ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿತಾಣಗಳಲ್ಲಿ ಚಿತ್ರೀಕರಣ ಮಾಡಿ: ₹2.5 ಕೋಟಿ ಪಡೆಯಿರಿ

‘ಕರ್ನಾಟಕ ಚಲನಚಿತ್ರ ಪ್ರವಾಸೋದ್ಯಮ ನೀತಿ’ಗೆ ಒಪ್ಪಿಗೆ
Last Updated 5 ಡಿಸೆಂಬರ್ 2018, 19:41 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಪ್ರವಾಸಿತಾಣಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಿ. ₹2.5 ಕೋಟಿ ವರೆಗೆ ಪ್ರೋತ್ಸಾಹಧನ ಪಡೆಯಿರಿ.

ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ರಾಜ್ಯ ಸರ್ಕಾರ ಇಂತಹ ಉಪಕ್ರಮಕ್ಕೆ ಮುಂದಾಗಿದೆ. ಇದಕ್ಕಾಗಿ ಕರ್ನಾಟಕ ಚಲನಚಿತ್ರ ಪ್ರವಾಸೋದ್ಯಮ ನೀತಿಗೆ ಬುಧವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಪ್ರವಾಸಿ ತಾಣಗಳಲ್ಲಿ ಚಿತ್ರಿಸುವ ಚಿತ್ರಗಳಿಗೆ ಗರಿಷ್ಠ ₹1 ಕೋಟಿ ಹಾಗೂ ದೊಡ್ಡ ಪ್ರಮಾಣದಲ್ಲಿ ಚಿತ್ರಿಸುವ ಚಲನಚಿತ್ರಗಳಿಗೆ ₹2.5 ಕೋಟಿ ಪ್ರೋತ್ಸಾಹಧನ ನೀಡಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ. ಇದಕ್ಕೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಾಗಿದೆ. ಯಾವುದೇ ಭಾಷೆಯ ಚಲನಚಿತ್ರ ನಿರ್ಮಾಪಕರು ಇದರ ಲಾಭವನ್ನು ಪಡೆಯಬಹುದು. ಚಲನಚಿತ್ರ ನಿರ್ಮಾಣ ವೆಚ್ಚ ₹5 ಕೋಟಿಗಿಂತ ಹೆಚ್ಚಿರಬೇಕು. ಈ ವರ್ಷ 8 ಸಿನಿಮಾಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಇದಕ್ಕಾಗಿ ₹12.5 ಕೋಟಿ ಮೀಸಲಿಡಲಾಗಿದೆ.

‘ನಮ್ಮ ರಾಜ್ಯದ ನಿರ್ಮಾಪಕರು ಚಿತ್ರೀಕರಣಕ್ಕಾಗಿ ವಿದೇಶಗಳಿಗೆ ಹೋಗುತ್ತಿದ್ದಾರೆ. ಇದರಿಂದಾಗಿ ಆ ತಾಣಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮ ತಾಣಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಿದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತದೆ. ಚಿತ್ರೀಕರಣಕ್ಕೆ ಒಪ್ಪಿಗೆ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರೋತ್ಸಾಹಧನ ಪಡೆಯಲು 100 ಅಂಕಗಳನ್ನು ಪಡೆಯಬೇಕು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಮೌಲ್ಯಮಾಪನಾ ತಂಡ ಚಿತ್ರಗಳನ್ನು ಆಯ್ಕೆ ಮಾಡಲಿದೆ.

‘ವನ್ಯಜೀವಿ ತಾಣಗಳಲ್ಲಿ ಚಿತ್ರ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿರಬೇಕು. ಅದರಲ್ಲಿ ಏನು ಬದಲಾವಣೆ ಇಲ್ಲ’ ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.

ಘಟಪ್ರಭಾ ನಾಲೆ ಆಧುನೀಕರಣಕ್ಕೆ ₹573 ಕೋಟಿ

ಘಟಪ್ರಭಾ ಎಡದಂಡೆ ನಾಲೆ ಆಧುನೀಕರಣ ಕಾಮಗಾರಿಗೆ ₹573 ಕೋಟಿ ಮಂಜೂರು ಮಾಡಲು ಸಂಪುಟ ಸಭೆ ನಿರ್ಧರಿಸಿದೆ.

ರಾಮನಗರ ಜಿಲ್ಲೆಯ ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸ್ಥಾಪಿಸಲು ಸಂಪುಟ ಒಪ್ಪಿಗೆ ನೀಡಿದೆ. 300 ಹಾಸಿಗೆಯ ಸಾಮರ್ಥ್ಯದ ಆಸ್ಪತ್ರೆಗೆ ₹450 ಕೋಟಿ ಮೊತ್ತ ಅಂದಾಜು ಮಾಡಲಾಗಿದೆ. ಕಟ್ಟಡ ಕಾಮಗಾರಿ ಆರಂಭಿಸಲು ಪ್ರಸಕ್ತ ಸಾಲಿನಲ್ಲಿ ₹90 ಕೋಟಿ ಒದಗಿಸಲಾಗುತ್ತದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಯಡಹಳ್ಳಿಯಲ್ಲಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಪ್ರಾರಂಭಿಸಲು ₹3.24 ಕೋಟಿ ಮಂಜೂರು. ಮುಂದಿನ ವರ್ಷದಿಂದ ವಿದ್ಯಾರ್ಥಿನಿಯರ ದಾಖಲಾತಿ ಪ್ರಕ್ರಿಯೆ ಆರಂಭ.

ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಹಾಡ್ಯ ಗ್ರಾಮದ ಬಳಿ ಕಾವೇರಿ ನದಿಯಿಂದ ನೀರನ್ನೆತ್ತಿ ಕೆ.ಆರ್. ನಗರ ತಾಲ್ಲೂಕಿನ 12 ಕೆರೆಗಳನ್ನು ತುಂಬಿಸುವ ಯೋಜನೆಗೆ ₹15 ಕೋಟಿ ಮಂಜೂರು.

ಐಎಫ್‌ಎಸ್‌ ಅಧಿಕಾರಿ ಅನಿತಾ ಎಸ್‌.ಅರೇಕಲ್‌ ವಿರುದ್ಧ ಲೋಕಾಯುಕ್ತರು ನೀಡಿರುವ ವರದಿಯ ತಿರಸ್ಕಾರ.

*ಕರ್ನಾಟಕ ಜೀವರಕ್ಷಕ ಹಾಗೂ ವೈದ್ಯಕೀಯ ವೃತ್ತಿನಿರತರ (ತುರ್ತು ಸನ್ನಿವೇಶಗಳಲ್ಲಿ ರಕ್ಷಣೆ ಹಾಗೂ ನಿಯಂತ್ರಣ) (ತಿದ್ದುಪಡಿ) ಮಸೂದೆ–2018ಕ್ಕೆ ಅನುಮೋದನೆ.

ಏರೊ ಇಂಡಿಯಾ: ಸಂಪರ್ಕ ರಸ್ತೆ ಅಭಿವೃದ್ಧಿಗೆ ₹30 ಕೋಟಿ

ಬೆಂಗಳೂರಿನಲ್ಲಿ 2019ರ ಫೆಬ್ರುವರಿಯಲ್ಲಿ ನಡೆಯಲಿರುವ ಏರೊ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಸಂಚಾರ ದಟ್ಟಣೆ ಉಂಟಾಗುವುದನ್ನು ತಪ್ಪಿಸಲು ಸಂಪರ್ಕ ರಸ್ತೆಗಳ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ₹30 ಕೋಟಿ ನೀಡಲು ನಿರ್ಧರಿಸಲಾಯಿತು.

ಹಳೆ ಮದ್ರಾಸ್‌ ರಸ್ತೆಯಿಂದ ಬೂದಿಗೆರೆ, ಮೈಲನಹಳ್ಳಿ ಮೂಲಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವರೆಗೆ, ಕಣ್ಣೂರು ವರ್ತುಲ ರಸ್ತೆಯಿಂದ ಬಾಗಲೂರು ಮಾರ್ಗವಾಗಿ ಬಳ್ಳಾರಿ ರಸ್ತೆ, ಹಿಂದೂಪುರ ಮೂಲಕ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ. ಈ ರಸ್ತೆಗಳ ವಿಸ್ತರಣೆ ಪ್ರಸ್ತಾವ ಇದೆ. ಅದನ್ನು ಈಗ ಕೈಗೆತ್ತಿಕೊಳ್ಳುವುದಿಲ್ಲ. ಮೂಲಸೌಕರ್ಯ ಒದಗಿಸುವ ಕೆಲಸವನ್ನಷ್ಟೇ ಸದ್ಯ ಮಾಡಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT