ಶುಕ್ರವಾರ, ಡಿಸೆಂಬರ್ 6, 2019
17 °C

ಸಿದ್ಧಗಂಗಾಶ್ರೀ ಶೀಘ್ರ ವಾರ್ಡ್‌ಗೆ ಸ್ಥಳಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ತುಮಕೂರು: ಚೆನ್ನೈನ ರೇಲಾ ಇನ್‌ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್‌ನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರನ್ನು ಮಂಗಳವಾರ ರಾತ್ರಿ ಇಲ್ಲವೆ ಬುಧವಾರ ವಿಶೇಷ ವಾರ್ಡ್‌ಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.

‘ಸ್ವಾಮೀಜಿ ಅವರ ಆರೋಗ್ಯದಲ್ಲಿ ಮಹತ್ವದ ಚೇತರಿಕೆ ಕಂಡು ಬರುತ್ತಿದೆ. ಅವರ ಬಳಿಗೆ ಹೋದ ಎಲ್ಲರನ್ನು ಮಾತನಾಡಿಸುತ್ತಿದ್ದಾರೆ’ ಎಂದು ಸ್ವಾಮೀಜಿ ಅವರ ಜೊತೆಯಲ್ಲಿರುವ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಂಗಳವಾರ ರಾತ್ರಿ ಇಲ್ಲವೆ ಬುಧವಾರ ವಾರ್ಡ್‌ಗೆ ಸ್ಥಳಾಂತರಿಸಬಹುದು. ಕನಿಷ್ಠ ಐದಾರು ದಿನ ವಾರ್ಡ್‌ನಲ್ಲಿ ಇಟ್ಟುಕೊಳ್ಳುವ ಸಾಧ್ಯತೆ ಇದೆ. ಮಠಕ್ಕೆ ಕರೆದುಕೊಂಡು ಬಂದರೂ ಅಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ವಿಶ್ರಾಂತಿ ಅಗತ್ಯವಿದೆ’ ಎಂದರು.

ಚೆನ್ನೈನಲ್ಲಿದ್ದ ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಸೋಮವಾರ ಬೆಳಿಗ್ಗೆ ಮಠಕ್ಕೆ ಮರಳಿದ್ದಾರೆ. ಮತ್ತೆ ಮಂಗಳವಾರ ಚೆನ್ನೈಗೆ ತೆರಳಲಿದ್ದಾರೆ.

‘ವೈದ್ಯರು ಹೇಳಿದಂತೆ ಕೇಳುತ್ತೇವೆ. ಸ್ವಾಮೀಜಿ ದರ್ಶನಕ್ಕೆ ರಾಜ್ಯದ ವಿವಿಧ ಭಾಗಗಳ ಭಕ್ತರು ಆಸ್ಪತ್ರೆಗೆ ಹೋಗು
ತ್ತಿದ್ದಾರೆ. ಆದರೆ ಅವರ ಆರೋಗ್ಯದ ದೃಷ್ಟಿಯಿಂದ ದರ್ಶನಕ್ಕೆ ಅವಕಾಶ ಇಲ್ಲ’ ಎಂದು ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ಸಿದ್ಧಲಿಂಗೇಶ್ವರ ಸನ್ನಿಧಾನದಿಂದ ಪ್ರಸಾದ: ಸ್ವಾಮೀಜಿ ಶೀಘ್ರ ಗುಣಮುಖವಾಗಲಿ ಎಂದು ಕೋರಿ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ಭಕ್ತರು ಪ್ರಸಾದವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು. ಆದರೆ ಆಸ್ಪತ್ರೆಯ ಒಳಗೆ ಪ್ರಸಾದ ಕೊಂಡೊಯ್ಯಲು ಅಲ್ಲಿನ ಸಿಬ್ಬಂದಿ ಅವಕಾಶ ನೀಡಿಲ್ಲ. ಸೋಮವಾರ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದರು.

ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಡಿಕೆಶಿ

ಬೆಳಗಾವಿ: ಸಿದ್ಧಗಂಗಾಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ಚೆನ್ನೈನ ರೇಲಾ ಆಸ್ಪತ್ರೆ ಅಲ್ಪಸಂಖ್ಯಾತ ಆಡಳಿತ ಮಂಡಳಿಗೆ ಸೇರಿದ್ದರೂ ಶ್ರೀಗಳನ್ನು ಚೆನ್ನಾಗಿ ನೋಡಿಕೊಂಡಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಬಿಜೆಪಿ ಕೆಂಡಕಾರಿದೆ.

‘ವೈದ್ಯರು ದೇವರಿದ್ದಂತೆ. ಅಲ್ಲಿಯೂ ಧರ್ಮ ಬೆರೆಸಿರುವ ಶಿವಕುಮಾರ್ ರಾಜಕಾರಣ ಮಾಡಲು ಮುಂದಾಗಿದ್ದಾರೆ. ಇದು ಸರಿಯಲ್ಲ’ ಎಂದು ಬಿಜೆಪಿ ನಾಯಕರು ಹರಿಹಾಯ್ದಿದ್ದರು.

ಈ ಪ್ರಕರಣ ವಿವಾದವಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಶಿವಕುಮಾರ್, ‘ಶ್ರೀಗಳ ಕುರಿತಾದ ನನ್ನ ಹೇಳಿಕೆಯನ್ನು ಬಿಜೆಪಿಯವರು ತಿರುಚಿದ್ದಾರೆ. ಕೀಳು ರಾಜಕೀಯ ಮಾಡುತ್ತಿದ್ದಾರೆ. ಅಂತಹ ರಾಜಕಾರಣಕ್ಕೆ ನಾನು ಬಗ್ಗುವವನಲ್ಲ’ ಎಂದಿದ್ದಾರೆ.

‘ಒಂದು ಉತ್ತಮ ಆಸ್ಪತ್ರೆ ನಿರ್ಮಾಣ, ನಿರ್ವಹಣೆಗೆ ಯಾವುದೇ ಜಾತಿ, ಧರ್ಮದ ಲೇಪ ಇರುವುದಿಲ್ಲ ಎಂಬುದು ನನ್ನ ಮಾತಿನ ತಿರುಳಾಗಿತ್ತು, ನೈಜ ಭಾವನೆಯಾಗಿತ್ತು. ನನ್ನ ಹೇಳಿಕೆಯನ್ನು ಯಾರೂ ತಪ್ಪಾಗಿ ಭಾವಿಸುವುದು ಬೇಡ. ಒಂದೊಮ್ಮೆ ತಮ್ಮ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ’ ಎಂದೂ ಅವರು ತಿಳಿಸಿದ್ದಾರೆ.

‘ಅದು ಆಸ್ಪತ್ರೆಯಾಗಿದ್ದು, ಯಾವುದೇ ಅಲ್ಪಸಂಖ್ಯಾತರಿಗೆ ಸೇರಿದ ಜಾಗವಲ್ಲ. ಶಿವಕುಮಾರ್‌ ಹೋಗುವ ಮೊದಲು ನಾನೂ ಅಲ್ಲಿಗೆ ಹೋಗಿದ್ದೆ. ಅವರು ಯಾವ ಉದ್ದೇಶಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಗುಡಿ, ಗೋಪುರ, ಮಸೀದಿಗಳು ಪ್ರಾರ್ಥನೆಗಷ್ಟೆ. ಈ ವಿಷಯದಲ್ಲಿ ರಾಜಕಾರಣ ಮಾಡುವುದು ಬೇಡ’ ಎಂದು ಶಾಸಕ ವಿ. ಸೋಮಣ್ಣ ಹೇಳಿದರು.

‘ಆಸ್ಪತ್ರೆಗೆ ಹೋದ ಶಿವಕುಮಾರ್ ಆಸ್ಪತ್ರೆಗೆ ಹೋಗಿ ಕಾಂಗ್ರೆಸ್ ಬುದ್ಧಿ ತೋರಿಸಿದ್ದಾರೆ. ಸಚಿವರಾಗಿದ್ದವರು ಆಸ್ಪತ್ರೆಯಲ್ಲಿ ಹೋಗಿ ರಾಜಕಾರಣ ಮಾಡಿದ್ದು ಸರಿಯಲ್ಲ. ಅಂತಹ ಸ್ಥಳದಲ್ಲಿ ಜಾತಿ, ಧರ್ಮ ಏಕೆ’ ಎಂದು ಶಾಸಕ ಆರ್‌. ಅಶೋಕ್ ಪ್ರಶ್ನಿಸಿದರು.

ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು ಎಂಬುದೇ ಸಚಿವರಿಗೆ ಗೊತ್ತಿಲ್ಲ. ಆಸ್ಪತ್ರೆ ಹಾಗೂ ಶ್ರೀಗಳ ವಿಷಯದಲ್ಲಿ ಧರ್ಮ ತಂದಿದ್ದು ಸರಿಯಲ್ಲ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು