ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿಯ ರಿಟ್ ಅರ್ಜಿ ವಿಚಾರಣೆಗೆ ಅಂತಿಮ ಅವಕಾಶ

7

ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿಯ ರಿಟ್ ಅರ್ಜಿ ವಿಚಾರಣೆಗೆ ಅಂತಿಮ ಅವಕಾಶ

Published:
Updated:

ಬೆಂಗಳೂರು: ಪೀಠಾಧಿಪತಿ ಸ್ಥಾನದಿಂದ ತಮ್ಮನ್ನು ಅನರ್ಹಗೊಳಿಸುವಂತೆ ಕೋರಿ ಸಿವಿಲ್‌ ನ್ಯಾಯಾಲಯದಲ್ಲಿ ಹೂಡಿರುವ ದಾವೆಯನ್ನು ಪ್ರಶ್ನಿಸಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಗೆ ಹೈಕೋರ್ಟ್ ಅಂತಿಮ ಅವಕಾಶ ನೀಡಿದೆ.

ಈ ಕುರಿತಂತೆ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಸಲ್ಲಿಸಿರುವ ರಿಟ್ ಅರ್ಜಿ ಸೋಮವಾರ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತು.

ವಿಚಾರಣೆ ವೇಳೆ ಅರ್ಜಿದಾರ ಸ್ವಾಮೀಜಿ ಪರ ಯಾರೂ ಹಾಜರಾಗದ ಕಾರಣ, ರಿಟ್ ಅರ್ಜಿ ವಿಲೇವಾರಿಗೆ ನ್ಯಾಯಪೀಠವು ಅಂತಿಮ ಅವಕಾಶ ಕಲ್ಪಿಸಿ ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿದೆ.

ಪ್ರಕರಣವೇನು?
* ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ತಮ್ಮ ಹೆಸರಿನ ಜೊತೆಗಿದ್ದ "ಜಗದ್ಗುರು" ಪದವನ್ನು ಕಳಚಿಕೊಂಡು "ಶರಣರು" ಎಂಬ ಪದವನ್ನು ಸೇರಿಸಿಕೊಂಡಿರುವುದು ಮಠದ ಪರಂಪರೆಗೆ ವಿರುದ್ಧವಾಗಿದೆ. 

* ಮಠದ ಸ್ಥಿರ ಮತ್ತು ಚರಾಸ್ತಿ ದುರ್ವ್ಯವಹಾರಗಳಿಗೆ ಖರ್ಚು ಮಾಡಲಾಗುತ್ತಿದೆ.

* ಮಠದ ಸಂಪ್ರದಾಯ, ಪದ್ಧತಿ ಹಾಗೂ ಆಚರಣೆಗಳನ್ನು ಶಿವಮೂರ್ತಿ ಸ್ವಾಮೀಜಿ ಪಾಲಿಸುತ್ತಿಲ್ಲ. ಇದು ಅವರ ಉತ್ತರಾಧಿಕಾರಿ ಪತ್ರದ ನಿಯಮಗಳಿಗೆ ವಿರುದ್ಧವಾಗಿದೆ. (ಉತ್ತರಾಧಿಕಾರಿ ಪತ್ರವು 1991ರ ಜನವರಿ 30ರಂದು ಚಿತ್ರದುರ್ಗ ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗಿರುತ್ತದೆ).

* ಸ್ವಾಮೀಜಿ ಮಠದ ಪಾರುಪತ್ಯ ವಹಿಸಿಕೊಂಡ ಮೇಲೆ ಕರ್ತೃ ಗದ್ದುಗೆಯನ್ನು ಒಡೆದು ಹಾಕಿ ಭಕ್ತರ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಿದ್ದಾರೆ.

* ಇಷ್ಟಲಿಂಗ ಪೂಜಾಪದ್ಧತಿ ನಿರ್ವಹಣೆಯಲ್ಲಿ ವಿಫಲರಾಗಿರುತ್ತಾರೆ.

* ಮಠದ ಹಣವನ್ನು ಆಡಳಿತಾಧಿಕಾರಿಯಾಗಿದ್ದ ಎಸ್.ಕೆ. ಬಸವರಾಜನ್ ಮತ್ತು ಅವರ ಪತ್ನಿ ಸೌಭಾಗ್ಯ ಬಸವರಾಜನ್ ಅವರ ಚುನಾವಣಾ ವೆಚ್ಚಗಳಿಗೆ ಖರ್ಚು ಮಾಡಲಾಗಿರುತ್ತದೆ.

* ಮಠದ ಆದಾಯ ದುರ್ವಿನಿಯೋಗ ಆಗುತ್ತಿರುವುದರಿಂದ ಮತ್ತು ಸ್ವಾಮೀಜಿಯ ದುರ್ನಡತೆಯು ಕ್ರಿಮಿನಲ್ ಸ್ವರೂಪದ ನಂಬಿಕೆ ದ್ರೋಹವಾಗಿರುತ್ತದೆ.

* ಸ್ವಾಮೀಜಿ ಬೋಧನೆ, ಆಚರಣೆ ಹಾಗೂ ನಡತೆಗಳು ಮಠದ ಮೂಲ ತತ್ವಕ್ಕೆ ಸಂಪೂರ್ಣ ವಿರುದ್ಧವಾಗಿವೆ.

* ವೀರಶೈವ ತತ್ವ ಅನುಸರಿಸುವ ಮತ್ತು ಶೂನ್ಯಪೀಠ ಪರಂಪರೆಗೆ ಸೇರಿದ ಪ್ರಮುಖ ಮಠ ಎನಿಸಿರುವ ಮುರುಘಾ ಮಠಕ್ಕೆ ರಾಜ್ಯದಾದ್ಯಂತ ಮಾತ್ರವಲ್ಲದೆ ನೆರೆ ರಾಜ್ಯಗಳು ಹಾಗೂ ವಿದೇಶಗಳಲ್ಲೂ ಲಕ್ಷಾಂತರ ಭಕ್ತರಿದ್ದಾರೆ.

* ಇವರೆಲ್ಲರ ದೇಣಿಗೆಯ ಹಾಗೂ ಭಕ್ತಿಯ ಸಮರ್ಪಣೆ ದುರ್ವಿನಿಯೋಗವಾಗುತ್ತಿದ್ದು ಅವರ ಮನಸ್ಸಿಗೆ ತೀವ್ರ ಆಘಾತ ಆಗಿರುತ್ತದೆ.

* ಆದ್ದರಿಂದ ಈ ಕುರಿತು ಸೂಕ್ತ ವಿಚಾರಣೆ ನಡೆಸಿ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಮಠಾಧಿಪತಿಯಾಗಿ ಮುಂದುವರಿಯಲು ಅನರ್ಹರು ಎಂದು ಘೋಷಿಸುವಂತೆ ಕೋರಿ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ವಕೀಲರಾದ ವಿಶ್ವನಾಥ್ ಹಿರೇಮಠ, ಮಲ್ಲಿಕಾರ್ಜುನ ಹಿರೇಮಠ ಹಾಗೂ ರುದ್ರೇಶ್ 2007ರಲ್ಲಿ ಅಸಲು ದಾವೆ ಸಲ್ಲಿಸಿದ್ದರು.

* ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸ್ಕೀಂ ಸೂಟ್ ಸಲ್ಲಿಸಲು ನಿರ್ದೇಶಿಸಿತ್ತು. ಸ್ಕೀಂ ಸೂಟ್‌ನ ವಿಚಾರಣೆ ಪ್ರಶ್ನಿಸಿ ಶಿವಮೂರ್ತಿ ಮುರುಘ ರಾಜೇಂದ್ರ ಸ್ವಾಮೀಜಿ 2014ರಲ್ಲಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

* ಈ ಪ್ರಕರಣದ ವಿಲೇವಾರಿಗೆ ಕೊನೆಯ ಅವಕಾಶ ಎಂದು ನ್ಯಾಯಪೀಠ ಇದೀಗ ಒಂದು ವಾರ ಕಾಲಾವಕಾಶ ಕಲ್ಪಿಸಿದೆ.
 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !