ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾದಲ್ಲಿ ಕಲೆ ಸಾಧ್ಯತೆಯೇ ಹೊರತು, ಉದ್ದೇಶ ಅಲ್ಲ

Last Updated 24 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಶೈಕ್ಷಣಿಕ ಶಿಸ್ತಿನ ಸ್ವರೂಪವೂ ಸೇರಿದಂತೆ ಚಲನಚಿತ್ರ ಮಾಧ್ಯಮದ ಅಪಾರ ಸಾಧ್ಯತೆಗಳನ್ನು ಚರ್ಚಿಸಬಲ್ಲ ಹಾಗೂ ಸಿನಿಮಾ ರಸಾನುಭೂತಿಯ ಬಗ್ಗೆ ಒಳನೋಟಗಳುಳ್ಳ ಕನ್ನಡದ ಬೆರಳೆಣಿಕೆಯ ಚಿಂತಕ-ಲೇಖಕರಲ್ಲಿ ಎನ್‌. ವಿದ್ಯಾಶಂಕರ್‌ ಒಬ್ಬರು. ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಕರ್ನಾಟಕವನ್ನು ಸಜ್ಜುಗೊಳಿಸಿದ 'ಸುಚಿತ್ರ ಫಿಲ್ಮ್‌ ಸೊಸೈಟಿ'ಯ ಬಳಗದಲ್ಲಿ ಒಬ್ಬರಾಗಿದ್ದ ಅವರು, ವಿಶ್ವದ ವಿವಿಧ ಫಿಲ್ಮ್‌ ಫೆಸ್ಟಿವಲ್‌ಗಳಲ್ಲಿ ಭಾಗವಹಿಸಿರುವ ಅನುಭವಿ. ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ಹತ್ತೂ ಆವೃತ್ತಿಗಳ ಸಂಘಟನೆಯಲ್ಲಿ ಅವರದು ಪ್ರಮುಖ ಪಾತ್ರ. ಮೊದಲ ಮೂರು ಉತ್ಸವಗಳಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ, ಎರಡು ಸಲ ಉಪ ನಿರ್ದೇಶಕರಾಗಿ ಹಾಗೂ ಪ್ರಸಕ್ತ ಚಿತ್ರ ಋತು ಸೇರಿದಂತೆ, ಕಳೆದ ನಾಲ್ಕು ವರ್ಷಗಳಿಂದ ಕಲಾತ್ಮಕ ನಿರ್ದೇಶಕರಾಗಿ ಚಿತ್ರೋತ್ಸವವನ್ನು ರೂಪಿಸಿದ್ದಾರೆ. ಸಿನಿಮೋತ್ಸವಗಳು ಹಾಗೂ ಸಿನಿಮಾ ಸಾಧ್ಯತೆಗಳ ಬಗ್ಗೆ 'ಪ್ರಜಾವಾಣಿ’ ಜೊತೆಗಿನ ಅವರ ಮಾತುಕತೆಯ ಮುಖ್ಯಾಂಶಗಳು ಇಲ್ಲಿವೆ.

* ಚಿತ್ರೋತ್ಸವಗಳು ಏಕೆ ಬೇಕು? ಅವುಗಳಿಂದಾಗುವ ಮುಖ್ಯವಾದ ಪ್ರಯೋಜನ ಏನು?
ಚಲನಚಿತ್ರ ಮಾಧ್ಯಮಕ್ಕಿರುವ ಸಾಂಸ್ಕೃತಿಕ ಆಯಾಮವನ್ನು ಮುನ್ನೆಲೆಗೆ ತರುವ ದೃಷ್ಟಿಯಿಂದ ಚಿತ್ರೋತ್ಸವಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಾಂಸ್ಕೃತಿಕ ಕೊಡುಕೊಳುವಿಕೆ ಫಿಲ್ಮ್‌ ಫೆಸ್ಟಿವಲ್‌ಗಳಿಂದಾಗುವ ಮುಖ್ಯ ಲಾಭ. ವಿಶ್ವ ಸಿನಿಮಾಗಳನ್ನು ನೋಡಲು ಹಂಬಲಿಸುವ ಚಿತ್ರರಸಿಕರಿಗೆ ಚಿತ್ರಮಂದಿರಗಳಲ್ಲಿ ಲಭಿಸುವುದು ಹಾಲಿವುಡ್‌ ಚಿತ್ರಗಳು ಮಾತ್ರ. ಚಿತ್ರೋತ್ಸವಗಳಲ್ಲಿ ಸಣ್ಣಪುಟ್ಟ ದೇಶ–ಭಾಷೆಗಳ ಅತ್ಯುತ್ತಮ ಚಿತ್ರಗಳನ್ನು ನೋಡುವ ಅವಕಾಶ ದೊರೆಯುತ್ತದೆ. ’ಬೆಂಗಳೂರಿನಲ್ಲಿ ಜಗತ್ತು’ ಎನ್ನುವ ಬೆಂಗಳೂರು ಸಿನಿಮೋತ್ಸವದ ಧ್ಯೇಯವಾಕ್ಯ ಸೂಚಿಸುವುದು ಈ ಒಳಗೊಳ್ಳುವಿಕೆಯನ್ನೇ. ವಿವಿಧ ದೇಶಗಳ ನಡುವೆ ಸಂಬಂಧವನ್ನು ಬೆಸೆಯುವ ಕೆಲಸವನ್ನು ಈ ಉತ್ಸವಗಳು ಮಾಡುತ್ತವೆ. ಸಣ್ಣ ಸಣ್ಣ ಊರುಗಳೂ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ 5 ಸಾವಿರಕ್ಕೂ ಹೆಚ್ಚು ಚಿತ್ರೋತ್ಸವಗಳು ನಡೆಯುತ್ತಿರುವುದು ಅವುಗಳ ಪ್ರಸ್ತುತತೆಗೆ ಉದಾಹರಣೆ. ಭಾರತದ ಮಟ್ಟಿಗೆ ಹೇಳುವುದಾದರೆ ಕಳೆದ ಹತ್ತು ವರ್ಷಗಳಲ್ಲಿ ಚಿತ್ರೋತ್ಸವಗಳ ಸಂಖ್ಯೆ ಹೆಚ್ಚುತ್ತಿದೆ ಹಾಗೂ ಪಟ್ಟಣಗಳಲ್ಲೂ ಸಿನಿಮಾ ಸಂಸ್ಕೃತಿ ಹರಡುತ್ತಿದೆ.

ಕಳೆದ 10 ವರ್ಷಗಳಲ್ಲಿ ಡಿಜಿಟಲ್‌ ಕ್ರಾಂತಿಯ ಕಾರಣದಿಂದಾಗಿ ಜಾಗತಿಕ ಸಿನಿಮಾಗಳು ಸುಲಭವಾಗಿ ಲಭ್ಯವಿವೆ. ಆದರೂ ಉತ್ಸವಗಳ ಮಹತ್ವ ಮುಕ್ಕಾಗಿಲ್ಲ. ಏಕೆಂದರೆ, ಮನೆಯಲ್ಲಿ ಒಂಟಿಯಾಗಿ ಕುಳಿತು ನೋಡುವುದರಿಂದ ಸಿನಿಮಾದ ನಿಜವಾದ ಅನುಭವ ದೊರೆಯುವುದು ಸಾಧ್ಯವಿಲ್ಲ. ಭಾವನಾತ್ಮಕವಾಗಿ ಹಾಗೂ ಬೌದ್ಧಿಕವಾಗಿ ಕೂಡ ಜನರ ಜೊತೆ ಸಿನಿಮಾ ನೋಡುವುದು ಹೆಚ್ಚು ಪರಿಣಾಮಕಾರಿ. ಸಾಮುದಾಯಿಕ ನೆಲೆಯಲ್ಲಿ ದೃಶ್ಯ ಸಾಧ್ಯತೆಗಳನ್ನು ಆಸ್ವಾದಿಸಲು ಚಿತ್ರೋತ್ಸವಗಳು ಅಗತ್ಯ.

* ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರು ಸಿನಿಮೋತ್ಸವದ ಭಾಗವಾಗಿ ಮೈಸೂರಿನಲ್ಲೂ ಸಿನಿಮಾ ಪ್ರದರ್ಶನಗಳು ನಡೆಯುತ್ತಿದ್ದವು. ಈ ಬಾರಿ ಬೆಂಗಳೂರಿಗಷ್ಟೇ ಉತ್ಸವ ಸೀಮಿತಗೊಂಡಿದೆ. ಚಿತ್ರೋತ್ಸವಗಳು ವಿಕೇಂದ್ರೀಕರಣ ಆಗುತ್ತಿರುವುದು ಒಳ್ಳೆಯ ಸೂಚನೆ ಎನ್ನುವುದಕ್ಕೆ ಇದು ವಿರೋಧಾಭಾಸ ಅಲ್ಲವೇ?

ಈ ಪ್ರಶ್ನೆಯನ್ನು ನೀವು ಸರ್ಕಾರವನ್ನು ಹಾಗೂ ಚಲನಚಿತ್ರ ಅಕಾಡೆಮಿಯನ್ನು ಕೇಳಬೇಕು. ಸಂಘಟಕನಾಗಿ ಮೈಸೂರಿನಲ್ಲೂ ಚಿತ್ರಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುವುದು ನನಗೆ ಸಮಸ್ಯೆಯಲ್ಲ. ಆದರೆ, ಅದನ್ನು ನಿರ್ಧರಿಸುವುದು ನಾನಲ್ಲ. ಮುಂದಿನ ದಿನಗಳಲ್ಲಿ 'ಮೈಸೂರು ಸಿನಿಮೋತ್ಸವ' ಹೆಸರಿನಲ್ಲೇ ಪ್ರತ್ಯೇಕ ಉತ್ಸವ ಆಗಬಹುದು. ಸಿನಿಮಾ ಸಂಸ್ಕೃತಿಯನ್ನು ಪಸರಿಸುವ ದೃಷ್ಟಿಯಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಚಿತ್ರೋತ್ಸವಗಳು ನಡೆಯಬೇಕು ಎನ್ನುವುದು ನನ್ನ ವೈಯಕ್ತಿಕ ಅನಿಸಿಕೆ.

* ಸಮಕಾಲೀನ ಜಗತ್ತನ್ನು ಗ್ರಹಿಸುವಲ್ಲಿ ಉಳಿದ ಮಾಧ್ಯಮಗಳಿಗಿಂತ ಸಿನಿಮಾ ಹೇಗೆ ಭಿನ್ನ?
ಸಮಕಾಲೀನ ಜಗತ್ತಿನ ನೇರ ಅಭಿವ್ಯಕ್ತಿ ಸಿನಿಮಾ ಮಾಧ್ಯಮದಲ್ಲಷ್ಟೇ ಪರಿಣಾಮಕಾರಿಯಾಗಿ ಸಾಧ್ಯ. ಸಾಹಿತ್ಯದಲ್ಲಿ ಅನುಭವವನ್ನು ಅರಗಿಸಿಕೊಂಡು ಅಭಿವ್ಯಕ್ತಿ ರೂಪುಗೊಳ್ಳುತ್ತದೆ. ಸಿನಿಮಾದಲ್ಲಿ ನೇರವಾಗಿ ಹೇಳಲಾಗುತ್ತದೆ. ಸಿರಿಯಾ ಸಮಸ್ಯೆಯನ್ನು ಉದಾಹರಣೆಯಾಗಿ ನೀಡುವುದಾದರೆ, ಈ ಬಾರಿಯ ಚಿತ್ರೋತ್ಸವದಲ್ಲಿ ಸಿರಿಯಾ ಸಮಸ್ಯೆಯ ಕುರಿತ ಕೆಲವು ಸಿನಿಮಾಗಳಿವೆ. ವಲಸೆಯ ಸಮಸ್ಯೆಯನ್ನೂ ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಬೇರೆ ಮಾಧ್ಯಮಗಳಿಗಿಂತಲೂ ಹೆಚ್ಚು ನೇರವಾಗಿ, ಮುಕ್ತವಾಗಿ ಸಿನಿಮಾ ಮಾಧ್ಯಮ ಮಾತನಾಡುತ್ತದೆ. ಇದು ದೃಶ್ಯಮಾಧ್ಯಮದ ಪ್ರಮುಖ ಲಕ್ಷಣ. ಭ್ರಷ್ಟಾಚಾರದ ಬಗ್ಗೆ ಕಾದಂಬರಿ ರಚನೆಯಾಗುವುದಕ್ಕೆ ಎಷ್ಟೋ ಮೊದಲು ಅದನ್ನು ಸಿನಿಮಾ ಚರ್ಚಿಸುತ್ತದೆ. ಭಾಷೆಯ ಚೌಕಟ್ಟನ್ನು ಮೀರಿ ಸಹೃದಯನನ್ನು ತಲುಪುವ ಸಾಧ್ಯತೆ ಸಿನಿಮಾದ ಬಹುದೊಡ್ಡ ಶಕ್ತಿ. ಈ ವರ್ಷದ ಸಿನಿಮೋತ್ಸವದ ಉದ್ಘಾಟನಾ ಚಿತ್ರವಾದ ಇಟಲಿಯ 'ಇಟ್ಸ್ ದಿ ಲಾ' ಭ್ರಷ್ಟಾಚಾರದ ಕಥನ ಒಳಗೊಂಡಿದೆ. ಇಟಲಿಯ ನಗರವೊಂದರಲ್ಲಿ ನಡೆಯುವ ಭ್ರಷ್ಟಾಚಾರ, ದೇಶ-ಭಾಷೆಯ ಚೌಕಟ್ಟು ಮೀರಿ ನಮ್ಮ ಬೆಂಗಳೂರಿನದೇ ಭ್ರಷ್ಟ ವ್ಯವಸ್ಥೆಯ ಕಥೆ ಎನ್ನಿಸಬಹುದು. ಹೀಗೆ ಪ್ರಭಾವಿಸುವುದು ಸಿನಿಮಾ ಮಾಧ್ಯಮಕ್ಕಿರುವ ಶಕ್ತಿ.

* ಒಂದು ಒಳ್ಳೆಯ ಸಿನಿಮಾ ಎನ್ನುವಂತಹದ್ದು ದೃಶ್ಯ ಮಾಧ್ಯಮದ ವ್ಯಾಕರಣವನ್ನು ಪೂರೈಸಿದರೆ ಸಾಕಾ ಅಥವಾ ಅದರಾಚೆಗೆ ಸಮಾಜದೊಂದಿಗೆ ಸ್ಪಂದನ–ಸಂಬಂಧ ಹೊಂದಿರಬೇಕಾ?
ಒಳ್ಳೆಯದು ಯಾವುದು ಎನ್ನುವ ಪ್ರಶ್ನೆಯನ್ನು ಎಲ್ಲ ಕಲಾಪ್ರಕಾರಗಳಲ್ಲೂ ಚರ್ಚಿಸಲಾಗುತ್ತದೆ. ಆದರೆ, ಅದಕ್ಕೆ ನಿರ್ದಿಷ್ಟವಾದ ವ್ಯಾಖ್ಯಾನ ಇರುವುದಿಲ್ಲ. ಒಳ್ಳೆಯದು ಎನ್ನುವಂತಹದ್ದು ಎಲ್ಲ ಕಲೆಗಳಲ್ಲೂ ಇರುತ್ತದೆ. ನಿಮ್ಮ ಪ್ರಜ್ಞೆಯನ್ನು ಯಾವುದು ಪಲ್ಲಟಗೊಳಿಸುವುದೋ ಅದು ಉತ್ತಮವಾದುದಾಗುತ್ತದೆ ಎಂದು ಡಿ.ಆರ್‌. ನಾಗರಾಜ್‌ ಹೇಳುತ್ತಿದ್ದರು. ಅಂತರಂಗ ಮತ್ತು ಬಹಿರಂಗ ಪ್ರಜ್ಞೆ ಎರಡನ್ನು ಏಕಕಾಲದಲ್ಲಿ ತಟ್ಟುವ ಕಾರಣದಿಂದಲೇ ಗೋಪಾಲಕೃಷ್ಣ ಅಡಿಗರು ನನಗೆ ತುಂಬಾ ಮುಖ್ಯವಾದ ಕವಿ ಎನ್ನಿಸುತ್ತಾರೆ. ಸಿನಿಮಾಕ್ಕೆ ಕೂಡ ಹೀಗೆ ನಮ್ಮನ್ನು ತಟ್ಟುವ ಶಕ್ತಿಯಿದೆ. ತಕ್ಷಣದ ಪ್ರತಿಕ್ರಿಯೆ, ಸಹೃದಯ ಸಂವಾದ, ಬೌದ್ಧಿಕ ನೆಲೆ - ಈ ಮೂರೂ ನೆಲೆಗಳಲ್ಲಿ ಸಿನಿಮಾ ನಮ್ಮನ್ನು ಕಾಡುತ್ತದೆ.  ಒಂದು ಕೆಟ್ಟ ಸಿನಿಮಾದಲ್ಲೂ ಸಾಕಷ್ಟು ಒಳ್ಳೆಯ ಸಂಗತಿಗಳು ಇರಲಿಕ್ಕೆ ಸಾಧ್ಯ.

ಸಿನಿಮಾ ಎಷ್ಟರಮಟ್ಟಿಗೆ ವೈಯಕ್ತಿಕವಾಗಿರಬೇಕು ಹಾಗೂ ಸಾಮಾಜಿಕವಾಗಿರಬೇಕು ಎಂದು ಪ್ರಶ್ನಿಸಲಾಗುತ್ತದೆ. ಇಲ್ಲೊಂದು ಸಂಗತಿಯನ್ನು ಗಮನಿಸಬೇಕು. ಕಲೆಯ ಉಳಿದೆಲ್ಲ ಪ್ರಕಾರಗಳು ಅಂತರಂಗದ ನೆಲೆಯಲ್ಲಿ ರೂಪುಗೊಂಡರೆ, ಸಿನಿಮಾ ಮಾತ್ರ ವೈಜ್ಞಾನಿಕ ವಿಕಾಸದಲ್ಲಿ ಅರಳಿದ ಕಲೆ. ಸಿನಿಮಾ ಒಂದು ವೈಜ್ಞಾನಿಕ ಉತ್ಪನ್ನ. ಆ ಕಾರಣದಿಂದಲೇ ಇತರೆ ಕಲೆಗಳಿಗಿಂತಲೂ ಸಿನಿಮಾವನ್ನು ಬೇರೆಯಾಗಿಯೇ ನೋಡಬೇಕು. ಹಾಗಾಗಿ ಇತರ ಕಲಾಪ್ರಕಾರಗಳ ಇತಿಹಾಸದ ಜೊತೆಗೆ ಸಿನಿಮಾ ಮಾಧ್ಯಮವನ್ನು ಇಟ್ಟು ನೋಡುವಾಗ ಎಚ್ಚರದಿಂದ ಇರಬೇಕು. ಚಲನಚಿತ್ರ ಮಾಧ್ಯಮದಲ್ಲಿ ಕಲೆ ಎನ್ನುವುದು ಒಂದು ದೊಡ್ಡ ಸಾಧ್ಯತೆಯೇ ಹೊರತು, ಅದು ಉದ್ದೇಶ ಅಲ್ಲ.

* ಜಾಗತಿಕ ಚಲನಚಿತ್ರ ನಕಾಶೆಯಲ್ಲಿ ಕನ್ನಡ ಸಿನಿಮಾದ ಸ್ಥಿತಿಗತಿ ಯಾವ ಬಗೆಯದು?
ಕನ್ನಡ ಸಿನಿಮಾ ಮೂಲತಃ ಒಂದು ಸಾಂಸ್ಕೃತಿಕ ಚಟುವಟಿಕೆ ಎನ್ನುವುದು ನನ್ನ ಗ್ರಹಿಕೆ. ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯದ ಆಯಾಮ ಮುನ್ನೆಲೆಗೆ ಬಂದಿದೆಯಾದರೂ, ಸಿನಿಮಾವನ್ನು ನಾವು ಗ್ರಹಿಸುತ್ತಿರುವುದು ಸಾಂಸ್ಕೃತಿಕ ನೆಲೆಗಟ್ಟಿನಲ್ಲೇ. ರಾಜಕುಮಾರ್ ಅವರನ್ನು ನಾವು ಏಕೆ ತುಂಬಾ ಗೌರವಿಸುತ್ತೇವೆಂದರೆ, ಅವರು ಸಂಸ್ಕೃತಿಯ ಪ್ರತಿನಿಧಿಯಾಗಿ ನಮಗೆ ಕಾಣಿಸುತ್ತಾರೆ. ಪುರಂದರದಾಸ, ಕನಕದಾಸ, ಪುಲಿಕೇಶಿ, ಕೃಷ್ಣದೇವರಾಯ - ಹೀಗೆ ಕನ್ನಡದ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಿಕೊಡುವ ಅನೇಕ ಪಾತ್ರಗಳಲ್ಲಿ ಅವರು ನಟಿಸುವ ಮೂಲಕ ನಮ್ಮ ಗೌರವಕ್ಕೆ ಪಾತ್ರರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳಲ್ಲಿ ವ್ಯಾಪಾರಿ ಅಂಶಗಳು ಹೆಚ್ಚಾಗಿ ಕಾಣಿಸುತ್ತಿದ್ದರೂ, ಹೊಸ ತಲೆಮಾರಿನ ಹುಡುಗರು ಭಿನ್ನವಾಗಿ ಯೋಚಿಸುತ್ತಿರುವುದನ್ನು ಗಮನಿಸಬೇಕು. ಚಿತ್ರಮಾಧ್ಯಮದ ನಿಜವಾದ ಸ್ವರೂಪ, ವ್ಯಾಕರಣ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆ ಕಾರಣದಿಂದಾಗಿ ಕನ್ನಡ ಸಿನಿಮಾದ ನಾಳೆಗಳು ಆಶಾದಾಯಕವಾಗಿ ಇರಲಿವೆ ಎನ್ನುವ ನಿರೀಕ್ಷೆ ನನ್ನದು.

ನಮ್ಮಲ್ಲಿ ಸಿನಿಮಾದ ಚರ್ಚೆ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ನಡೆಯುತ್ತಿದೆಯೇ ಹೊರತು, ಬೌದ್ಧಿಕ ನೆಲೆಗಟ್ಟಿನಲ್ಲಲ್ಲ. ಕೇರಳ, ಪಶ್ಚಿಮ ಬಂಗಾಳದಲ್ಲಿ ಸಾಹಿತ್ಯ ಕ್ಷೇತ್ರದಿಂದ ಸಿನಿಮಾ ಚಿಂತಕರು ಮೂಡಿಬಂದಂತೆ ನಮ್ಮಲ್ಲಿ ಆಗಿಲ್ಲ. ಸಿನಿಮಾವನ್ನು ಶೈಕ್ಷಣಿಕ ನೆಲೆಗಟ್ಟಿನಲ್ಲಿ ಅರಿಯುವ ಪ್ರಯತ್ನಗಳು ಹೆಚ್ಚಬೇಕು. ದೃಶ್ಯ ಮಾಧ್ಯಮವನ್ನು ಅರ್ಥ ಮಾಡಿಕೊಳ್ಳುವ ಕಲಿಕೆ ನಮ್ಮ ಶಿಕ್ಷಣಕ್ರಮದ ಭಾಗವಾಗಬೇಕು.

* ಫಿಲ್ಮ್‌ ಫೆಸ್ಟಿವಲ್‌ಗಳ ಅತ್ಯುತ್ತಮ ಮಾದರಿ ಯಾವುದು?
ಚಿತ್ರೋತ್ಸವಗಳಲ್ಲಿ ಇದು ಅತ್ಯುತ್ತಮ ಎನ್ನುವಂತಹ ಏಕರೂಪದ ಮಾದರಿಗಳು ಇರುವುದಿಲ್ಲ. ಅವರವರ ಅಗತ್ಯಗಳಿಗೆ ತಕ್ಕಂತೆ ಚಿತ್ರೋತ್ಸವಗಳು ರೂಪುಗೊಳ್ಳುತ್ತವೆ. ಕೆಲವರು ನಿರ್ದಿಷ್ಟ ವಿಷಯ ಇಟ್ಟುಕೊಂಡು ಸಿನಿಮಾಹಬ್ಬ ರೂಪಿಸುತ್ತಾರೆ. ಮತ್ತೆ ಕೆಲವರು ತಮ್ಮ ಫೆಸ್ಟಿವಲ್‌ಗಳ ಸ್ವರೂಪ ದೊಡ್ಡದಾಗುವುದನ್ನು ಬಯಸುವುದಿಲ್ಲ. ಅವರ ಉದ್ದೇಶ ಸಿನಿಮಾ ಪ್ರದರ್ಶನ ಮಾತ್ರ. ಮತ್ತೆ ಕೆಲವು ಉತ್ಸವಗಳು ಗ್ಲಾಮರ್‌ ಕಾರಣದಿಂದಾಗಿ ಗಮನಸೆಳೆಯುತ್ತವೆ. ಬೆಂಗಳೂರು ಸಿನಿಮೋತ್ಸವದ ವಿಶೇಷ ಇರುವುದು, ಅದರ ಶೈಕ್ಷಣಿಕ ಆಶಯದಲ್ಲಿ. ಸಿನಿಮಾ ಪ್ರದರ್ಶನದ ಜೊತೆಗೆ – ಚಿತ್ರಕಥೆಯ ರಚನೆ, ಧ್ವನಿವಿನ್ಯಾಸ, ಸಂಕಲನ, ಛಾಯಾಗ್ರಹಣ, ಮುಂತಾದ ಸಿನಿಮಾ ವ್ಯಾಕರಣದ ಕುರಿತು ಚರ್ಚೆ, ಸಂಕಿರಣಗಳು ನಡೆಯುತ್ತವೆ. ಇವೆಲ್ಲ ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಪೂರಕವಾದವು. ಮಾರುಕಟ್ಟೆಯ ಸಾಧ್ಯತೆಗಳನ್ನೂ ಚಿತ್ರೋತ್ಸವಗಳು ತೆರೆದಿಡುತ್ತವೆ. ಸ್ಥಳೀಯ ಸಿನಿಮಾ ವಿದ್ಯಾರ್ಥಿಗಳು ದೃಶ್ಯಮಾಧ್ಯಮದ ವ್ಯಾಕರಣ ಕಲಿಯಲಿಕ್ಕೆ ಚಿತ್ರೋತ್ಸವಗಳು ಒಳ್ಳೆಯ ವೇದಿಕೆ.

* ಕಳೆದ ಹತ್ತು ವರ್ಷಗಳಲ್ಲಿ ಬೆಂಗಳೂರು ಸಿನಿಮೋತ್ಸವದಲ್ಲಿ ಆಗಿರುವ ಪ್ರಮುಖ ಬದಲಾವಣೆಗಳೇನು?
ಬೆಂಗಳೂರು ಸಿನಿಮೋತ್ಸವದಲ್ಲಿನ ಬದಲಾವಣೆಗಳನ್ನು ಎರಡು ರೀತಿಗಳಲ್ಲಿ ಗುರ್ತಿಸಬಹುದು. ಮೊದಲನೆಯದು ಸಾರ್ವಜನಿಕರ ಭಾಗವಹಿಸುವಿಕೆಯ ಪ್ರಮಾಣ. ಇನ್ನೊಂದು, ಗುಣಮಟ್ಟಕ್ಕೆ ಸಂಬಂಧಿಸಿದ್ದು. ಚಿತ್ರೋತ್ಸವದಲ್ಲಿ ಭಾಗವಹಿಸುವ ಪ್ರತಿನಿಧಿಗಳ ಸಂಖ್ಯೆ 600ರಿಂದ 8000ಕ್ಕೂ ಹೆಚ್ಚು ಏರಿರುವುದು ಬೆಳವಣಿಗೆಯ ಸ್ಪಷ್ಟ ಉದಾಹರಣೆ. ಗುಣಮಟ್ಟದ ವಿಷಯಕ್ಕೆ ಬರುವುದಾದರೆ, ಜಗತ್ತಿನ ಅತ್ಯುತ್ತಮ ಚಿತ್ರಗಳನ್ನು ತರಿಸುವ ಸಾಮರ್ಥ್ಯ ನಮಗಿದೆ. ಆರಂಭದ ಉತ್ಸವಗಳಲ್ಲಿ ಆರ್ಥಿಕ ಅಡಚಣೆಯಿತ್ತು. ಸರ್ಕಾರ ಚಿತ್ರೋತ್ಸವವನ್ನು ವಹಿಸಿಕೊಂಡ ನಂತರ ಅತ್ಯುತ್ತಮ ಚಿತ್ರಗಳನ್ನು ತರಿಸುವುದು ಸಾಧ್ಯವಾಗಿದೆ. ಕಳೆದ ಎರಡು ಮೂರು ತಿಂಗಳಲ್ಲಿ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲು ಸುಮಾರು 1000 ಚಿತ್ರಗಳು ನಮ್ಮ ಆಯ್ಕೆಗೆ ದೊರೆತಿದ್ದವು. ಈ ಸಂಖ್ಯೆಯೇ ವಿಶ್ವ ಸಿನಿಮಾ ನಕಾಶೆಯಲ್ಲಿ ಬೆಂಗಳೂರು ಸಿನಿಮೋತ್ಸವಕ್ಕೆ ಮಾನ್ಯತೆ ದೊರೆತಿರುವುದನ್ನು ಸೂಚಿಸುವಂತಿದೆ. ಭಾರತೀಯ ಚಿತ್ರೋತ್ಸವಗಳಲ್ಲೂ ಬೆಂಗಳೂರು ಮುಂಚೂಣಿಯಲ್ಲಿದೆ. ಉಳಿದೆಲ್ಲ ಚಿತ್ರೋತ್ಸವಗಳಿಗಿಂತಲೂ ಬೆಂಗಳೂರಿನಲ್ಲಿ ಹೊಸ ತಲೆಮಾರು ಹೆಚ್ಚು ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಗಮನಾರ್ಹ ಅಂಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT