ವಾಮೀಜಿ ಅವಕಾಶ ಮಾಡಿಕೊಡಬಾರದು’ ಎಂದು ಸಂಸದ ವೀರಪ್ಪ ಮೊಯಿಲಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT