ಚಿತ್ರರಂಗದ ಗಣ್ಯರ ವಿಚಾರಣೆ ಮುಂದುವರಿಸಿದ ಐಟಿ ಅಧಿಕಾರಿಗಳು

7

ಚಿತ್ರರಂಗದ ಗಣ್ಯರ ವಿಚಾರಣೆ ಮುಂದುವರಿಸಿದ ಐಟಿ ಅಧಿಕಾರಿಗಳು

Published:
Updated:
Prajavani

ಬೆಂಗಳೂರು: ‘ಸ್ಯಾಂಡಲ್‌ವುಡ್‌’ ನಟರು ಮತ್ತು ನಿರ್ಮಾಪಕ ಬಳಿ ₹109 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾದ ಪ್ರಕರಣದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.

ಹ್ಯಾಟ್ರಿಕ್‌ ಹೀರೊ ಶಿವರಾಜ್‌ ಕುಮಾರ್‌ ಮತ್ತು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರು ಮಂಗಳವಾರ ಕನಿಂಗ್‌ಹ್ಯಾಂ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆಗೆ ಧಾವಿಸಿ ವಿಚಾರಣೆಗೆ ಹಾಜರಾದರು.

ಬುಧವಾರ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಮತ್ತು ಕಿಚ್ಚಾ ಸುದೀಪ್‌ ಐ.ಟಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.

ಕಳೆದ ವಾರ ಆದಾಯ ತೆರಿಗೆ ಅಧಿಕಾರಿಗಳು ಶಿವರಾಜ್‌ಕುಮಾರ್, ಪುನೀತ್‌ ರಾಜ್‌ಕುಮಾರ್‌, ಯಶ್‌, ಸುದೀಪ್‌, ನಿರ್ಮಾಪಕರಾದ ಸಿ.ಆರ್‌. ಮನೋಹರ್, ವಿಜಯ್‌ ಕಿರಗಂದೂರು, ಜಯಣ್ಣ ಮತ್ತು ರಾಕ್‌ಲೈನ್‌ ವೆಂಕಟೇಶ್‌ ಅವರ ಮನೆಗಳ ಮೇಲೆ ದಾಳಿ ನಡೆಸಿ ₹ 109ಕೋಟಿ ಮೊತ್ತದ ಅಘೋಷಿತ ಆಸ್ತಿ, 25 ಕೆ.ಜಿ ಚಿನ್ನ ಹಾಗೂ ₹ 2.8 ಕೋಟಿ ನಗದು ವಶಪಡಿಸಿಕೊಂಡಿದ್ದರು.

ಆದಾಯ ತೆರಿಗೆ, ಜಿಎಸ್‌ಟಿ ಹಾಗೂ ಸೇವಾ ತೆರಿಗೆ ವಂಚನೆ ಆರೋಪದಲ್ಲಿ ವಿಚಾರಣೆ ನಡೆಯುತ್ತಿದೆ.

ಪರಿಣಾಮ ಆಗಿಲ್ಲ: ಶಿವರಾಜ್‌ಕುಮಾರ್‌

‘ನಮ್ಮ ಮನೆ ಮೇಲೆ ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳು ನಡೆಸಿದ ದಾಳಿಯಿಂದ ನನ್ನ ಮತ್ತು ನನ್ನ ಕುಟುಂಬದ ಮೇಲೆ ಯಾವ ಪರಿಣಾಮವೂ ಆಗಿಲ್ಲ’ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.

ಐ.ಟಿ. ದಾಳಿಗೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಅವರು, ‘ನಾನು ಎಂದಿನಂತೆ ನನ್ನ ಕೆಲಸಗಳಲ್ಲಿ ತೊಡಗಿದ್ದೇನೆ. ಚಿತ್ರೀಕರಣವೂ ನಡೆದಿದೆ. ಮಂಗಳವಾರ ಕೂಡ ಚಿತ್ರೀಕರಣದಲ್ಲಿ ಭಾಗವಹಿಸಿದ್ದೆ’ ಎಂದರು. ‘ಎರಡು ದಿನಗಳ ಕಾಲ ತೆರಿಗೆ ಅಧಿಕಾರಿಗಳು ಮನೆಯಲ್ಲಿದ್ದು ದಾಖಲೆ ಪರಿಶೀಲನೆ ನಡೆಸಿದ್ದು ನಮ್ಮ ಪಾಲಿಗೆ ಹೊಸ ಬಗೆಯ ಅನುಭವ’ ಎಂದು ಅವರು ಹೇಳಿದರು.

‘ಬದುಕಿನಲ್ಲಿ ಎದುರಾಗುವ ಎಲ್ಲವನ್ನೂ ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು ಎನ್ನುವುದು ನನ್ನ ನಿಲುವು. ಈ ವಿಷಯವನ್ನೂ ಹಾಗೆಯೇ ಸ್ವೀಕರಿಸಿದ್ದೇನೆ. ದಾಳಿ ವಿಚಾರವಾಗಿ ನನಗೆ ಯಾವ ಚಿಂತೆಯೂ ಇಲ್ಲ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !