ಉಪಚುನಾವಣೆ ಬಳಿಕ ವೃದ್ಧಿಸಿದ ಕಾಂಗ್ರೆಸ್ ಶಕ್ತಿ: ಸಿದ್ದರಾಮಯ್ಯ

7

ಉಪಚುನಾವಣೆ ಬಳಿಕ ವೃದ್ಧಿಸಿದ ಕಾಂಗ್ರೆಸ್ ಶಕ್ತಿ: ಸಿದ್ದರಾಮಯ್ಯ

Published:
Updated:

ಚಿತ್ರದುರ್ಗ: ಪಂಚ ಕ್ಷೇತ್ರಗಳಿಗೆ ಈಚೆಗೆ ನಡೆದ ಉಪಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಶಕ್ತಿ ವೃದ್ಧಿಸಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ 2.5 ಲಕ್ಷ ಮತಗಳ ಅಂತರದಿಂದ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರ ಗಣನೀಯವಾಗಿ ಕಡಿಮೆ ಆಗಿದೆ' ಎಂದರು.

'ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೇ ಶ್ರೀರಾಮುಲು ಅವರಿಗೆ ಸೋಲಿನ ಭಯ ಕಾಡಿತ್ತು. ಹೀಗಾಗಿ ಅವರು ಕ್ಷೇತ್ರ ಅರಸಿ ಮೊಳಕಾಲ್ಮುರು ತಾಲ್ಲೂಕಿಗೆ ಬಂದಿದ್ದರು ಎಂಬುದು ಈಗ ಸ್ಪಷ್ಟವಾಗಿದೆ' ಎಂದರು.

ರೆಡ್ಡಿ ವಿರುದ್ಧ ಷಡ್ಯಂತ್ರ ನಡೆಯುತ್ತಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, 'ಜನಾರ್ದನ ರೆಡ್ಡಿಗೆ ಲೂಟಿ ಮಾಡು, ಕಳ್ಳತನ ಮಾಡು ಅಂತಾ ನಾವು ಹೇಳಿಕೊಟ್ಟಿದ್ವಾ' ಎಂದು ಪ್ರಶ್ನಿಸಿದರು.

ಟಿಪ್ಪು ಮತಾಂಧನೇ ಹೇಳಿ- ಸಿದ್ದರಾಮಯ್ಯ ಪ್ರಶ್ನೆ

'ಶೃಂಗೇರಿ ಮಠ ಜೀರ್ಣೋದ್ಧಾರ ಮಾಡಿದ ಹಾಗೂ ಶ್ರೀರಂಗಪಟ್ಟಣದಲ್ಲಿ ರಂಗನಾಥಸ್ವಾಮಿ ದೇಗುಲವನ್ನು ಉಳಿಸಿದ ಟಿಪ್ಪು ಸುಲ್ತಾನ್ ಹೇಗೆ ಮತಾಂಧ ಆಗುತ್ತಾರೆ ಹೇಳಿ' ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಟಿಪ್ಪು ರೀತಿಯಲ್ಲಿಯೇ ಸಿದ್ದರಾಮಯ್ಯ ಕೂಡ ಮತಾಂಧ ಎಂಬ ಟೀಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. 'ಇತಿಹಾಸ ಸರಿಯಾಗಿ ಓದಿ ಮಾತನಾಡಿ' ಎಂದು ಸಲಹೆ ಮಾಡಿದರು.

'ದಯೆ ಇಲ್ಲದವರು ಧರ್ಮದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಇನ್ನೊಂದು ಧರ್ಮವನ್ನು ದ್ವೇಷ ಮಾಡುವುದು ಕೋಮುವಾದವೇ ವಿನಾ ಧರ್ಮವಲ್ಲ. ಸ್ವಾರ್ಥ ಮತ್ತು ರಾಜಕಾರಣಕ್ಕೆ ಧರ್ಮ ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿ' ಎಂದು ಗುಡುಗಿದರು.

'ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಶ್ರೀಕೃಷ್ಣ, ಮಹಾವೀರ, ಕೆಂಪೇಗೌಡ ಸೇರಿ 13 ಜಯಂತಿಗಳನ್ನು ಆರಂಭಿಸಿದೆ. ಕೇವಲ ಟಿಪ್ಪು ಜಯಂತಿ ಮಾತ್ರ ಶುರು ಮಾಡಲಿಲ್ಲ. ಸರ್ಕಾರದಲ್ಲಿ ಇರುವಾಗ ಸಂವಿಧಾನವೇ ಧರ್ಮಗ್ರಂಥ. ರಾಜಕಾರಣದ ಕನ್ನಡಕ ತೆಗೆದು, ಮನುಷ್ಯತ್ವದ ಕನ್ನಡಕದಲ್ಲಿ ಸಮಾಜ ನೋಡಿ' ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !