ಸಿದ್ಧಗಂಗಾಶ್ರೀ ಆರೋಗ್ಯ ಸ್ಥಿರ, ಭಕ್ತರಲ್ಲಿ ಆತಂಕ ಬೇಡ: ವೈದ್ಯರ ಹೇಳಿಕೆ

7

ಸಿದ್ಧಗಂಗಾಶ್ರೀ ಆರೋಗ್ಯ ಸ್ಥಿರ, ಭಕ್ತರಲ್ಲಿ ಆತಂಕ ಬೇಡ: ವೈದ್ಯರ ಹೇಳಿಕೆ

Published:
Updated:

ತುಮಕೂರು: ‘ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದ್ದು, ಬುಧವಾರ ರಾತ್ರಿ ರಕ್ತದೊತ್ತಡ ಮತ್ತು ಹೃದಯ ಬಡಿತದಲ್ಲಿ ಸ್ವಲ್ಪ ಏರುಪೇರಾಗಿತ್ತು. ಈಗ ಸ್ಥಿರವಾಗಿದೆ. ಭಕ್ತರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಸ್ವಾಮೀಜಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಪರಮೇಶ್ ಹೇಳಿದರು.

‘ಅಲ್ಬುಮಿನ್ ಪೋಷಕಾಂಶ ಪ್ರಮಾಣ 2.7 ಇದೆ. ರೋಗನಿರೋಧಕ ಔಷಧಿ ನೀಡಲಾಗುತ್ತಿದೆ. ಕಿರಿಯ ಸ್ವಾಮೀಜಿ ಶ್ರೀಗಳ ಪಕ್ಕ ಕುಳಿತು ಇಷ್ಠ ಲಿಂಗ ಪೂಜೆ ನೆರವೇರಿಸಿದರು’ ಎಂದು ತಿಳಿಸಿದರು.

ಕಿರಿಯಶ್ರೀಗಳಿಗೆ ಧೈರ್ಯ ತುಂಬುವ ಹೊಣೆ ನಮ್ಮದು
ಡಾ.ಶಿವಕುಮಾರ ಸ್ವಾಮೀಜಿ ಆರೋಗ್ಯ ಸ್ಥಿರವಾಗಿದೆ. ಅವರು ಅನಾರೋಗ್ಯಕ್ಕೀಡಾಗಿರುವುದು ನೋವಿನ ಸಂಗತಿ ಎಂದು ಚಿತ್ರದುರ್ಗದ ಮುರುಘಾ ಶರಣರು ನುಡಿದರು.

‘ಶ್ರೀಗಳು ಚಿಕಿತ್ಸೆಗೆ ಸ್ವಂದಿಸುತ್ತಿದ್ದಾರೆ ಎಂದು ವೈದ್ಯರು ಹೇಳುತ್ತಿದ್ದಾರೆ. ಶಿವಕುಮಾರ ಸ್ವಾಮೀಜಿ ಅವರ ಕಾಯಕ ಸೇವೆ ನಮಗೆಲ್ಲ ಸ್ಪೂರ್ತಿದಾಯಕ’ ಎಂದರು.

ಇಂತಹ ಸಂದರ್ಭದಲ್ಲಿ ಕಿರಿಯಶ್ರೀಗಳಿಗೆ ಧೈರ್ಯ ತುಂಬುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಹೇಳಿದರು.

ಭಕ್ತರು ಆತಂಕಪಡುವ ಅಗತ್ಯವಿಲ್ಲ: ಗೃಹ ಸಚಿವ ಎಂ.ಬಿ.ಪಾಟೀಲ

‘ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದೆ. ಭಕ್ತರು ಆತಂಕಪಡುವ ಅಗತ್ಯವಿಲ್ಲ . ಏನು ಬೇಕಾದರೂ ಪವಾಡ ಆಗಬಹುದು’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಸ್ವಾಮೀಜಿ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಶ್ರೀಗಳು ಅಭೂತಪೂರ್ವ ಶಕ್ತಿಯುಳ್ಳವರು. ಯಾರೂ ಆತಂಕಪಡುವ ಅಗತ್ಯವಿಲ್ಲ’ ಎಂದರು.

ಭಕ್ತರು ಸಹಕರಿಸಬೇಕು: ಉ‍ಪ ಮುಖ್ಯಮಂತ್ರಿ
ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದೆ. ಸೋಂಕು ತಗಲುವ ಕಾರಣಕ್ಕೆ ಯಾವ ಭಕ್ತರಿಗೂ ದರ್ಶನಕ್ಕೆ ಅವಕಾಶವಿಲ್ಲ. ಭಕ್ತರು ಸಹಕರಿಸಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದೆ. ರಕ್ತದೊತ್ತಡ, ಹೃದಯ ಬಡಿತ ಸ್ಥಿರವಾಗಿದೆ. ಭಕ್ತರು ಆತಂಕಪಡುವ ಅಗತ್ಯವಿಲ್ಲ ಎಂದರು.

ಸಿದ್ಧಗಂಗಾಶ್ರೀಗಳು ಇಚ್ಛಾಮರಣಿಗಳು; ಯಡಿಯೂರಪ್ಪ
‘ಡಾ.ಶಿವಕುಮಾರ ಸ್ವಾಮೀಜಿ ಆರೋಗ್ಯ ಸ್ಥಿರವಾಗಿದೆ. ಅವರು ಇಚ್ಛಾಮರಣಿಗಳು’ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದರು.

‘ಶ್ರೀಗಳಿಗೆ ಹೆಚ್ಚಿನ ಇಂಜೆಕ್ಷನ್ ಕೊಟ್ಟು ತೊಂದರೆ ಕೊಡುವುದು ಬೇಡ ಎಂದು ವೈದ್ಯರು ಅಭಿಪ್ರಾಯ ತಿಳಿಸಿದ್ದಾರೆ. ಈ ದಿನ ಸಂಜೆಯವರೆಗೆ ಮಠದಲ್ಲಿಯೇ ಇರುತ್ತೇನೆ. ಕಿರಿಯ ಶ್ರೀಗಳು ಬಹಳ ನೊಂದಿದ್ದಾರೆ. ಅವರಿಗೆ ಸಮಾಧಾನ ಮಾಡುತ್ತೇವೆ. ಸಂಜೆ ಸುತ್ತೂರುಶ್ರೀಗಳು ಮಠಕ್ಕೆ ಬರಲಿದ್ದಾರೆ. ಅವರೊಂದಿಗೆ ಚರ್ಚಿಸಿ ಮುಂದಿನ ಚಿಕಿತ್ಸೆಯ ಬಗ್ಗೆ ತೀರ್ಮಾನಿಸುತ್ತೇವೆ’ ಎಂದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !