ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

56 ಇಂಚಿನ ಎದೆ ಇದ್ದರೆ ಸಾಲದು, ಕಾಳಜಿ ಇರುವ ಹೃದಯವೂ ಇರಬೇಕು

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
Last Updated 10 ಮಾರ್ಚ್ 2019, 19:15 IST
ಅಕ್ಷರ ಗಾತ್ರ

ಉಡುಪಿ: ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ 56 ಇಂಚಿನ ಎದೆ ಇದ್ದರೆ ಸಾಲದು; ಬಡವರ ಬಗ್ಗೆ ಕಾಳಜಿ ಇರುವ ಹೃದಯವೂ ಇರಬೇಕು’ ಎಂದು ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ನಗರದ ಕಲ್ಸಂಕದ ರಾಯಲ್‌ ಗಾರ್ಡನ್‌ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ನ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಮೋದಿಯವರಿಗೆ ಮಾತ್ರವಲ್ಲ; ಪೈಲ್ವಾನರಿಗೂ 56 ಇಂಚಿಗೂ ದೊಡ್ಡದಾದ ಎದೆ ಇರುತ್ತದೆ’ ಎಂದು ವ್ಯಂಗ್ಯವಾಡಿದರು.‌

‘ಈ ಬಾರಿಯ ಲೋಕಸಭಾ ಚುನಾವಣೆ ರಾಹುಲ್ ಗಾಂಧಿ ಹಾಗೂ ನರೇಂದ್ರ ಮೋದಿ ಅವರ ಮಧ್ಯೆ ನಡೆಯುವುದಿಲ್ಲ. ದೇಶದ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಸತ್ಯದ ಉಳಿವಿಗಾಗಿ ನಡೆಯಲಿದೆ’ ಎಂದರು.

‘ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಬೆಂಕಿ ಇಡುವಂತಹ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಕೋಮುವಾದಿಗಳನ್ನು ಎತ್ತಿಕಟ್ಟುತ್ತಿದ್ದಾರೆ. ಕೊಲೆಗಳನ್ನು ಮಾಡುತ್ತಿದ್ದಾರೆ, ಮಾಡಿಸುತ್ತಿದ್ದಾರೆ. ಬಿಜೆಪಿ ಕೊಲೆಗಡುಕರ ಪಕ್ಷ’ ಎಂದು ಸಿದ್ದರಾಮಯ್ಯ ಆರೋಪಿಸಿದರು.

‘ಕಳೆದ ಲೋಕಸಭಾ ಚುನಾವಣೆಗೂ ಮುನ್ನಪ್ರಧಾನಿ ನರೇಂದ್ರ ಮೋದಿ ಅತ್ಯಂತ ಆಕರ್ಷಣೀಯ ಸುಳ್ಳುಗಳನ್ನು ಹೇಳಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಹಿಂದೆ ನೀಡಿದ್ದ ಭರವಸೆಗಳ ಬಗ್ಗೆ ಈಗ ಚಕಾರ ಎತ್ತುತ್ತಿಲ್ಲ. ಕಳೆದ 45 ವರ್ಷಗಳಲ್ಲಿ ಅತಿಹೆಚ್ಚು ನಿರುದ್ಯೋಗ ಸೃಷ್ಟಿಯಾಗಿರುವುದು ಮೋದಿ ಸರ್ಕಾರದ ಅವಧಿಯಲ್ಲಿ’ ಎಂದು ವಾಗ್ದಾಳಿ ನಡೆಸಿದರು.

‘ಸುಪ್ರೀಂಕೋರ್ಟ್‌ಗೆ ರಫೇಲ್ ಒಪ್ಪಂದದ ದಾಖಲೆ ಕಳುವಾಗಿವೆ ಎಂದು ಅಡ್ವೊಕೇಟ್‌ ಜನರಲ್‌ ಮೂಲಕ ಬಿಜೆಪಿ ಸುಳ್ಳು ಹೇಳಿಸಿತು. ಬಳಿಕ ದಾಖಲೆಗಳು ಕಳುವಾಗಿಲ್ಲ, ನಕಲು ಮಾಡಲಾಗಿದೆ ಎಂದು ಹೇಳುತ್ತಿದೆ. ಇದನ್ನು ನೋಡಿದರೆ ಚೌಕಿದಾರ್ ಚೋರ್ ಹೈ ಎಂಬ ಅನುಮಾನ ಮೂಡುತ್ತಿದೆ’ ಎಂದರು.

ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ, ಸಚಿವ ಯು.ಟಿ.ಖಾದರ್, ಹಿರಿಯ ಮುಖಂಡರಾದ ಆಸ್ಕರ್ ಫರ್ನಾಂಡಿಸ್‌, ಬಿ.ಕೆ.ಹರಿಪ್ರಸಾದ್, ಪ್ರಮೋದ್ ಮಧ್ವರಾಜ್‌, ಐವನ್ ಡಿಸೋಜ ಇದ್ದರು.

**

ರಫೇಲ್‌ ದಾಖಲೆಗಳನ್ನು ನಕಲು ಮಾಡಲಾಗಿದೆ ಎಂದು ಇದೀಗ ಕೇಂದ್ರ ಸರ್ಕಾರ ಹೇಳುತ್ತಿದೆ. ಇದನ್ನು ನೋಡಿದರೆ ಚೌಕಿದಾರ್ ಚೋರ್ ಹೈ ಎಂಬ ಅನುಮಾನ ಮೂಡುತ್ತಿದೆ.
–ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT