ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸೇವೆಯೂ ಈಶಸೇವೆಯೂ ನಿರಂತರ

Last Updated 21 ಜನವರಿ 2019, 20:11 IST
ಅಕ್ಷರ ಗಾತ್ರ

ಭಕ್ತಿ, ಜ್ಞಾನದ ಜೊತೆಗೆ ಕಾಯಕದ ಪರಿಕಲ್ಪನೆಯನ್ನು ಬಿತ್ತಿ, ದಾಸೋಹ ತತ್ವದ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು ಸಿದ್ಧಗಂಗಾ ಮಠ. ಭಕ್ತಿಪರಂಪರೆಯ ಕೊಂಡಿಯಾಗಿ ನಂಬಿದ ಜನರ ಇಷ್ಟಾರ್ಥಗಳನ್ನು ಈಡೇರಿಸುವ ದೇಗುಲ. ಇಲ್ಲಿ ಬಂದವರು ಬರಿಗೈಲಿ ವಾಪಸ್ ಹೋದ ಉದಾಹರಣೆ ಇಲ್ಲ. ಮನದ ಸಂಕಲ್ಪವನ್ನು ಪೂರೈಸಿಕೊಂಡು ಹೋದವರೇ ಹೆಚ್ಚು. ಈ ಸಂಸ್ಕೃತಿಯ ಕೇಂದ್ರ
ಬಿಂದುವಾಗಿದ್ದವರು ಡಾ. ಶಿವಕುಮಾರ ಸ್ವಾಮೀಜಿ.

ಸ್ವಾಮೀಜಿಗೆ 111 ವರ್ಷ ವಯಸ್ಸಾದರೂ, ಅವರು ಆಚರಿಸಿಕೊಂಡು ಬಂದ ಮಠದ ಪರಂಪರೆಗೆ ಹಲವು ತತಮಾನಗಳ ನಂಟಿತ್ತು. ಶ್ರೀಮಠಕ್ಕಿದ್ದ ಪರಂಪರೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು, ಇತರರಿಗೆ ಮಾದರಿಯಾಗಿ ಬದುಕಿದ ಸ್ವಾಮೀಜಿ ಎಲ್ಲರಿಗೂ ಪ್ರೇರಕ ಶಕ್ತಿಯಾಗಿದ್ದರು. ಅವರ ಅಂತಃಶಕ್ತಿಯಿಂದಾಗಿ ಭಕ್ತಸಮೂಹ ಮಠದತ್ತ ಹರಿದು ಬರುತ್ತಿತ್ತು. ಸ್ವಾಮೀಜಿ ದರ್ಶನ, ಆಶೀರ್ವಾದಕ್ಕೆ ಕಾತರದಿಂದ ಕಾಯುತ್ತಿತ್ತು. ಅವರ ಪಾದ ಮುಟ್ಟಿ ನಮಸ್ಕರಿಸುವ ಮೂಲಕ ತಮ್ಮ ಮನದೊಳಗಿನ ಎಲ್ಲ ನೋವು, ಕಷ್ಟ, ನಷ್ಟಗಳನ್ನು ಮರೆಯುತ್ತಿದ್ದರು. ಸ್ವಾಮೀಜಿ ಪಾದಕ್ಕೆ ಅರ್ಪಿಸಿ ನಿರಾಳ ಭಾವದಿಂದ ನಿಟ್ಟುಸಿರು ಬಿಡುತ್ತಿದ್ದರು. ಆ ಕ್ಷಣಕ್ಕೆ ಎಲ್ಲರಲ್ಲೂ ಶೂನ್ಯ ಭಾವ ಒಳಗೊಳ್ಳುವುದರಲ್ಲಿಯೇ ಸಂತೃಪ್ತಿ ಕಂಡುಕೊಳ್ಳುತ್ತಿದ್ದರು.

ಈ ತಪಃಶಕ್ತಿಗೆ ಶರಣರ ತತ್ವಪಾಲನೆ ಒಂದೆಡೆ ಬಲವನ್ನು ನೀಡಿದರೆ, ಮಠದಲ್ಲಿ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ತ್ರಿವಿಧ ದಾಸೋಹ, ತ್ರಿಕಾಲ ಪೂಜೆಗಳೇ ಕಾರಣ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಇಲ್ಲಿ ಎಲ್ಲವೂ ಭಕ್ತಿಮಯ. ಬೇಡುವ, ಕೊಡುವ ಶಕ್ತಿ ದೇವನದು. ಆದರೆ ಅದಕ್ಕೊಮ್ಮೆ ಕರ್ತೃವನ್ನು ಸೃಷ್ಟಿಸಿ ಗುರುವಿನ ರೂಪದಲ್ಲಿ ನೀಡುವ ಜವಾಬ್ದಾರಿಯನ್ನು ಸ್ವಾಮೀಜಿ ನಿರ್ವಂಚನೆಯಿಂದ ಮಾಡಿದ್ದಾರೆ. ಜನರಿಗೆ ಜ್ಞಾನದ ಜೊತೆಗೆ ದಾಸೋಹ ತತ್ವವನ್ನು ತಿಳಿಸಿಕೊಟ್ಟು ಶಿಷ್ಟ ಪಾಲನೆ ಮಾಡಿದ್ದಾರೆ. ಶ್ರದ್ಧೆ, ಭಕ್ತಿ, ಪರಂಪರೆಯ ಸಂಕೇತದಂತೆ ಗುರುವಿನ ಆಶೀರ್ವಾದ, ಮಸ್ತಿಷ್ಕಕ್ಕೆ ಜ್ಞಾನ, ಆತ್ಮಕ್ಕೆ ಸಂತೃಪ್ತಿಯನ್ನು ನೀಡಿದ್ದಾರೆ.

ಶಿವಕುಮಾರ ಸ್ವಾಮೀಜಿ ಅವರದು ಮಠ ಪರಂಪರೆಯ ಸಾಕಾರ ರೂಪ. ಹೊತ್ತಾರೆ ಎದ್ದು ಬ್ರಾಹ್ಮಿಮುಹೂರ್ತದಲ್ಲಿ ಪೂಜಾ ವಿಧಾನಗಳು ಆರಂಭಿಸುತ್ತಿದ್ದರು. ಸ್ವಾಮೀಜಿ ಅವರ ದಿನಚರಿ, ಜ್ಞಾನದ ಹರಿವು, ಅರಿವಿನ ಆಳದಷ್ಟೇ ಪೂಜೆಯೂ ಸಹ ವಿಶಿಷ್ಟವಾಗಿತ್ತು.

ಸ್ವಾಮೀಜಿ ಅವರ ಪೂಜಾಕ್ರಮವೂ ಶ್ರೀಮಠದ ಪರಂಪರೆಯಂತೆ ನಡೆಯುತ್ತಿತ್ತು. ಹಿಂದೆ ತ್ರಿಕಾಲ ಪೂಜೆ ನಡೆಯುತ್ತಿತ್ತು. ಕೊನೆಯ ದಿನಗಳಲ್ಲಿ ಶ್ರೀಗಳ ಆರೋಗ್ಯದ ಕಾರಣಕ್ಕಾಗಿ ನಾಲ್ಕು ಬಾರಿ ಸ್ನಾನ ಪೂಜಾದಿಗಳು ನಡೆಯುತ್ತಿದ್ದವು. ಸ್ವಾಮೀಜಿ ಅವರು ಅನುಸರಿಸುತ್ತಿದ್ದುದು ವೈದಿಕ ತಾಂತ್ರಿಕ ಪೂಜಾ ವಿಧಾನ. ಇಲ್ಲಿ ವೇದಮಂತ್ರಗಳ ಜೊತೆಗೆ ವಚನಗಳ ಪಠಣವೂ ನಡೆಯುತ್ತಿತ್ತು. ಶಾಸ್ತ್ರದ ಆಧಾರದಂತೆ ನಿರ್ದಿಷ್ಟ ಸ್ವರೂಪದಲ್ಲಿ ಕರಾರುವಕ್ಕಾಗಿ ಸ್ತೋತ್ರ, ವಚನಗಳ ಪಠಣ ಮಾಡುತ್ತಿದ್ದರು. ಬಸವಣ್ಣನವರ ವಚನದಲ್ಲಿರುವ ಅಷ್ಟ ಷೋಡಶೋಪಚಾರಗಳು ಲಿಂಗಕ್ಕೆ ಅರ್ಪಿತವಾಗುತ್ತಿದ್ದವು.

ಅಂಗದ ಮೇಲಿನ ಲಿಂಗಕ್ಕೆ ಜಲಾಭಿಷೇಕ ಮಾಡಿದ ನಂತರ ಭಸ್ಮ, ಗಂಧಧಾರಣೆ, ಅಂಗೈ ಅಗಲದ ಕರಡಿಗೆ ಒಳಗಿಟ್ಟ ರುದ್ರಾಕ್ಷಿ ಮಾಲೆ ನಡುವೆ ಇಷ್ಟಲಿಂಗವನ್ನು ಇಟ್ಟು ಪೂಜೆ ಆರಂಭಿಸುತ್ತಿದ್ದರು. ಭಸ್ಮ, ಗಂಧಲೇಪಿತ ಲಿಂಗಕ್ಕೆ ಬಿಲ್ವಪತ್ರೆ ಧರಿಸಿ (ಬಿಲ್ವಪತ್ರೆ ಮೇಲೆ ಸ್ವಾಮೀಜಿಗೆ ವಿಶೇಷ ಒಲವಿತ್ತು), ಅದರ ಸುತ್ತ ಗುಲಾಬಿ, ಸಂಪಿಗೆ, ಕೇದಿಗೆ, ತುಂಬೆ, ದಾಸವಾಳ, ಕಣಗಿಲು, ಮಲ್ಲಿಗೆ, ಸೇವಂತಿಗೆ, ಜಾಜಿ ಮೊದಲಾದ 10ರಿಂದ 12 ವಿಧದ ಹೂವುಗಳಿಂದ
ಅಲಂಕರಿಸುತ್ತಿದ್ದರು (ಪೂಜೆಗಾಗಿಯೇ ಶ್ರೀಮಠದ ಆವರಣದಲ್ಲಿ ವಿವಿಧ ಹೂವುಗಳ ತೋಟ ಮಾಡಲಾಗಿದೆ). ಈ ನಡುವೆ ವೇದ ಮಂತ್ರಗಳ ಪಠಣ ನಿರಂತರವಾಗಿ ನಡೆಯುತ್ತಿತ್ತು. ಅಲಂಕೃತ ಇಷ್ಟಲಿಂಗಕ್ಕೆ ಧೂಪ, ದೀಪ, ಕರ್ಪೂರ ಬೆಳಗಿ, ನಂತರ ಪಂಚಾಕ್ಷರಿ ಮಂತ್ರದ ಮೂಲಕ ಶಿವಯೋಗ ಮಾಡುತ್ತಿದ್ದರು.

ಇಷ್ಟಲಿಂಗ ಪೂಜೆಯ ನಂತರ ಬಂದ ಭಕ್ತರ ಇಷ್ಟಲಿಂಗಕ್ಕೂ ಸ್ವತಃ ಸ್ವಾಮೀಜಿಯೇ ಪೂಜೆ ಸಲ್ಲಿಸಿ ಆಶೀರ್ವದಿಸುತ್ತಿದ್ದರು. ಇಷ್ಟಲಿಂಗ ಹಿಡಿದ ಭಕ್ತರ ಕೈಕೆಳಗೆ ತಮ್ಮ ಕೈ ಹಿಡಿದು ಜಲಾಭಿಷೇಕ ಮಾಡುತ್ತಿದ್ದರು. ವಿಭೂತಿ, ಗಂಧ ಲೇಪಿಸಿ, ಕರ್ಪೂರದ ದೀಪ ಬೆಳಗುತ್ತಿದ್ದರು. ಶ್ರೀಗಳಿಂದ ಪೂಜೆ ಪಡೆದ ಭಕ್ತರು, ಮಂತ್ರ ಪಠಿಸಿ, ಧ್ಯಾನ ಮುಗಿಸಿ ಬಂದ ನಂತರ ಪಾದೋದಕ ಸ್ವೀಕರಿಸುತ್ತಿದ್ದರು.

ಓದು, ಊಟದಂತೆ ಪೂಜಾ ವಿಧಾನದಲ್ಲೂ ಸ್ವಾಮೀಜಿ ಕಟ್ಟುನಿಟ್ಟು. ಪೂಜೆಯಾಗದ ಹೊರತು ಶ್ರೀಗಳು ತೊಟ್ಟು ನೀರನ್ನೂ ಕುಡಿಯುತ್ತಿರಲಿಲ್ಲ. ಎಷ್ಟೇ ತಡರಾತ್ರಿಯಾದರೂ ಪೂಜೆ ಮುಗಿಸಿಯೇ ಪ್ರಸಾದ ಸ್ವೀಕರಿಸುತ್ತಿದ್ದರು. ಯಾರು ಎಷ್ಟೇ ಬಲವಂತ ಮಾಡಿದರೂ ತಮ್ಮ ಸಂಕಲ್ಪ, ಪದ್ಧತಿ, ಆಚರಣೆಯ ವಿಧಾನವನ್ನು ಎಂದಿಗೂ ಬದಲಾವಣೆ ಮಾಡಿಕೊಂಡಿರಲಿಲ್ಲ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರೂ ಪೂಜೆ ಮಾಡುವುದನ್ನು ನಿಲ್ಲಿಸಿರಲಿಲ್ಲ. ವೈದ್ಯರ ಸಲಹೆ ಮೀರಿ ಆಸ್ಪತ್ರೆಯಲ್ಲಿಯೇ ಪೂಜೆ ಮಾಡಿಕೊಂಡಿದ್ದರು. ಚೆನ್ನೈನ ರೇಲಾ ಆಸ್ಪತ್ರೆ
ಯಲ್ಲಿ ಶಸ್ತ್ರಚಿಕಿತ್ಸೆ ಮುಗಿಸಿದ ದಿನವೇ ರಾತ್ರಿ ಪೂಜೆ ಮಾಡಿದ್ದೂ ವಿಶೇಷ. ಪೂಜೆ ನಂತರವೇ ಚಿಕಿತ್ಸೆ ಪಡೆಯಲು ಸ್ವಾಮೀಜಿ ಒಪ್ಪಿಗೆ ಸೂಚಿಸಿದ್ದರು ಎಂಬುದನ್ನು ಅವರ ಶಿಷ್ಯರು ಸ್ಮರಿಸಿಕೊಳ್ಳುವರು.

ಇದು ಸುಲಭದ ಮಾತಲ್ಲ. ಈ ಭಾವನೆ ಒಡಮೂಡಲು ಸಮ್ಮತದ, ಒಮ್ಮತದ ಸಂಕಲ್ಪಶಕ್ತಿ ಬೇಕು. ಹತ್ತಾರು ವರ್ಷ ಮಾಡಿದ ತಪಸ್ಸಿನ ಫಲದಿಂದ ಅದನ್ನು ಸ್ವಾಮೀಜಿ ಸಾಧಿಸಿದ್ದರು. ಅವರಲ್ಲಿರುವ ತಪಃಶಕ್ತಿ, ಇಚ್ಛಾಶಕ್ತಿ, ಆತ್ಮವಿಶ್ವಾಸದಿಂದ ಮುಟ್ಟಿದ್ದೆಲ್ಲ ಚೈತನ್ಯ ಪಡೆಯುತ್ತಿತ್ತು. ಬದುಕಿನಲ್ಲಿ ಹೊಸತನವನ್ನು ಗಳಿಸಿಕೊಂಡು
ಮುನ್ನುಗ್ಗುತ್ತಿದ್ದರು.

ವಚನಗಳ ಜತೆಗೆ ಸಂಸ್ಕೃತ ಶ್ಲೋಕಗಳ ನಿತ್ಯಪಠಣ

ಶಿವಕುಮಾರ ಸ್ವಾಮೀಜಿ ಅವರು ಯಡಿಯೂರು ಸಿದ್ಧಲಿಂಗೇಶ್ವರರ ಪೂಜಾ ವಿಧಾನವನ್ನೇ ಅನುಸರಿಸುತ್ತಿದ್ದರು. ಇದರ ಜೊತೆಗೆ ಅಥಣಿ ಶಿವಯೋಗಿಗಳ ಪೂಜಾ ಪದ್ಧತಿಯನ್ನೂ ಅಳವಡಿಸಿಕೊಂಡಿದ್ದರು. ಪೂಜೆಯಲ್ಲಿ ಸರ್ಪಭೂಷಣ ಶಿವಯೋಗಿಗಳು, ಅಥಣಿ ಶಿವಯೋಗಿಗಳು, ಯಡಿಯೂರು ಸಿದ್ಧಲಿಂಗೇಶ್ವರರು, ಮುಪ್ಪಿನ ಷಡಕ್ಷರಿ ಸ್ವಾಮೀಜಿ, ನಿಜಗುಣ ಶಿವಯೋಗಿಗಳು, ಧಾರವಾಡದ ಮೃತ್ಯುಂಜಯ ಅಪ್ಪಗಳು ರಚಿಸಿದ ಪ್ರಾರ್ಥನೆಗಳ ಪಠಣ ಮಾಡುತ್ತಿದ್ದರು. ಬಸವಣ್ಣನವರ ವಚನಗಳ ಜತೆಗೆ ಸಂಸ್ಕೃತಶ್ಲೋಕಗಳ ಪಠಣವೂ ಇರುತ್ತಿತ್ತು. ವೀರಶೈವ ಧರ್ಮವನ್ನು ಒಳಗೊಂಡ ವೈದಿಕ ಮಂತ್ರಗಳ ವಿಚಾರ, ಷಟ್‌ಸ್ಥಲ, ಪಂಚಾಚಾರ, ಅಷ್ಟಾವರಣ, ಪುರುಷಸೂಕ್ತಿಗಳನ್ನು ಪಠಿಸುತ್ತಿದ್ದರು. ಸ್ವಾಮೀಜಿ ಜೊತೆಗೆ ಶಿಷ್ಯರೂ ದನಿಗೂಡಿಸುತ್ತಿದ್ದರು.

ಬಸವ ತತ್ವದ ಅಷ್ಟಾವರಣಗಳಾದ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ಮಂತ್ರ, ವಿಭೂತಿ, ರುದ್ರಾಕ್ಷಿ ಒಳಗೊಂಡು ಶರಣರ ಮೂಲ ಆಚರಣೆಗಳೆಲ್ಲವೂ ಪೂಜಾ ವಿಧಾನದಲ್ಲಿದ್ದವು. ಬಸವಣ್ಣನವರ ತತ್ವ ಪರಿಪಾಲನೆ ಮಾಡುತ್ತಿರುವ ಸಿದ್ಧಗಂಗಾ ಮಠದ ಶ್ರೇಯದ ಬೇರು ಸಹ ಇವುಗಳಲ್ಲಿಯೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT