37 ವರ್ಷಗಳ ಹಿಂದೆ ನಿಗದಿಯಾದ ಜಾಗದಲ್ಲಿ ಕ್ರಿಯಾ ಸಮಾಧಿ

7

37 ವರ್ಷಗಳ ಹಿಂದೆ ನಿಗದಿಯಾದ ಜಾಗದಲ್ಲಿ ಕ್ರಿಯಾ ಸಮಾಧಿ

Published:
Updated:
Prajavani

ತುಮಕೂರು: ಶಿವಕುಮಾರ ಸ್ವಾಮೀಜಿ ಅವರ ಕ್ರಿಯಾ ಸಮಾಧಿ ಮಂಗಳವಾರ ಮಧ್ಯಾಹ್ನ 4.30ಕ್ಕೆ ವೀರಶೈವ– ಲಿಂಗಾಯತ ಸಂಪ್ರದಾಯದ ಪ್ರಕಾರ ಸಿದ್ಧಗಂಗಾ ಮಠದ ಆವರಣದಲ್ಲಿ ನಿರ್ಮಿಸಿರುವ ಭವನದಲ್ಲಿ ಜರುಗಲಿದೆ.

ಸ್ವಾಮೀಜಿ ಕ್ರಿಯಾ ಸಮಾಧಿಗಾಗಿಯೇ ಅಂದಾಜು ₹3 ಕೋಟಿ ವೆಚ್ಚದಲ್ಲಿ ಭವನವನ್ನು ನಿರ್ಮಿಸಲಾಗಿದೆ. ಶಿವಕುಮಾರ ಶ್ರೀಗಳ ಗುರುಗಳಾದ ಉದ್ಧಾನ ಶಿವಯೋಗಿಗಳ ಗದ್ದುಗೆಯ ಪಕ್ಕದಲ್ಲಿಯೇ ಭವನ ಇದೆ. ಸ್ವಾಮೀಜಿ ನಿತ್ಯ ಓಡಾಡುತ್ತಿದ್ದ ತೇರಿನ ಬೀದಿಯಲ್ಲೇ ಈ ಭವನ ಇದೆ.

1982ರಲ್ಲಿ ಕನಕಪುರದ ದೇಗುಲ ಮಠದ ಇಮ್ಮಡಿ ಮಹಾಲಿಂಗ ಸ್ವಾಮೀಜಿ ಈ ಭವನ ನಿರ್ಮಾಣಕ್ಕೆ ಚಾಲನೆ ನೀಡಿದರು. ಮಹಾಲಿಂಗ ಸ್ವಾಮೀಜಿ ಮತ್ತು ಶಿವಕುಮಾರ ಸ್ವಾಮೀಜಿ, ಉದ್ಧಾನ ಶಿವಯೋಗಿಗಳ ಶಿಷ್ಯರಾಗಿದ್ದರು. ಮಹಾಲಿಂಗ ಸ್ವಾಮೀಜಿ ಅವರ ಕೈಯಿಂದಲೇ ಭವನಕ್ಕೆ ಭೂಮಿ ಪೂಜೆ ಮಾಡಿಸಬೇಕು ಎನ್ನುವ ಆಸೆ ಶಿವಕುಮಾರ ಶ್ರೀಗಳದ್ದಾಗಿತ್ತು. ಎರಡು ವರ್ಷದ ಹಿಂದೆ ಭವನದ ಕಾಮಗಾರಿ ಪೂರ್ಣವಾಗಿತ್ತು. ಭವನದ ಮೇಲಿನ ನಾಲ್ಕು ಮೂಲೆಗಳಲ್ಲಿ ಕರಡಿಗೆಯ ರೂಪವನ್ನು ಕೆತ್ತಲಾಗಿದೆ. ಭವನವನ್ನು ಪೂರ್ಣವಾಗಿ ಅಮೃತಶಿಲೆಯಿಂದ ನಿರ್ಮಿಸಲಾಗಿದೆ.

ಭವನ ನಿರ್ಮಾಣವಾಗಿರುವ ಸ್ಥಳದಲ್ಲಿ ದೊಡ್ಡ ಆಲದ ಮರ ಇತ್ತು. ಆ ಮರ ಕಡಿದು ಭವನ ನಿರ್ಮಿಸಲು ಶಿವಕುಮಾರ ಸ್ವಾಮೀಜಿ ಒಪ್ಪಿರಲಿಲ್ಲ. ವಿಸ್ಮಯ ಎನ್ನುವಂತೆ 1982ರಲ್ಲಿ ಬಿರುಗಾಳಿ ಮಳೆಗೆ ಸಿಕ್ಕಿ ಆಲದ ಮರ ಧರೆಗುರುಳಿತು. ಭವನ ನಿರ್ಮಾಣಕ್ಕೆ ಹಾದಿ ಸುಗಮವಾಯಿತು.

ಸಮಾಧಿಗೆ ವಿಭೂತಿ: ಭವನದ ಗರ್ಭಗುಡಿಯಲ್ಲಿ ಮಂಗಳವಾರ ಬೆಳಗಿನಿಂದಲೇ ಪೂಜಾ ವಿಧಿವಿಧಾನಗಳು ನಡೆಯಲಿವೆ. ಸ್ಥಳಶುದ್ಧಿ, ಪಂಚಕಳಸ ಪೂಜೆ, ಅಷ್ಟ ದಿಕ್ಪಾಲಕರು ಹಾಗೂ ಸಪ್ತರ್ಷಿಗಳ ಪೂಜೆಗಳು ನಡೆಯಲಿವೆ. ಸಮಾಧಿಗೆ ವಿಭೂತಿ ಗಟ್ಟಿ ಹಾಗೂ ಉಪ್ಪನ್ನು ಬಳಸಲಾಗುತ್ತದೆ ಎಂದು ಸಿದ್ಧಗಂಗಾ ಮಠದ ಅರ್ಚಕ ಎಂ.ಎನ್‌.ಚಂದ್ರಶೇಖರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 59

  Happy
 • 1

  Amused
 • 10

  Sad
 • 4

  Frustrated
 • 7

  Angry

Comments:

0 comments

Write the first review for this !