ಚೆನ್ನೈ ಆಸ್ಪತ್ರೆಯಲ್ಲಿ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಗೆ ಚಿಕಿತ್ಸೆ

7
ರೇಲಾ ಇನ್‌ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್‌ನಲ್ಲಿ ನಾಲ್ಕು ದಿನ ಚಿಕಿತ್ಸೆ

ಚೆನ್ನೈ ಆಸ್ಪತ್ರೆಯಲ್ಲಿ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಗೆ ಚಿಕಿತ್ಸೆ

Published:
Updated:

ತುಮಕೂರು/ಚೆನ್ನೈ: ಚಿಕಿತ್ಸೆಗಾಗಿ ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಶುಕ್ರವಾರ ಚೆನ್ನೈನ ರೇಲಾ ಇನ್‌ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್‌ಗೆ ದಾಖಲಿಸಲಾಗಿದೆ. ಏರ್‌ ಅಂಬುಲೆನ್ಸ್‌ನಲ್ಲಿ ಶ್ರೀಗಳನ್ನು ಮಧ್ಯಾಹ್ನ 2ರ ಹೊತ್ತಿಗೆ ಚೆನ್ನೈಗೆ ಕರೆತರಲಾಯಿತು. 

‘ಚೆನ್ನೈ ಆಸ್ಪತ್ರೆಯಲ್ಲಿ ನಾಲ್ಕು ದಿನ ಚಿಕಿತ್ಸೆ ನೀಡಬೇಕಾಗಬಹುದು. ತಪಾಸಣೆ ಬಳಿಕ ಹೇಗೆ ಚಿಕಿತ್ಸೆ ನೀಡಬೇಕು ಎಂಬ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ಡಾ.ಪರಮೇಶ್ ತಿಳಿಸಿದರು. 

ರೇಲಾ ಇನ್‌ಸ್ಟಿಟ್ಯೂಟ್‌ನಲ್ಲಿ ಸ್ವಾಮೀಜಿಗೆ ಆಸ್ಪತ್ರೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಮೊಹಮ್ಮದ್‌ ರೇಲಾ ಅವರ ನೇತೃತ್ವದ ತಂಡ ಚಿಕಿತ್ಸೆ ನೀಡುತ್ತಿದೆ. ಪಿತ್ತಜನಕಾಂಗದ ಬೈಪಾಸ್‌ ಸರ್ಜರಿಯು ಸ್ವಾಮೀಜಿಯವರ ಆರೋಗ್ಯ ಸಮಸ್ಯೆಗೆ ಪರಿಹಾರವಾಗಿ ಕಂಡುಬಂದಿದ್ದರೂ, ಅವರ ವಯಸ್ಸನ್ನು ಗಮನದಲ್ಲಿ ಇಟ್ಟುಕೊಂಡು ಇದನ್ನು ಮಾಡಬೇಕೇ ಬೇಡವೇ ಎಂಬುದನ್ನು ವೈದ್ಯರ ತಂಡ ನಿರ್ಧರಿಸಲಿದೆ. 

‘ಪಿತ್ತಜನಕಾಂಗ ಹಾಗೂ ಪಿತ್ತನಾಳದ ಹೆಚ್ಚಿನ ಚಿಕಿತ್ಸೆಗಾಗಿ ಸ್ವಾಮೀಜಿಯವರನ್ನು ಇಲ್ಲಿಗೆ ಕರೆತರಲಾಗಿದೆ’ ಎಂದು ಆಸ್ಪತ್ರೆ ಶುಕ್ರವಾರ ರಾತ್ರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. 

‘ಶ್ರೀಗಳಿಗೆ ಈಗಾಗಲೇ ಹಲವು ಬಾರಿ ಎಂಡೋಸ್ಕೊಪಿ ನಡೆಸಲಾಗಿದೆ. ಅವರ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಲಾಗುತ್ತಿದೆ. ಲಿವರ್ ಸೋಂಕಿನ ಚಿಕಿತ್ಸೆ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ. ಬದಲಿ ಚಿಕಿತ್ಸೆಯ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ’ ಎಂದು ಡಾ. ರೇಲಾ ಅವರು ತಿಳಿಸಿದ್ದಾರೆ. 

ಏರ್ ಆಂಬುಲೆನ್ಸ್

ಶಿವಕುಮಾರ ಸ್ವಾಮೀಜಿ ಅವರನ್ನು ಶುಕ್ರವಾರ ಏರ್ ಆಂಬುಲೆನ್ಸ್ ಮೂಲಕ ಚೆನ್ನೈಗೆ ಕರೆದೊಯ್ಯಲಾಯಿತು. ತುಮಕೂರು ಸಮೀಪದ ಕ್ಯಾತ್ಸಂದ್ರದಲ್ಲಿರುವ ಸಿದ್ದಗಂಗ ಮಠದಿಂದ ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ರಸ್ತೆಮಾರ್ಗದಲ್ಲಿ ಕರೆತರಲಾಯಿತು.

ಸ್ವಾಮೀಜಿ ಇದ್ದ ಹೆಲಿಕಾಪ್ಟರ್ ಚೆನ್ನೈ ವಿಮಾನ ನಿಲ್ದಾಣ ತಲುಪಿ, ಅಲ್ಲಿಂದ ಡಾ.ರೇಲಾ ಇನ್‌ಸ್ಟಿಟ್ಯೂಟ್ ಅಂಡ್ ಮೆಡಿಕಲ್ ಸೆಂಟರ್‌ಗೆ ರಸ್ತೆ ಮಾರ್ಗದಲ್ಲಿ ತೆರಳಿದರು. ಸ್ವಾಮೀಜಿ ಇರುವ ಆಂಬುಲೆನ್ಸ್ ಸಂಚಾರಕ್ಕಾಗಿ ಗ್ರೀನ್ ಕಾರಿಡಾರ್ (ಟ್ರಾಫಿಕ್‌ ಮುಕ್ತ) ರೂಪಿಸಲಾಗಿತ್ತು. ಚೆನ್ನೈನ ಆಸ್ಪತ್ರೆಯಲ್ಲಿ ಯಕೃತ್ ನಾಳದ ಸೋಂಕಿಗೆ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ.


ಶಿವಕುಮಾರ ಸ್ವಾಮೀಜಿ ಅವರು ಮಠದಿಂದ ಕಾರಿನತ್ತ ಬರುತ್ತಿರುವ ಕ್ಷಣ. ಸಿದ್ಧಲಿಂಗ ಸ್ವಾಮೀಜಿ, ಡಾ.ಪರಮೇಶ್, ಡಾ.ದಿವ್ಯಾ ಗೋಪಿನಾಥ್ ಇದ್ದರು

ಸ್ವಾಮೀಜಿ ಆರೋಗ್ಯ ತಪಾಸಣೆ ನಡೆಸಿದ ಬೆಂಗಳೂರು ಮತ್ತು ಚೆನ್ನೈನ ತಜ್ಞ ವೈದ್ಯರು ಅವರನ್ನು ವಾಯುಮಾರ್ಗದ ಮೂಲಕ ಚೆನ್ನೈಗೆ ಕರೆದೊಯ್ಯುವ ನಿರ್ಧಾರ ತೆಗೆದುಕೊಂಡರು. ಕಳೆದ ಶನಿವಾರವಷ್ಟೇ ಸ್ವಾಮೀಜಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ವೇಳೆ ಅವರ ಯಕೃತ್‌ಗೆ ಸ್ಟಂಟ್‌ಗಳನ್ನು ಅಳವಡಿಸಲಾಗಿತ್ತು.

2016ರಲ್ಲಿ ಮೊದಲ ಬಾರಿಗೆ ಸ್ಟಂಟ್‌ ಅಳವಡಿಸಿದ ನಂತರ ಪದೇಪದೆ ಸೋಂಕಿನ ಕಾರಣಕ್ಕೆ ಜ್ವರ ಅವರನ್ನು ಬಾಧಿಸುತ್ತಿತ್ತು. ಸ್ವಾಮೀಜಿಯ ವಯಸ್ಸು ಈಗ 111 ವರ್ಷ. ಅವರಿಗೆ ಹೈಪರ್‌ಟೆನ್ಷನ್ (ಬಿಪಿ) ಅಥವಾ ಡಯಾಬಿಟಿಸ್ (ಶುಗರ್) ಸಮಸ್ಯೆ ಇಲ್ಲ. ಯಕೃತ್ತಿನ ಸಮಸ್ಯೆಯೊಂದು ಬಹುಕಾಲದಿಂದ ಬಾಧಿಸುತ್ತಿದೆ.

ಸ್ವಾಮೀಜಿ ಶೀಘ್ರ ಗುಣಮುಖರಾಗಬೇಕು ಎಂದು ರಾಜ್ಯದ ವಿವಿಧೆಡೆ ಭಕ್ತರು ಇಷ್ಟದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಬರಹ ಇಷ್ಟವಾಯಿತೆ?

 • 26

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !