ತುಮಕೂರಿನ ತುಂಬೆಲ್ಲ ದಾಸೋಹ

7
ಭಕ್ತರಿಗೆ ದಿನಪೂರ್ತಿ ಪ್ರಸಾದ, ಪಾನಕ ವ್ಯವಸ್ಥೆ

ತುಮಕೂರಿನ ತುಂಬೆಲ್ಲ ದಾಸೋಹ

Published:
Updated:
Prajavani

ತುಮಕೂರು: ಶಿವಕುಮಾರ ಸ್ವಾಮೀಜಿಯವರ ಕ್ರಿಯಾ ಸಮಾಧಿ ನಡೆದ ಮಂಗಳವಾರ ನಗರದಲ್ಲಿ ಅಘೋಷಿತ ಬಂದ್ ಆವರಿಸಿತ್ತು. ಈ ವಾತಾವರಣದಲ್ಲೇ ದರ್ಶನಕ್ಕೆ ಬಂದ ಭಕ್ತರಿಗೆ ಏನೂ ಕೊರತೆ ಆಗದಂತೆ ನಗರದ ಅಪಾರ ಭಕ್ತಸಮೂಹ ನೋಡಿಕೊಂಡಿತು.

ನಗರದ ವಿವಿಧ ಸಂಘ ಸಂಸ್ಥೆಗಳು ಜಾತಿ ಧರ್ಮದ ಬೇಧವಿಲ್ಲದೇ ಇಡೀ ದಿನ ‘ಅನ್ನದಾಸೋಹ’ ನಡೆಸಿದವು. ಈ ಮೂಲಕ ಶಿವಕುಮಾರ ಸ್ವಾಮೀಜಿ ಅವರಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದವು.

ನಗರ ವಿವಿಧ ಬಡಾವಣೆಗಳಿಂದ, ಬೇರೆ ಊರುಗಳಿಂದ ಸಿದ್ಧಗಂಗಾ ಮಠಕ್ಕೆ ಸ್ವಾಮೀಜಿ ದರ್ಶನಕ್ಕೆ ತೆರಳುತ್ತಿದ್ದ ಭಕ್ತರನ್ನು ಕರೆದು ಅವರಿಗೆ ಪ್ರಸಾದ ನೀಡಿದರು. ಹಾಗೆಯೇ ಹೋಗುತ್ತಿದ್ದ ಭಕ್ತರಿದ್ದ ವಾಹನಗಳನ್ನೂ ತಡೆದು ಪ್ರಸಾದ ಸ್ವೀಕರಿಸಲು ಮನವಿ ಮಾಡಿ ಕರೆದುಕೊಂಡು ಹೋಗುತ್ತಿದ್ದುದು ಕಂಡು ಬಂತು.

ಜಾತಿ, ಮತ, ಧರ್ಮ ಇಲ್ಲದೇ ಅನ್ನ, ಜ್ಞಾನ ದಾಸೋಹ ಮಾಡಿದ ನಡೆದಾಡುವ ದೇವರಿಗೆ ಭಕ್ತರೂ ಅದೇ ರೀತಿ ತಮ್ಮ ಕೈಲಾದ ರೀತಿ ಸೇವೆ ಅರ್ಪಿಸಿ ಕೃತಾರ್ಥ ಭಾವ ತಳೆದರು. ಹಿಂದೂ, ಮುಸ್ಲಿಂ, ಜೈನ, ಕ್ರಿಶ್ಚಿಯನ್ ಸಮುದಾಯದ ಸಂಘಟನೆಗಳು ಪ್ರಸಾದದ ವ್ಯವಸ್ಥೆ ಮಾಡಿದ್ದವು.

ಕೆಲವರು ಪಲಾವ್, ಚಿತ್ರಾನ್ನ, ಪೊಂಗಲ್ ನೀಡಿದರೆ, ಹಲವರು ವಾಂಗಿಬಾತ್, ಅನ್ನ ಮೊಸರು ನೀಡಿದರು. ಮಜ್ಜಿಗೆ, ಪಾನಕ ವಿತರಣೆಯನ್ನೂ ಮಾಡಿದರು.

ಸ್ವಾಮೀಜಿ ಗೌರವಾರ್ಥ ಹೊಟೇಲ್‌ಗಳನ್ನು ಮಾಲೀಕರು ಬಂದ್ ಮಾಡಿದ್ದರು. ಆದರೆ ಸಂಘ ಸಂಸ್ಥೆಗಳು ಭಕ್ತರಿಗೆ ಮಾಡಿದ ಪ್ರಸಾದ ವ್ಯವಸ್ಥೆಗೆ ಕೈ ಜೋಡಿಸಿದರು.

ಬೆಳಿಗ್ಗೆಯಿಂದ ಸಂಜೆಯವರೆಗೂ ಕೆಲ ಕಡೆ ಚಹಾ, ಕಾಫಿ, ಹಾಲು ಬಿಟ್ಟರೆ ಮತ್ತೇನೂ ಸಿಗಲಿಲ್ಲ. ಮಂಡಿ ಪೇಟೆ, ಬಿ.ಎಚ್.ರಸ್ತೆ, ಎಸ್.ಎಸ್.ಪುರಂ, ಅಂತರಸನಹಳ್ಳಿ ಮಾರುಕಟ್ಟೆ, ಎಂ.ಜಿ.ರಸ್ತೆ, ಹೊರಪೇಟೆ ಸೇರಿದಂತೆ ಎಲ್ಲ ಕಡೆಗೂ ಅಂಗಡಿಗಳು ಬಂದ್ ಆಗಿದ್ದರಿಂದ ಬಿಕೋ ಎನ್ನುತ್ತಿದ್ದವು. ಅನೇಕ ಅಂಗಡಿಗಳ ಮುಂದೆ, ಪ್ರಮುಖ ವೃತ್ತಗಳಲ್ಲಿ ಸ್ವಾಮೀಜಿ ಅವರ ಭಾವಚಿತ್ರ ಇರುವ ಫ್ಲೆಕ್ಸ್‌ಗಳನ್ನು ಭಕ್ತರು ಹಾಗೂ ಅಭಿಮಾನಿಗಳು ಹಾಕಿದ್ದರು. 

ಎರಡು ಕಿ.ಮೀ ದೂರ ನಡೆದು ಬಂದ ಭಕ್ತರು

ಬಂಡೇಪಾಳ್ಯ, ಕ್ಯಾತ್ಸಂದ್ರದ ಕಡೆಯಿಂದ ಬರುವ ಭಕ್ತರು ಕನಿಷ್ಠ ಎರಡು ಕಿ.ಮೀ ನಡೆದು ಬಂದು ನಂತರ ಸರತಿಯಲ್ಲಿ ಮೂರ್ನಾಲ್ಕು ತಾಸು ನಿಂತು ದರ್ಶನ ಪಡೆದರು. ಸಾಗರೋಪಾದಿಯಲ್ಲಿ ಬರುತ್ತಿದ್ದ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

 

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !