ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಕೇಳಿದ್ದಕ್ಕೆ ಗುಂಡಿನ ದಾಳಿ: ಇಬ್ಬರಿಗೆ ಗಾಯ

Last Updated 19 ಅಕ್ಟೋಬರ್ 2018, 13:21 IST
ಅಕ್ಷರ ಗಾತ್ರ

ಮಡಿಕೇರಿ: ಕ್ಯಾಂಟೀನ್‌ ಬಿಲ್‌ ಪಾವತಿ ವಿಚಾರದಲ್ಲಿ ವಾಗ್ವಾದ ನಡೆದು ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಗಾಯಗೊಂಡವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರುಕಟ್ಟೆ ರಸ್ತೆಯ ಕಾವೇರಿ ಬಾರ್‌ ಎದುರು ಗುರುವಾರ ರಾತ್ರಿ ಈ ಘಟನೆ ನಡೆದಿದೆ.

ಕ್ಯಾಂಟೀನ್‌ ಮಾಲೀಕರಾದ ರಿಯಾಜ್‌ ಅಹಮ್ಮದ್‌ (31) ಹಾಗೂ ಸಮೀಮ್‌ (24) ಅವರ ಕಾಲಿಗೆ ಗುಂಡು ತಗುಲಿದ್ದು, ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ. ರಿಯಾಜ್‌ ಅಹಮ್ಮದ್‌ ಮಸೀದಿ ಮೌಲ್ವಿ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಿಜಯದಶಮಿ ದಶಮಂಟಪ ಶೋಭಾಯಾತ್ರೆ ಅಂಗವಾಗಿ ನಗರದ ಸುತ್ತಮುತ್ತಲ 10 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಕಾವೇರಿ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಲೋಕೇಶ್‌ ಹಾಗೂ ಅಕ್ರಂ ಅವರು ಬಾರ್‌ಗೆ ಬಿಡುವಿದ್ದ ಕಾರಣ ಅದೇ ಕಟ್ಟಡದ ಮೇಲಂತಸ್ತಿನಲ್ಲಿ ಸ್ನೇಹಿತರೊಂದಿಗೆ ಮದ್ಯ ಸೇವಿಸುತ್ತಿದ್ದರು. ಪಾರ್ಟಿಗೆ ಕ್ಯಾಂಟೀನ್‌ನಿಂದ ಎಗ್‌ರೋಲ್‌, ಚಿಕನ್‌ ರೋಲ್‌ ಪಡೆದು ಹಣ ಪಾವತಿಸದೆ ತೆರಳಿದ್ದರು. ಮತ್ತೆ ಕ್ಯಾಂಟೀನ್‌ಗೆ ಬಂದ ಅಕ್ರಂ ಎಂಬಾತ ಗೋಬಿ ಮಂಚೂರಿ ನೀಡುವಂತೆ ಕೇಳಿದ್ದಾನೆ. ಮೊದಲು ಕೊಂಡೊಯ್ದ ಎಗ್‌ರೋಲ್‌ನ ಹಣ ಪಾವತಿಸುವಂತೆ ಮಾಲೀಕರು ಹೇಳಿದ್ದಾರೆ. ಆಗ ವಾಗ್ವಾದ ನಡೆದಿದೆ. ಅದನ್ನು ಕಟ್ಟಡದ ಮೇಲಿಂದ ಗಮನಿಸಿದ ಲೋಕೇಶ್‌, ಕ್ಯಾಂಟೀನ್‌ ಮಾಲೀಕರ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಗುಂಡಿನ ಶಬ್ದ ಕೇಳಿ ಸ್ಥಳಕ್ಕೆ ಬಂದ ಯುವಕರ ಗುಂಪು ಲೋಕೇಶ್‌ನನ್ನು ಹಿಡಿದು ಧರ್ಮದೇಟು ಕೊಟಿದ್ದಾರೆ. ಆರೋಪಿ ಲೋಕೇಶನನ್ನು ಬಂಧಿಸಲಾಗಿದೆ. ಈ ಹಿಂದೆಯೂ ನಡೆದಿದ್ದ ಗುಂಡಿನ ದಾಳಿ ಪ್ರಕರಣದಲ್ಲಿ ಲೋಕೇಶ್‌ ಬಂಧನವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT