ಭಾನುವಾರ, ಅಕ್ಟೋಬರ್ 20, 2019
27 °C

ಅನರ್ಹ ಶಾಸಕ ಶ್ರೀಮಂತ ಪಾಟೀಲಗೆ ಘೇರಾವ್‌ ಹಾಕಿದ ರೈತರು

Published:
Updated:

ದರೂರ (ಬೆಳಗಾವಿ ಜಿಲ್ಲೆ): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೆರೆ ಸಂತ್ರಸ್ತರಿಗೆ ಪರಿಹಾರದ ಚೆಕ್‌ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ಅನರ್ಹ ಶಾಸಕ ಶ್ರೀಮಂತ ಪಾಟೀಲ ಅವರಿಗೆ ಗ್ರಾಮದ ಬಸ್‌ ನಿಲ್ದಾಣದ ಬಳಿ ರೈತರು ಘೇರಾವ್‌ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು.

‘ನಿಮ್ಮ ಮೇಲೆ ವಿಶ್ವಾಸವಿಟ್ಟು ಜನ ಆಯ್ಕೆ ಮಾಡಿ ಕಳಿಸಿದ್ದರು. ಆದರೆ, ವೈಯಕ್ತಿಕ ಹಿತಾಸಕ್ತಿಗಾಗಿ ರಾಜೀನಾಮೆ ನೀಡಿದೀರಿ. ಆಗ ಹೋದವರು ಈಗ ಬಂದಿದ್ದೀರಿ ನಾಚಿಕೆಯಾಗುವುದಿಲ್ಲವೇ? ಆಯ್ಕೆ ಮಾಡಿದ ಜನರಿಗೆ ಮೋಸ ಮಾಡಲು ಹೇಗೆ ಮನಸ್ಸು ಬಂತು. ಮೋಸಗಾರರಿಗೆ ಇಲ್ಲೇನು ಕೆಲಸ. ನೀವು ಇಲ್ಲಿಂದ ಹೊರಡಿ’ ಎಂದು ರೈತ ಸಂಘದ ಜಿಲ್ಲಾ ಉಪಾದ್ಯಕ್ಷ ಎ.ಬಿ.ಹಳ್ಳೂರ ಒತ್ತಾಯಿಸಿದರು.

‘ನಿಮ್ಮ ಸಕ್ಕರೆ ಕಾರ್ಖಾನೆಯು ರೈತರಿಗೆ ಸರಿಯಾಗಿ ಬಿಲ್ ಪಾವತಿಸುತ್ತಿಲ್ಲ. ರೈತರ ಬಗ್ಗೆ ನಿಮಗಿರುವ ಕಾಳಜಿಯನ್ನು ಇದು ತೋರಿಸುತ್ತದೆ. ಈ ಸಲ ನೀವು ಪುನಃ ಆಯ್ಕೆಯಾಗುವುದಿಲ್ಲ. ಮತದಾರರು ನಿಮಗೆ ಪಾಠ ಕಲಿಸುವುದು ಖಚಿತ’ ಎಂದರು.

ಮುಖಂಡರಾದ ಪ್ರಕಾಶ ಪುಜಾರಿ, ಯಶೋಧರ ನೆಮ್ಮನ್ನವರ, ಭರತೇಶ ಗುಂಡವಾಡೆ, ದಶರಥ ನಾಯಿಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Post Comments (+)