ಶಿಸ್ತಿನ ’ಶ್ರೀ’ ಕಾಯಕ ಯೋಗಿ

7

ಶಿಸ್ತಿನ ’ಶ್ರೀ’ ಕಾಯಕ ಯೋಗಿ

Published:
Updated:

ಬೆಂಗಳೂರು: ’ಕಾಯಕವೇ ಕೈಲಾಸ’– ಶರಣರ ಈ ತತ್ವವನ್ನು ದೀರ್ಘಕಾಲದ ಬದುಕಿನುದ್ದಕ್ಕೂ ಅಳವಡಿಸಿಕೊಂಡವರು ಸ್ಫೂರ್ತಿಯ ಸೆಲೆ, ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ. ಅವರ ಬದುಕು, ಬದುಕಿನ ರೀತಿಯೇ ಓದಿಸಿಕೊಳ್ಳುವ; ಓದಲೇಬೇಕಾದ ಉತ್ತಮ ಪುಸ್ತಕ. ಸದ್ಯ ಉಸಿರಾಟದ ಸಮಸ್ಯೆಯಿಂದ ಬಳಲಿರುವ ಅವರ ಆರೋಗ್ಯದ ಚೇತರಿಕೆಗಾಗಿ ಲಕ್ಷಾಂತರ ಜನರು ಕೈಜೋಡಿಸಿ ಪ್ರಾರ್ಥಿಸುತ್ತಿದ್ದಾರೆ. ಅಷ್ಟೊಂದು ಜನರ ಪ್ರೀತಿ, ಅಭಿಮಾನಿ, ಭಕ್ತಿ ಗಳಿಸಿರುವ ಕಾಯಕ ಯೋಗಿಯ ದಿನಚರಿಯು ಸಾಮಾನ್ಯವಾಗಿರಲಿಲ್ಲ.

’ಮಿತ ಆಹಾರ, ನಿರಂತರ ಕಾಯಕ, ಓದು ಹಾಗೂ ಇಷ್ಟಲಿಂಗ ಪೂಜೆ,..’ ಇವುಗಳೇ ಶಿವಕುಮಾರ ಸ್ವಾಮೀಜಿಯ ಶ್ರದ್ಧೆಯ ಗುಟ್ಟು ಎನ್ನಬಹುದು. ಬೆಳಗಿನ ಜಾವ 2:15– ನಮಗೆ ಗಾಢ ನಿದ್ರೆ,  ಬೆಚ್ಚಗಿನ ಹೊದಿಕೆಯನ್ನು ಸರಿಪಡಿಸಿಕೊಳ್ಳುವ ಸಮಯ. ಆದರೆ, ಸ್ವಾಮೀಜಿ ನಿತ್ಯ ಏಳುತ್ತಿದುದು ಇದೇ ಹೊತ್ತಿಗೆ. ನಿತ್ಯ ಕರ್ಮ, ಶಿವ ಪೂಜೆ, ತತ್ವ ಪಠಣ,..ಹೀಗೆ ಶುರುವಾಗುವ ದಿನಚರಿಗೆ ವಿಶ್ರಾಂತಿ ಸಿಗುತ್ತಿದುದು ರಾತ್ರಿ 11ರ ನಂತರವೇ.  

ವಿದ್ಯಾರ್ಥಿಗಳಿಗೆ ಬೋಧನೆ, ಆಶೀರ್ವಚನ, ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿ, ಊಟ–ತಿಂಡಿ(ಪ್ರಸಾದ) ವ್ಯವಸ್ಥೆಯನ್ನು ಗಮನಿಸುವುದು, ಪತ್ರ ವ್ಯವಹಾರ, ದಿನ ಪತ್ರಿಕೆ ಕಣ್ಣಾಡಿಸುವುದು, ಕಾರ್ಯಾಲಯದ ಕೆಲಸ, ಭಕ್ತಾದಿಗಳ ಸಂದರ್ಶನ, ಸಮಸ್ಯೆಗಳಿಗೆ ಪರಿಹಾರ ನೀಡುವುದು, ಯಂತ್ರಧಾರಣೆ,..ಹೀಗೆ ಬಿಡುವಿರದ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. 

ಈ ಎಲ್ಲದರ ನಡುವೆಯೂ ಭಕ್ತಾದಿಗಳು ದೂರದ ಊರುಗಳಿಗೆ ಶಿವಪೂಜೆ ಸೇರಿ ಇತರೆ ಕಾರ್ಯಕ್ರಮಗಳಿಗೆ ಬರುವಂತೆ ಪ್ರೀತಿಯ ಒತ್ತಾಯ ಬಂದರೆ, ಹೋಗದೆ ಇರುತ್ತಿರಲಿಲ್ಲ. ನಿತ್ಯ ಮೂರರಿಂದ– ಮೂರೂಕಾಲು ಗಂಟೆ ಮಾತ್ರ ನಿದ್ರೆಗೆ ಮೀಸಲಾಗುತ್ತಿದ್ದ ಶಿವಕುಮಾರ ಸ್ವಾಮೀಜಿ ದಿನಚರಿ ಅಚ್ಚರಿ ಮೂಡಿಸುವಂಥದು. 

ಬರಹ ಇಷ್ಟವಾಯಿತೆ?

 • 60

  Happy
 • 1

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !