ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಕೃಷಿ ವಿ.ವಿ: ಮೊದಲ ನೇಮಕಾತಿಯಲ್ಲೇ ವಿವಾದ!

109 ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿ
Last Updated 18 ಫೆಬ್ರುವರಿ 2019, 19:28 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಇದೇ ಮೊದಲ ಬಾರಿ ಆರಂಭಿಸಿರುವ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ವಿವಾದದ ಕಿಡಿ ಹೊತ್ತಿಸಿದೆ.

ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಎಂಟು ವರ್ಷಗಳ ನಂತರ ಪೂರ್ಣಪ್ರಮಾಣದ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ 109 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿ
ಸಲು ಜ.24ರಂದು ಕುಲಸಚಿವ ಡಾ.ಪಿ. ನಾರಾಯಣಸ್ವಾಮಿಆದೇಶ ಹೊರಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಜನವರಿಯಲ್ಲಿ ನೀಡಿದ್ದ ಆದೇಶದ ಪ್ರಕಾರ ಆಯಾ ವಿಷಯಗಳ ವಿಭಾಗವಾರು (ಡಿಪಾರ್ಟ್‌ಮೆಂಟ್) ಇರುವ ಖಾಲಿ ಹುದ್ದೆಗಳ ಆಧಾರದಲ್ಲೇ ನೇಮಕಾತಿ ಮಾಡಿಕೊಳ್ಳಬೇಕು. ಆದರೆ, ಕುಲಸಚಿವರು ಹೊರಡಿಸಿರುವ ಆದೇಶದ ಪ್ರಕಾರ ಇಡೀ ವಿಶ್ವವಿದ್ಯಾಲಯವನ್ನೇ ಒಂದು ಘಟಕವೆಂದು ಪರಿಗಣಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಸಾಗರ ತಾಲ್ಲೂಕು ಆನಂದಪುರಂ ಹೋಬಳಿ ಇರುವಕ್ಕಿ ಬಳಿ 777 ಎಕರೆ ವಿಸ್ತಾರ ಪ್ರದೇಶದಲ್ಲಿ ನೂತನ ಕ್ಯಾಂಪಸ್ ತಲೆ ಎತ್ತುತ್ತಿದೆ. ಎರಡು ಕ್ಯಾಂಪಸ್‌ ಸೇರಿ ಎಲ್ಲ ಘಟಕಗಳಿಗೂ ಪೂರ್ಣಪ್ರಮಾಣದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಮೊದಲ ಹಂತದ ನೇಮಕಾತಿ ಆರಂಭಿಸಲಾಗಿದೆ.

ಹಿಂದಿನ ಕುಲಪತಿ ಸಿ. ವಾಸುದೇವಪ್ಪ ಅವರು ಜುಲೈ 2015ರಲ್ಲಿ 85 ಸಹಾಯಕ ಪ್ರಾಧ್ಯಾಪಕರ ವಿಭಾಗವಾರು ನೇಮಕಾತಿಗೆ ಅನುಮತಿ ನೀಡಿದ್ದರು. ಈಗ ಮಾರ್ಪಾಡು ಮಾಡಿ, ಹೊಸ ಆದೇಶ ಹೊರಡಿಸಲಾಗಿದೆ.

ಎಲ್ಲ ವಿಶ್ವವಿದ್ಯಾಲಯಗಳೂ ನೇಮಕಾತಿ ಪ್ರಕ್ರಿಯೆಯಲ್ಲಿ ವಿಷಯಗಳ ವಿಭಾಗವಾರು ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದವು. ಇದರಿಂದ ಪರಿಶಿಷ್ಟರಿಗೆ ಒಂದು ವಿಭಾಗದಲ್ಲಿ ಕನಿಷ್ಠ ಒಂದಾದರೂ ಹುದ್ದೆ ಸಿಗುತ್ತಿತ್ತು. ಒಂದು ವಿಶ್ವವಿದ್ಯಾಲಯದಲ್ಲಿ 50 ವಿಭಾಗಗಳಿದ್ದರೆ ಕನಿಷ್ಠ 50ರಿಂದ 100 ಪರಿಶಿಷ್ಟರಿಗೆ ಉದ್ಯೋಗ ದೊರಕುತ್ತಿತ್ತು. ಕೆಲವೆಡೆ ಈ ಪದ್ಧತಿ ಕೈಬಿಟ್ಟ ಪರಿಣಾಮ ವಿಷಯ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿತ್ತು. ಅದೇ ಪದ್ಧತಿ ಮುಂದು ವರಿಸುವಂತೆ ಕೋರ್ಟ್ ಸೂಚಿಸಿತ್ತು. ಈಗ ಸುಪ್ರೀಂ ಕೋರ್ಟ್ ಅಲಹಾಬಾದ್ ಕೋರ್ಟ್ ತೀರ್ಪನ್ನೇ ಎತ್ತಿ ಹಿಡಿದಿದೆ. ಆದರೂ, ಕೃಷಿ ವಿಶ್ವವಿದ್ಯಾಲಯ ಈ ತೀರ್ಪು ಉಲ್ಲಂಘಿಸಿ ನೇಮಕಾತಿ ಆದೇಶ ಹೊರಡಿಸಿದೆ.

**

ಇಡೀ ವಿಶ್ವವಿದ್ಯಾಲಯವನ್ನು ಒಂದು ಘಟಕ ಎಂದು ಪರಿಗಣಿಸಿದರೂ ಪರಿಶಿಷ್ಟರ ಶೇ 18 ಮೀಸಲಾತಿಗೆ ಧಕ್ಕೆಯಾಗುವುದಿಲ್ಲ.
- ಡಾ.ಪಿ. ನಾರಾಯಣಸ್ವಾಮಿ, ಕುಲಸಚಿವ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT