ಲೋಕೋಪಯೋಗಿಯಲ್ಲಿ ‘ಅಲ್ಪಾವಧಿ ಟೆಂಡರ್’ ಸುಗ್ಗಿ!

7

ಲೋಕೋಪಯೋಗಿಯಲ್ಲಿ ‘ಅಲ್ಪಾವಧಿ ಟೆಂಡರ್’ ಸುಗ್ಗಿ!

Published:
Updated:

ಬೆಂಗಳೂರು: ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ಕಾಯ್ದೆ–2000ರ (ಕೆಟಿಪಿಪಿ ಕಾಯ್ದೆ) ನಿಯಮಾವಳಿಗಳನ್ನು ಉಲ್ಲಂಘಿಸಿ ಲೋಕೋಪಯೋಗಿ ಇಲಾಖೆಯು ಹಾಸನ ಜಿಲ್ಲೆಯಲ್ಲಿ ಬಹುಕೋಟಿ ಕಾಮಗಾರಿಗಳಿಗೆ ಅಲ್ಪಾವಧಿ ಟೆಂಡರ್‌ಗಳನ್ನು ಕರೆದಿದೆ.

ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದಲ್ಲಿ ₹60 ಕೋಟಿ ಕಾಮಗಾರಿ ಹಾಗೂ ಲೋಕೋಪಯೋಗಿ ವಿಭಾಗದಲ್ಲಿ ₹15 ಕೋಟಿ ಕಾಮಗಾರಿಗಳನ್ನು ಅಲ್ಪಾವಧಿ ಟೆಂಡರ್‌ ಮೂಲಕ ನಡೆಸಲು ಉದ್ದೇಶಿಸಲಾಗಿದೆ. ಲೋಕಸಭಾ ಚುನಾವಣೆಯ ನೀತಿಸಂಹಿತೆ ಘೋಷಣೆಯಾಗುವ ಮುನ್ನವೇ ಈ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಇಲಾಖೆ ಉದ್ದೇಶ ಎಂದು  ಮೂಲಗಳು ತಿಳಿಸಿವೆ.

‍ಪ್ರವಾಹ, ಭೂಕಂಪ ಹಾಗೂ ಬೇರೆ ತುರ್ತು ಸಂದರ್ಭಗಳಲ್ಲಿನ ಕಾಮಗಾರಿಗಳಿಗಷ್ಟೇ ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ನೀಡಬಹುದು. ಆ ವೇಳೆಯಲ್ಲಿ ಸಮರೋಪಾದಿಯಲ್ಲಿ ಕಾಮಗಾರಿಗಳನ್ನು ನಡೆಸಬೇಕಿರುವುದರಿಂದ ಇದಕ್ಕೆ ವಿನಾಯಿತಿ ನೀಡಲಾಗುತ್ತದೆ. ಯಾವುದೇ ಖರೀದಿ ಅಥವಾ ಸಿವಿಲ್ ಕಾಮಗಾರಿಗಳ ಅನುದಾನದ ಮೊತ್ತ ₹5 ಲಕ್ಷಗಳಿಗಿಂತ ಕಡಿಮೆ ಇದ್ದರೆ ಕಾಯ್ದೆ ಅನ್ವಯವಾಗುವುದಿಲ್ಲ.

‘ಟೆಂಡರ್‌ಗಳನ್ನು ಆಹ್ವಾನಿಸುವ ಮತ್ತು ಒಪ್ಪಿಗೆ ನೀಡುವ ಮುನ್ನ ಟೆಂಡರ್‌ ಬುಲೆಟಿನ್‌ ಹೊರಡಿಸಬೇಕಿತ್ತು. ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕಿತ್ತು. ಈ ಕೆಲಸಗಳು ಆಗಿಲ್ಲ’ ಎಂದು ಮೂಲಗಳು ತಿಳಿಸಿವೆ.

‘ರಾಜ್ಯದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಬಂದ ಮೇಲೆ ಹಾಸನ ಜಿಲ್ಲೆಯ ಕಾಮಗಾರಿಗಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ. ಪ್ರತಿ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಗೊಂದು ಕೊಡುಗೆ ನೀಡುವ ಸಂಪ್ರದಾಯ ಬೆಳೆದು ಬಂದಿದೆ. ಅದೇ ರೀತಿಯಲ್ಲಿ, ಜಿಲ್ಲೆಯ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಲಾಗುತ್ತಿದೆ. ಈ ಕಾಮಗಾರಿಗಳನ್ನು ಆಯ್ದ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಇಲಾಖೆಯಲ್ಲಿ ಸಚಿವ ಎಚ್‌.ಡಿ.ರೇವಣ್ಣ ಒತ್ತಡ ವಿಪರೀತವಾಗಿದೆ. ಉಸಿರು ಕಟ್ಟುವ ವಾತಾವರಣ ಇದೆ. ಒಂದು ವೇಳೆ, ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದಿದ್ದರೆ ವರ್ಗಾವಣೆ ಶಿಕ್ಷೆ ಕಾದಿರುತ್ತದೆ’ ಎಂದು ಮತ್ತೊಬ್ಬ ಅಧಿಕಾರಿ ಅಳಲು ತೋಡಿಕೊಂಡರು.

ಐದೇ ದಿನಗಳಲ್ಲಿ ಪ್ರಕ್ರಿಯೆ

ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 373ರ (81.15 ಕಿ.ಮೀ.ಯಿಂದ 125 ಕಿ.ಮೀ.ವರೆಗೆ) ವಾರ್ಷಿಕ ನಿರ್ವಹಣಾ ಕಾಮಗಾರಿಗೆ ಡಿಸೆಂಬರ್‌ 28ರಂದು ಟೆಂಡರ್‌ ಕರೆಯಲಾಗಿದೆ. ಈ ಟೆಂಡರ್‌ಗಳ ಮೊತ್ತ ಕ್ರಮವಾಗಿ ₹58.77 ಲಕ್ಷ, ₹58.91 ಲಕ್ಷ, ₹53.81 ಲಕ್ಷ ಹಾಗೂ 54.82 ಲಕ್ಷಗಳು. ಗುತ್ತಿಗೆದಾರರು ಜನವರಿ 3ರೊಳಗೆ ಅರ್ಜಿ ಹಾಕಬೇಕು. ಜನವರಿ 4ರಂದು ಸಂಜೆ 5ಕ್ಕೆ ಟೆಂಡರ್‌ ಬಿಡ್‌ ತೆರೆಯಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ ತಿಳಿಸಿದೆ.

ಹೇಮಾವತಿಯಲ್ಲೂ ದರ್ಬಾರು

ಜಲಸಂಪನ್ಮೂಲ ಇಲಾಖೆಯು ಗೋರೂರು ಹೇಮಾವತಿ ಜಲಾಶಯ ವಿಭಾಗದಲ್ಲಿ ಅಲ್ಪಾವಧಿ ಟೆಂಡರ್‌ ಮೂಲಕ ನಾಲೆಯ ಆಧುನೀಕರಣ, ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಿದೆ.

ಈ ಕಾಮಗಾರಿಗಳನ್ನು ನಡೆಸಲು ಎಚ್‌.ಡಿ.ರೇವಣ್ಣ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಈ ಕಾಮಗಾರಿಗಳ ಮೊತ್ತ ಬಹುಕೋಟಿ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ‘ಜಲಸಂಪನ್ಮೂಲ ಇಲಾಖೆಯಲ್ಲಿ ಹಾಸನ ಜಿಲ್ಲೆಯ ಕಾಮಗಾರಿಗಳ ಬಗ್ಗೆ ನನ್ನಲ್ಲಿ ಕೇಳಬೇಡಿ. ಅದು ನನಗೆ ಸಂಬಂಧಪಟ್ಟಿದ್ದಲ್ಲ. ಅದಕ್ಕೆ ಮುಖ್ಯಸ್ಥರೇ ಬೇರೆ ಇದ್ದಾರೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾರ್ಮಿಕವಾಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !