ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರ ಅಖಾಡದಲ್ಲೊಂದು ಸುತ್ತು| ಹೆಬ್ಬಾರರ ಹಾದಿಯಲ್ಲಿ ‘ಕೈ’ ಚಳಕ

ನೇರ ಹಣಾಹಣಿಯಲ್ಲಿ ಬಿಜೆಪಿ– ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ
Last Updated 6 ಡಿಸೆಂಬರ್ 2019, 12:22 IST
ಅಕ್ಷರ ಗಾತ್ರ

ಶಿರಸಿ: ಮೂರು ತಿಂಗಳ ಹಿಂದೆ ಬಂದ ಪ್ರವಾಹದ ಕರಾಳ ನೆನಪು ಮಾಸುವ ಮುನ್ನವೇ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆಯ ರಂಗು ಹರಡಿದೆ. ಕಳೆದ ಚುನಾವಣೆಯಲ್ಲಿ ಸ್ನೇಹಿತರಾಗಿದ್ದವರೇ ಈಗ ಎದುರಾಳಿಗಳಾಗಿ ಕಣದಲ್ಲಿದ್ದಾರೆ. ಬಿಜೆಪಿಯ ಶಿವರಾಮ ಹೆಬ್ಬಾರ್ ಮತ್ತು ಕಾಂಗ್ರೆಸ್‌ನ ಭೀಮಣ್ಣ ನಾಯ್ಕ ನಡುವೆ ಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.

ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳ ಭದ್ರಗೋಡೆಗಳು ಅಂಟಿಕೊಂಡು ಮೈದಳೆದಿರುವ ವಿಶಿಷ್ಟ ಕ್ಷೇತ್ರವಿದು. 2008ರ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಅಂಕೋಲಾ ಕ್ಷೇತ್ರದಲ್ಲಿದ್ದ ಯಲ್ಲಾಪುರ, ಹಳಿಯಾಳ ಕ್ಷೇತ್ರದಲ್ಲಿದ್ದ ಮುಂಡಗೋಡ, ಶಿರಸಿ‌ ಕ್ಷೇತ್ರದ
ಲ್ಲಿದ್ದ ಬನವಾಸಿ ಹೋಬಳಿ ಒಳಗೊಂಡು ರಚನೆಯಾಗಿರುವ ಈ ವಿಧಾನಸಭಾ ಕ್ಷೇತ್ರದಲ್ಲಿ ಯಲ್ಲಾಪುರ ಬಿಜೆಪಿಯ ಗಟ್ಟೆ ನೆಲೆ. ಮುಂಡಗೋಡ ಹಾಗೂ ಬನವಾಸಿ ಹೋಬಳಿ ಕಾಂಗ್ರೆಸ್‌ನ ಭದ್ರಕೋಟೆಗಳು.

2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ.ಎಸ್.ಪಾಟೀಲ, ಕಾಂಗ್ರೆಸ್ ಅಭ್ಯರ್ಥಿ ಶಿವರಾಮ ಹೆಬ್ಬಾರರನ್ನು ಸೋಲಿಸಿದ್ದರು. 2013ರ ಚುನಾವಣೆಯಲ್ಲೂ ಇವರಿಬ್ಬರ ನಡುವಿನ ಸಮರದಲ್ಲಿ ಹೆಬ್ಬಾರ್ ಅತ್ಯಧಿಕ (24,492 ಮತ) ಅಂತರದಿಂದ ವಿಜಯಿಯಾಗಿದ್ದರು. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಇವರಿಬ್ಬರೇ ಎದುರಾಳಿಗಳು. ಹೆಬ್ಬಾರ್ ಮತ್ತೊಮ್ಮೆ ಪಾಟೀಲರನ್ನು ಸೋಲಿಸಿದರೂ ಗೆಲುವಿನ ಅಂತರ (1,483 ಮತ) ಕುಸಿದಿತ್ತು.

ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಹೆಬ್ಬಾರ್ ಪಕ್ಷಾಂತರದಿಂದ ಕ್ಷೇತ್ರದಲ್ಲಿ ಪುನಃ ಚುನಾವಣೆ ಬಂದಿದೆ. ಅಖಾಡ ಅಣಿಯಾಗುವ ಮುಂಚೆಯೇ ವಿ.ಎಸ್.ಪಾಟೀಲರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಈಗ ಹೆಬ್ಬಾರ್ ಮತ್ತು ಪಾಟೀಲರು ‘ಬಿಜೆಪಿ ಸ್ನೇಹಿತರು’. ಕಳೆದ ಚುನಾವಣೆಯಲ್ಲಿ ಹೆಬ್ಬಾರರ ಪರ ಪ್ರಚಾರ ಮಾಡಿದ್ದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಈಗ ಹೆಬ್ಬಾರರ ಎದುರಾಳಿ.

ಹಿಂದುಳಿದ, ಗುಡ್ಡಗಾಡು ಪ್ರದೇಶಗಳೇ ಅಧಿಕವಿರುವ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ತಂದಿರುವ ಹೆಬ್ಬಾರ್, ನಿರಂತರ ಒಡನಾಟ ಉಳಿಸಿಕೊಂಡು ಜನರ ಪ್ರೀತಿ ಗಳಿಸಿದವರು. ಆದರೆ, ಅವರ ಪಕ್ಷಾಂತರದ ಆಟವನ್ನು ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರಿಗಷ್ಟೇ ಅಲ್ಲ, ಕ್ಷೇತ್ರದ ಜನರಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಹೆಬ್ಬಾರರ ಹಿಂಬಾಲಕರು, ತಾಲ್ಲೂಕು ಪಂಚಾಯ್ತಿ, ಪಟ್ಟಣ ಪಂಚಾಯ್ತಿ ಸದಸ್ಯರನೇಕರು ಅವರೊಂದಿಗೆ ಬಿಜೆಪಿಗೆ ಬಂದಿದ್ದಾರೆ. ಹಳಬರು– ಹೊಸಬರ ನಡುವಿನ ತೆರೆಮರೆಯ ತಿಕ್ಕಾಟಕ್ಕೆ ತೇಪೆ ಹಚ್ಚುವಲ್ಲಿ ಹೆಬ್ಬಾರರು, ಬಿಜೆಪಿ ಉಸ್ತುವಾರಿಗಳು ಹೈರಾಣಾಗಿದ್ದಾರೆ.

ಹೆಬ್ಬಾರರಿಗೆ ಈ ಚುನಾವಣೆ ರಾಜಕೀಯ ಅಸ್ತಿತ್ವದ ಅಳಿವು– ಉಳಿವಿನ ಪ್ರಶ್ನೆ, ನಿಷ್ಠಾವಂತ ಕಾರ್ಯಕರ್ತರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉಳಿಸುವ ಪ್ರತಿಜ್ಞೆ. ಇವೆರಡನ್ನೇ ಅಸ್ತ್ರವಾಗಿಸಿಕೊಂಡಿರುವ ಹಿರಿಯ ನಾಯಕರು ಸಮನ್ವಯ ಸಾಧಿಸಲು
ಪ್ರಯತ್ನಿಸುತ್ತಿದ್ದಾರೆ.

ಸುದೀರ್ಘ ರಾಜಕೀಯ ಅನುಭವ ಇರುವ ಕಾಂಗ್ರೆಸ್‌ ಶಾಸಕ ಆರ್.ವಿ.ದೇಶಪಾಂಡೆ, ಚುನಾವಣೆಯನ್ನು ಸ್ವ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಕಾಂಗ್ರೆಸ್‌ನಲ್ಲಿದ್ದಾಗಲೂ ಮುಸುಕಿನ ಗುದ್ದಾಟ ನಡೆಸುತ್ತಿದ್ದ ಹೆಬ್ಬಾರ್, ಈಗ ಅವರಿಗೆ ನಿಚ್ಚಳ ವಿರೋಧಿ. ತಮ್ಮ ಚುನಾವಣೆಯಷ್ಟೇ ಗಂಭೀರವಾಗಿ ಪರಿಗಣಿಸಿರುವ ದೇಶಪಾಂಡೆ, ಕ್ಷೇತ್ರದಲ್ಲೇ ಉಳಿದು, ಹಿರಿ– ಕಿರಿಯ ಮುಖಂಡರನ್ನು ವೈಯಕ್ತಿಕವಾಗಿ ಸಂಪರ್ಕಿಸುವ ಜತೆಗೆ, ಪಕ್ಷ ಬಿಟ್ಟು ಹೋದವರನ್ನು ಪುನಃ ಪಕ್ಷಕ್ಕೆ ಕರೆತರುತ್ತಿದ್ದಾರೆ. ವಿ.ಎಸ್.ಪಾಟೀಲರ ಪುತ್ರ ಬಾಪುಗೌಡ ಪಾಟೀಲರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು, ಲಿಂಗಾಯತ ಮತಗಳಿಗೆ ಹೊಂಚು ಹಾಕಿದ್ದಾರೆ.

ಈ ಹಿಂದೆ ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಸ್ಪರ್ಧಿಸಿ ಸೋತಿರುವ ಭೀಮಣ್ಣ, ಎಂತಹದೇ ಕಠಿಣ ಪರಿಸ್ಥಿತಿ ಬಂದರೂ, ಹೊಸಕ್ಷೇತ್ರದಲ್ಲಾದರೂ ಗೆಲುವು ಸಾಧಿಸಬೇಕೆಂದು ಹಠ ತೊಟ್ಟವರಂತೆ ಪ್ರಚಾರ ನಡೆಸುತ್ತಿದ್ದಾರೆ.

ಹವ್ಯಕರು, ನಾಮಧಾರಿಗಳು, ಲಿಂಗಾಯತರು, ಮರಾಠರು, ಪರಿಶಿಷ್ಟರು, ಅಲ್ಪಸಂಖ್ಯಾತರು–ಹೀಗೆ ಅನೇಕ ಸಮುದಾಯಗಳು ನಿರ್ಣಾಯಕ ಮತದಾರರಾಗಿರುವುದು ಈ ಕ್ಷೇತ್ರದ ವಿಶೇಷ. ಹೀಗಾಗಿ, ಎರಡೂ ಪಕ್ಷಗಳು ಆಯಾ ಸಮುದಾಯದ ನಾಯಕರಿಂದಲೇ ಪ್ರಚಾರ ನಡೆಸುವ ತಂತ್ರ ಬಳಸುತ್ತಿವೆ. ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.

ಕಳೆದ ವಿಧಾನಸಭೆ, ಲೋಕಸಭಾ ಚುನಾವಣೆಗಳಲ್ಲಿ ಪ್ರಯೋಗಿಸಿದ್ದ ಹಿಂದುತ್ವದ ಅಜೆಂಡಾವನ್ನು ಈ ಬಾರಿ ಬದಿಗಿಟ್ಟಿರುವ ಬಿಜೆಪಿ, ರಾಷ್ಟ್ರೀಯತೆ ಅಭಿವೃದ್ಧಿಯ ವಿಚಾರ ಮುಂದಿಟ್ಟು ಮತ ಕೇಳುತ್ತಿದೆ. ಶಾಸಕರ ಅನರ್ಹತೆಯನ್ನೇ ಕಾಂಗ್ರೆಸ್ ದಾಳವಾಗಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT