ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತಿಮ ಕ್ಷಣದ ಆ ನೋಟಗಳು...

Last Updated 23 ಜನವರಿ 2019, 2:26 IST
ಅಕ್ಷರ ಗಾತ್ರ

ಸಕಲ ಸರ್ಕಾರಿ ಗೌರವ

ಕ್ರಿಯಾ ಸಮಾಧಿಯ ವಿಧಿ ವಿಧಾನ ಆರಂಭಿಸುವ ಮುನ್ನ ಅಗಲಿದ ಸ್ವಾಮೀಜಿಗೆ ಸಕಲ ಸರ್ಕಾರಿ ಗೌರವವನ್ನು ಸಲ್ಲಿಸಲಾಯಿತು. ಅವರ ಶರೀರಕ್ಕೆ ರಾಷ್ಟ್ರಧ್ವಜವನ್ನು ಹೊದಿಸಲಾಯಿತು. ಗಣ್ಯರು ಅಂತಿಮ ನಮನ ಸಲ್ಲಿಸಿದ ಬಳಿಕ ಕುಶಾಲ ತೋಪುಗಳನ್ನು ಹಾರಿಸಲಾಯಿತು. ರಾಷ್ಟ್ರಗೀತೆಯನ್ನೂ ನುಡಿಸಲಾಯಿತು. ಬಳಿಕ ಸ್ವಾಮೀಜಿ ಶರೀರಕ್ಕೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ತೆಗೆದು ಸಿದ್ಧಲಿಂಗ ಸ್ವಾಮೀಜಿ ಅವರಿಗೆ ಹಸ್ತಾಂತರಿಸಲಾಯಿತು.

ಸರ್ಪಗಾವಲು, ಭಾರಿ ಬಂದೋಬಸ್ತ್‌

ಕ್ರಿಯಾ ಸಮಾಧಿಯ ಎಲ್ಲ ಕಾರ್ಯಗಳು ಸಾಂಗವಾಗಿ ನೆರವೇರಲು ಮಠದ ಆವರಣದ ಸುತ್ತ ಭಾರಿ ಪ್ರಮಾಣದ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ‘ಪೊಲೀಸ್‌ ಗೋಡೆ’ಯನ್ನೇ ನಿರ್ಮಿಸಲಾಗಿತ್ತು. ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿರಾಜು ಸ್ಥಳದಲ್ಲಿಯೇ ಹಾಜರಿದ್ದು ಭದ್ರತಾ ವ್ಯವಸ್ಥೆಯ ಉಸ್ತುವಾರಿಯನ್ನು ನೋಡಿಕೊಂಡರು.

ಅಂತ್ಯಕ್ರಿಯೆಯಲ್ಲಿ ಗಣ್ಯರ ದಂಡು

ಶಿವಕುಮಾರ ಸ್ವಾಮೀಜಿ ಅವರ ಕ್ರಿಯಾ ಸಮಾಧಿಗೆ ಸಾಕ್ಷಿಯಾಗಲು ಗಣ್ಯರ ದಂಡೇ ಸಿದ್ಧಗಂಗಾ ಕ್ಷೇತ್ರಕ್ಕೆ ದಾಂಗುಡಿ ಇಟ್ಟಿತ್ತು. ಅವರನ್ನು ಕರೆತರಲು ಹೆಲಿಕಾಪ್ಟರ್‌ಗಳು ಬೆಂಗಳೂರಿನಿಂದ ತುಮಕೂರಿಗೆ ಎಡೆಬಿಡದೆ ಹಾರಾಡಿದವು.

ಅಂತ್ಯಕ್ರಿಯೆಗೆ ಸಾಕ್ಷಿಯಾದವರು:ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಡಿ.ವಿ. ಸದಾನಂದಗೌಡ, ಪುದುಚೆರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಹಿರಿಯ ಮುಖಂಡ ಎಸ್‌.ಎಂ.ಕೃಷ್ಣ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಸಂಸದ ವೀರಪ್ಪ ಮೊಯಿಲಿ, ಸಚಿವರಾದ ಎಂ.ಬಿ.ಪಾಟೀಲ, ಡಿ.ಕೆ.ಶಿವಕುಮಾರ್‌, ಆರ್‌.ವಿ.ದೇಶಪಾಂಡೆ, ಸಾ.ರಾ. ಮಹೇಶ್‌, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ವಿ.ಸೋಮಣ್ಣ.

ನೂಕುನುಗ್ಗಲು; 11 ಮಂದಿಗೆ ಗಾಯ

ಶಿವಕುಮಾರ ಸ್ವಾಮೀಜಿ ದರ್ಶನಕ್ಕೆ ಬಂದ ವೇಳೆ 11 ಭಕ್ತರು ನೂಕುನುಗ್ಗಲಿನಲ್ಲಿ ಗಾಯಗೊಂಡಿದ್ದಾರೆ. ಇದರಲ್ಲಿ ಇಬ್ಬರ ಕಾಲಿನ ಮೂಳೆ ಮುರಿತವಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಗೊಂಡವರಲ್ಲಿ ಬಹುತೇಕರು ಬೆಂಗಳೂರು ಹಾಗೂ ಸುತ್ತಮುತ್ತಲಿನ ಗ್ರಾಮದವರಾಗಿದ್ದಾರೆ. ಸೋಮವಾರ 5 ಮಂದಿ ಪೊಲೀಸರ ಬ್ಯಾರಿಕೇಡ್ ದಾಟುವಾಗ, ನೂಕುನುಗ್ಗಲಿನಲ್ಲಿ ಬಿದ್ದು ಗಾಯಗೊಂಡಿದ್ದರು. ಮಂಗಳವಾರ 4 ಮಂದಿ ಗಾಯಗೊಂಡಿದ್ದಾರೆ. ಎಲ್ಲರಿಗೂ ಜಿಲ್ಲಾ ಆಸ್ಪತ್ರೆಯ ಆಂಬುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ವೀರಭದ್ರಯ್ಯ ತಿಳಿಸಿದ್ದಾರೆ.

ಜಾಮರ್ ಫಜೀತಿ; ಸಂಪರ್ಕಕ್ಕೆ ಪರದಾಟ

ತುಮಕೂರು: ಭದ್ರತಾ ಮುನ್ನೆಚ್ಚರಿಕೆ ಕ್ರಮವಾಗಿ ಮೊಬೈಲ್ ದೂರಸಂಪರ್ಕ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಸಿದ್ಧಗಂಗಾಮಠದಲ್ಲಿ ಅಳವಡಿಸಿದ್ದ ‘ಜಾಮರ್‘ ದರ್ಶನಕ್ಕೆ ಬಂದ ಭಕ್ತರು, ಮಾಧ್ಯಮಗಳಿಗೆ ಹಾಗೂ ಮಠದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸುತ್ತಿದ್ದ ಅಧಿಕಾರಿಗಳು, ಉಸ್ತುವಾರಿ ವಹಿಸಿಕೊಂಡವರಿಗೆ ಫಜೀತಿ ಮಾಡಿತು.

ಸೋಮವಾರ ಮಧ್ಯಾಹ್ನದಿಂದ ಮಂಗಳವಾರ ಸ್ವಾಮೀಜಿ ಕ್ರಿಯಾ ಸಮಾಧಿ ಪ್ರಕ್ರಿಯೆ ಮುಗಿಯುವವರೆಗೂ ಜಾಮರ್‌ ನಿಂದ ಸಂಪರ್ಕ ಅಡಚಣೆಯನ್ನು ಸಾರ್ವಜನಿಕರು ಎದುರಿಸಿದರು. ಆರೋಗ್ಯ ಇಲಾಖೆ ಅಂಬುಲೆನ್ಸ್, ಕಾರ್ಯಕರ್ತರಿಗೂ ತೊಂದರೆಯಾಯಿತು. ಯಾರು ಎಲ್ಲಿದ್ದಾರೆ? ಎಂಬುದೇ ಗೊತ್ತಾಗದ ಸ್ಥಿತಿ ಅನುಭವಿಸಿದರು.

ಭಾರತ ರತ್ನ; ಭಿತ್ತಿ ಪತ್ರ ಹಿಡಿದ ಭಕ್ತರು

ತುಮಕೂರು: ಶಿವಕುಮಾರ ಸ್ವಾಮೀಜಿ ಅವರಿಗೆ ‘ಭಾರತ ರತ್ನ’ ಗೌರವ ನೀಡಬೇಕು ಎನ್ನುವ ಕೂಗು ಅಂತಿಮ ದರ್ಶನದ ವೇಳೆ ಪ್ರಬಲವಾಗಿ ಕೇಳಿ ಬಂದಿತು. ಬಹುತೇಕ ರಾಜಕೀಯ ನಾಯಕರು, ಗಣ್ಯರು ಕೇಂದ್ರ ಸರ್ಕಾರ ಈ ಗೌರವವನ್ನು ಸ್ವಾಮೀಜಿ ಅವರಿಗೆ ನೀಡಬೇಕು ಎಂದು ಪ್ರತಿಪಾದಿಸಿದರು.

ಅಂತಿಮ ದರ್ಶನಕ್ಕೆ ಬಂದಿದ್ದ ಕೆಲವು ಭಕ್ತರು ‘ನಡೆದಾಡುವ ದೇವರಿಗೆ ಕೊನೆಗೂ ಭಾರತ ರತ್ನ ಕೊಡಲೇ ಇಲ್ಲ ಯಾಕೆ’ ಎಂದು ಭಿತ್ತಿ ಪತ್ರಗಳನ್ನು ಹಿಡಿದು ಗಮನ ಸೆಳೆದರು.

* ಶಿವಕುಮಾರ ಸ್ವಾಮೀಜಿ ಅವರದು ಹಿಮಾಲಯ ಸದೃಶ ವ್ಯಕ್ತಿತ್ವ. ಅವರು ಸಂತರ ಮಹಾಸಂತ. ಈ ರತ್ನಕ್ಕೆ ‘ಭಾರತ ರತ್ನ’ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ

-ಬಾಬಾ ರಾಮದೇವ್‌

* ಜೀವಿತಾವಧಿಯಲ್ಲೇ ಸ್ವಾಮೀಜಿ ಅವರನ್ನು ಭೇಟಿಮಾಡುವ ಅಭಿಲಾಷೆಯಿತ್ತು. ಆಗಲಿಲ್ಲ. ನಮ್ಮ ಪಕ್ಷದ(ಕಾಂಗ್ರೆಸ್‌) ಎಲ್ಲ ರಾಷ್ಟ್ರೀಯ ನಾಯಕರ ಪರವಾಗಿ ಬಂದಿದ್ದೇನೆ

- ವಿ.ನಾರಾಯಣಸ್ವಾಮಿ, ಪುದುಚೆರಿ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT