ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈದಾನದಲ್ಲಿ ಮೂಡಿತು ಸಿದ್ಧಗಂಗಾಶ್ರೀ ಭಾವಚಿತ್ರ

‘ಬ್ಲ್ಯಾಕ್‌ ಆಕ್ಸೈಡ್‌’ನಲ್ಲಿ ಚಿತ್ರ ಬಿಡಿಸಿದ ವಿದ್ಯಾರ್ಥಿಗಳು
Last Updated 23 ಜನವರಿ 2019, 13:24 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಸಿದ್ಧಗಂಗಾ ವಿದ್ಯಾಲಯದ ಮೈದಾನದಲ್ಲಿ ಸಿದ್ಧಗಂಗಾ ಡಾ.ಶಿವಕುಮಾರ ಸ್ವಾಮೀಜಿ ಅವರ ಚಿತ್ರ ಬೃಹದಾಕಾರವಾಗಿ ಮೂಡಿದೆ. ಈ ಚಿತ್ರವನ್ನು ಮನತುಂಬಿಕೊಳ್ಳಲು ಸಂಸ್ಥೆಯ ಮೂರು ಮಹಡಿ ಏರಿ ಜನ ಕಣ್ಣು ಹಾಯಿಸುತ್ತಿದ್ದಾರೆ.

ಮುಖ್ಯೋಪಾಧ್ಯಾಯಿನಿ ಜಸ್ಟೀನ್‌ ಡಿಸೋಜ ಅವರ ಇಂಗಿತದಂತೆ ಸಂಸ್ಥೆಯ ಪಿ.ಯು ನಿರ್ದೇಶಕ ಡಾ. ಜಯಂತ್‌ ಮತ್ತು ಸಂಸ್ಥೆಯ ಕಲಾ ಶಿಕ್ಷಕರಾದ ಕೆ.ಎನ್. ಪ್ರಸನ್ನ ಕುಮಾರ್‌, ಟಿ. ಶಿವಕುಮಾರ್‌ ನೇತೃತ್ವದಲ್ಲಿ ಬೃಹತ್‌ ಚಿತ್ರ ಅರಳಿದೆ. 9 ಮತ್ತು 10ನೇ ತರಗತಿಯ 50ಕ್ಕೂ ಅಧಿಕ ಮಕ್ಕಳು ಈ ರಂಗೋಲಿ ಬಿಡಿಸಲು ಕೈ ಜೋಡಿಸಿದ್ದರು.

ಮೊದಲು ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅವರ ಚಿತ್ರವನ್ನು ಕಂಪ್ಯೂಟರ್‌ನಲ್ಲಿ ರಚಿಸಿ ಅದರ ಪ್ರಿಂಟ್‌ ತೆಗೆದು ಅದರ ಪ್ರಮಾಣವನ್ನು 90 ಚದರ ಅಡಿಗೆ ಹೊಂದಿಸಿ ಲೆಕ್ಕಾಚಾರ ಹಾಕಲಾಯಿತು. ಅದರಂತೆ ಅಡಿಗಳ ಲೆಕ್ಕ ಹಾಕಿ ಚಿತ್ರದ ಗುರುತು ಮಾಡಲಾಯಿತು. ಈ ಗುರುತು ಹಾಕಿದ ಜಾಗಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬ್ಲ್ಯಾಕ್ ಆಕ್ಸೈಡ್ (ಕಾರ್ಬನ್‌) ತುಂಬುತ್ತಾ ಬಂದರು. ಬುಧವಾರ ಬೆಳಿಗ್ಗೆ 11.30ಕ್ಕೆ ಆರಂಭಗೊಂಡ ಚಿತ್ರ ಬಿಡಿಸುವ ಕಾರ್ಯ ಮಧ್ಯಾಹ್ನ 1.30ಕ್ಕೆ ಮುಗಿಯಿತು. ಚಿತ್ರ ಬಿಡಿಸುತ್ತಿರುವ ವೇಳೆಯಲ್ಲಿ ಮೆಲುಧ್ವನಿಯಲ್ಲಿ ವಚನ ಗಾಯನ ಅನುರಣಿಸುವಂತೆ ವ್ಯವಸ್ಥೆ ಮಾಡಲಾಗಿತ್ತು.

ಚಿತ್ರ ಪೂರ್ಣಗೊಂಡ ಬಳಿಕ ವಿದ್ಯಾರ್ಥಿ–ವಿದ್ಯಾರ್ಥಿನಿಯರು, ಬೋಧಕ, ಬೋಧಕೇತರರು ಚಚ್ಚೌಕಾಕಾರವಾಗಿ ನಿಂತು ಪ್ರಾರ್ಥನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

ಭಿನ್ನ ಶ್ರದ್ಧಾಂಜಲಿ:
‘ಕಾಯಕಯೋಗಿ ಸಿದ್ಧಲಿಂಗಾ ಶಿವಕುಮಾರ ಸ್ವಾಮೀಜಿ ಪಾದಸ್ಪ‍ರ್ಶ ಮಾಡಿದ ಜಾಗ ಇದು. ಇಲ್ಲಿ ಅವರ ಚಿತ್ರವನ್ನು ಬೃಹದಾಕಾರವಾಗಿ ಬಿಡಿಸುವ ಮೂಲಕ ನಮ್ಮ ಸಂಸ್ಥೆಯ ಮಕ್ಕಳು ಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮಕ್ಕಳು ಎಂದೂ ಮರೆಯದ ದಿನ ಇದು’ ಎಂದು ಮುಖ್ಯೋಪಾಧ್ಯಾಯಿನಿ ಜಸ್ಟೀನ್‌ ಡಿಸೋಜ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಚಿತ್ರ ಬಿಡಿಸಲು 100 ಕೆ.ಜಿ. ಬ್ಲ್ಯಾಕ್‌ ಆಕ್ಸೈಡ್‌ ಬಳಸಲಾಗಿದೆ. ಮೂರು ದಿನ ಪ್ರದರ್ಶನವಿರುತ್ತದೆ. ವಿದ್ಯಾರ್ಥಿಗಳಷ್ಟೇ ಅಲ್ಲದೇ ಸಾರ್ವಜನಿಕರೂ ವೀಕ್ಷಣೆ ಮಾಡಬಹುದು ಎಂದು ಮಾಹಿತಿ ನೀಡಿದರು.

ಹೊಸ ಅನುಭವ:
‘ಸ್ವಾಮೀಜಿ ಅವರ ಆಶೀರ್ವಾದದಿಂದ ನಾವು ಓದುತ್ತಿದ್ದೇವೆ. ಅವರ ಮೇಲೆ ಭಕ್ತಿ ಮತ್ತು ಪ್ರೀತಿ ಇರುವುದರಿಂದ ಈ ರೀತಿ ಭಿನ್ನವಾದ ಚಿತ್ರ ಬಿಡಿಸಲು ಸಾಧ್ಯವಾಯಿತು. ನಾವು ಧರಿಸಿರುವ ಬಿಳಿ ಸಮವಸ್ತ್ರದ ಮೇಲೆ ಮಸಿ ಚೆಲ್ಲಿದರೂ ನಾವು ಅದರ ಕಡೆ ಗಮನ ಕೊಡದೇ ಚಿತ್ರ ಬಿಡಿಸಿದ್ದೇವೆ. ಅದು ಅಂದವಾಗಿ ಮೂಡಿಬಂದಿರುವುದು ಖುಷಿ ತಂದಿದೆ’ ಎಂದು ವಿದ್ಯಾರ್ಥಿನಿ ಪ್ರಿಯಾಂಕ ಸಂತೋಷ ಹಂಚಿಕೊಂಡಳು.

‘ಕಣ್ಣಿಗೆ ಬಟ್ಟೆಕಟ್ಟಿಕೊಂಡು ಸ್ವಾಮೀಜಿಯ ಚಿತ್ರ, ಇತರ ಚಿತ್ರಗಳನ್ನು ಬಿಡಿಸುತ್ತಿದ್ದೆವು. ಇದೀಗ ಈ ರೀತಿ ವಿಭಿನ್ನವಾಗಿ ಬೃಹದಾಕಾರವಾಗಿ ಚಿತ್ರ ಬಿಡಿಸುವುದು ಹೊಸ ಅನುಭವ. ಚಿತ್ರ ಬಿಡಿಸುವಾಗ ಏನೂ ಅರ್ಥವಾಗುವುದಿಲ್ಲ. ಚಿತ್ರ ಮುಗಿದು ಎತ್ತರದಿಂದ ನೋಡಿದಾಗ ಉಂಟಾಗುವ ಅನುಭವವೇ ಬೇರೆ’ ಎಂದು ವಿದ್ಯಾರ್ಥಿನಿ ಆಫ್ರಿನ್‌ ಝೈಬ ಅನುಭವ ವಿವರಿಸಿದಳು.

ಶ್ರೇಷ್ಠ ವ್ಯಕ್ತಿಯ ಬಗ್ಗೆ ಚಿತ್ರ ಬಿಡಿಸಿರುವುದೇ ವಿಶಿಷ್ಠ ಅನುಭವ ಎಂದು ವಿದ್ಯಾರ್ಥಿನಿ ಪೂಜಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT