ಶಿವಕುಮಾರ ಶ್ರೀ ಆರೋಗ್ಯ, ಆತಂಕದ ವದಂತಿ ಹಬ್ಬಿಸದಿರಿ: ಎಂ.ಬಿ.ಪಾಟೀಲ್ ಮನವಿ

7

ಶಿವಕುಮಾರ ಶ್ರೀ ಆರೋಗ್ಯ, ಆತಂಕದ ವದಂತಿ ಹಬ್ಬಿಸದಿರಿ: ಎಂ.ಬಿ.ಪಾಟೀಲ್ ಮನವಿ

Published:
Updated:

ತುಮಕೂರು: ‘ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದೆ. ಆತಂಕಕ್ಕೆ ಒಳಗಾಗಬೇಕಾಗಿಲ್ಲ’ ಎಂದು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಚಿಕಿತ್ಸೆ ಉಸ್ತುವಾರಿವಹಿಸಿರುವ ಸಿದ್ಧಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪರಮೇಶ್ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ್ ಮಂಗಳವಾರ ತಿಳಿಸಿದರು.

ಪತ್ನಿ ಸಮೇತ ಬಂದ ಎಂ.ಬಿ.ಪಾಟೀಲ್, ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಸ್ವಾಮೀಜಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ಕೊಠಡಿಗೆ ತೆರಳಿ ಹತ್ತಿರದಿಂದಲೇ ಅವರ ದರ್ಶನ ಪಡದೆ. ವೈದ್ಯರ ಜೊತೆ ಚರ್ಚಿಸಿದೆ. ಯಾರೂ ಆತಂಕಪಡಬೇಕಾಗಿಲ್ಲ. ಸ್ವಾಮೀಜಿ ಅವರ ಎಲ್ಲ ಅಂಗಾಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಚೆನ್ನಾಗಿದ್ದಾರೆ’ ಎಂದರು.

‘ನಾಡಿನ ಜನರಿಗೆ ಮತ್ತು ನನಗೆ ಅವರ ಆಶೀರ್ವಾದ ಬಹಳ ಮುಖ್ಯ. ಯಾರೂ ಕೂಡ ಸುಳ್ಳು ವದಂತಿಗಳನ್ನು ಹಬ್ಬಿಸಬಾರದು. ಅವರು ಶೀಘ್ರ ಗುಣಮುಖರಾಗಲಿ ಎಂದು ಬಸವಣ್ಣನನ್ನು ಪ್ರಾರ್ಥಿಸುವೆ’ ಎಂದು ಹೇಳಿದರು.

ಬೆಳಿಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ಪರಮೇಶ್, ‘ಸೋಮವಾರಕ್ಕಿಂತ ಮಂಗಳವಾರ ಚೆನ್ನಾಗಿ ಚೇತರಿಸಿಕೊಂಡಿದ್ದಾರೆ. ನಿತ್ಯ ಬೆಳಿಗ್ಗೆ 5ಕ್ಕೆ ಆರೋಗ್ಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಸೋಂಕು ಕಡಿಮೆ ಆಗಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಸ್ವಲ್ಪ ದ್ರವರೂಪದ ಆಹಾರ ಸೇವಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಮುಂಜಾನೆಯೇ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸಹ ಮಠಕ್ಕೆ ಬಂದಿದ್ದರು. ‘ಶಿವಕುಮಾರ ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ನಾನು ಹೋದಾಗ ಅವರು ಮಲಗಿದ್ದರು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !