ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಡೋಂಗಿ; ಮೋದಿ ದುರಾತ್ಮ: ಸಿದ್ದರಾಮಯ್ಯ ತೀವ್ರ ವಾಗ್ದಾಳಿ

Last Updated 19 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ರೈತನ ಮಗನೆಂದು ಬಿಂಬಿಸಿಕೊಳ್ಳುವ ಬಿ.ಎಸ್‌. ಯಡಿಯೂರಪ್ಪಡೋಂಗಿ ರೈತ‌ ನಾಯಕ. ರೈತರ ಸಾಲ ಮನ್ನಾ ಮಾಡದ ಪ್ರಧಾನಿ ನರೇಂದ್ರ ಮೋದಿ ದುರಾತ್ಮ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದರು.

ನಗರದ ಅರಮನೆ ಮೈದಾನದಲ್ಲಿ ಮಂಗಳವಾರ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದವಿಸ್ತೃತ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯವರು ಹಸಿರು ಶಾಲು ಹೊದ್ದು ನಾಟಕ ಮಾಡುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಆಗಿದ್ದಾಗನಿಯೋಗ ಕರೆದುಕೊಂಡು ಹೋಗಿ ರೈತರ ಸಾಲ ಮನ್ನಾ ಮಾಡುವಂತೆ ಪ್ರಧಾನಿಯವರನ್ನುಕೈ ಮುಗಿದು ಬೇಡಿಕೊಂಡೆ. ಪುಣ್ಯಾತ್ಮ ಒಪ್ಪಲಿಲ್ಲ.‌ ಆತ ಚೌಕಿದಾರ್ ಅಲ್ಲ ಭ್ರಷ್ಟಚಾರದ‌ ಭಾಗಿದಾರ್’ ಎಂದು ಟೀಕಿಸಿದರು.

‘ಬಿಜೆಪಿ ಹಿಟ್ಲರ್‌ನ ನಾಜಿ‍ಪಕ್ಷ ಇದ್ದಂತೆ. ಅದಕ್ಕೆಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ. ಸಮ ಸಮಾಜ ನಿರ್ಮಾಣ ಅದಕ್ಕೆ ಬೇಕಾಗಿಲ್ಲ. ಒಡೆದಾಳುವ ನೀತಿಯ ಮೇಲೆ ನಂಬಿಕೆ ಇಟ್ಟುಕೊಂಡಿದೆ’ ಎಂದು ಆರೋಪಿಸಿದರು.

ಪ್ರಕಾಶ್‌ ರೈ ಬೇಡಿಕೆ ತಿರಸ್ಕರಿಸಿದ ಕಾಂಗ್ರೆಸ್‌!
ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿರುವ ಪ್ರಕಾಶ್‌ ರೈ, ತಮ್ಮ ಬೆಂಬಲ ನಿಲ್ಲುವಂತೆ ‘ಕೈ’ ನಾಯಕರ ಮನೆ ಕದ ತಟ್ಟುತ್ತಿದ್ದಾರೆ.

ಬಿಜೆಪಿಯನ್ನು ಸೋಲಿಸುವುದೇ ತಮ್ಮ ಗುರಿ. ಹೀಗಾಗಿ ಬೆಂಬಲ ನೀಡುವಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನು ಭೇಟಿ ಮಾಡಿ ರೈ ಮನವಿ ಮಾಡಿದ್ದಾರೆ. ಆದರೆ, ಅವರ ಮನವಿಯನ್ನು ನಯವಾಗಿಯೇ ತಿರಸ್ಕರಿಸಿರುವ ಈ ಇಬ್ಬರು ನಾಯಕರು, ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗೆ ಈ ಕ್ಷೇತ್ರದಿಂದ ಟಿಕೆಟ್‌ ನೀಡುವ ಚಿಂತನೆ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.

‘ಅಲ್ಪಸಂಖ್ಯಾತರೊಬ್ಬರಿಗೆ ಟಿಕೆಟ್‌ ತಪ್ಪಿಸಿ ನಿಮಗೆ ಬೆಂಬಲ ನೀಡಲು ಸಾಧ್ಯವಿಲ್ಲ. ನಿಮ್ಮ ಸ್ಪರ್ಧೆಯಿಂದ ಕಾಂಗ್ರೆಸ್‌ಗೂ ತೊಂದರೆ‌. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುವುದೂ ಕಷ್ಟ. ಹೀಗಾಗಿ, ಸ್ಪರ್ಧಿಸುವ ಬಗ್ಗೆ ಮತ್ತೊಮ್ಮೆ ಯೋಚಿಸಿ’ ಎಂದು ರೈಗೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.

‘ಬೆಂಬಲ ನೀಡುವಂತೆ ಸಿದ್ದರಾಮಯ್ಯ ಮತ್ತು ನನ್ನನ್ನು ಭೇಟಿ ಮಾಡಿ ರೈ ಮನವಿ ಮಾಡಿದ್ದಾರೆ. ಆದರೆ, ಬೆಂಬಲ ನೀಡಲು ಆಗುವುದಿಲ್ಲ. ಅವರು ಪಕ್ಷಕ್ಕೆ ಸೇರಿದರೆ ಪಕ್ಷದಿಂದ ಅಭ್ಯರ್ಥಿ ಮಾಡುವ ನಿಟ್ಟಿನಲ್ಲಿ ಪರಿಶೀಲಿಸಬಹುದು. ಇದೇ ಕ್ಷೇತ್ರ ಬೇಕೆಂದರೆ ಅದೂ ಸಾಧ್ಯವಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ಪರೋಕ್ಷ ಬೆಂಬಲ ಕೊಡಲು ಆಗಲ್ಲ’ ಎಂದು ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

‘ಬಿಜೆಪಿಯ ಯಾವ ನಾಯಕನೂ ದೇಶಕ್ಕಾಗಿ ಸತ್ತಿಲ್ಲ’
‘ದೇಶಕ್ಕಾಗಿ ಬಿಜೆಪಿಯ ಯಾವೊಬ್ಬ ನಾಯಕ ಕೂಡ ಸತ್ತಿಲ್ಲ. ಅಂಥವರು ನಮಗೆ ದೇಶ ಪ್ರೇಮದ ಕುರಿತು ಪಾಠ ಮಾಡಲು ಬರುತ್ತಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕಿಡಿಕಾರಿದರು.

‘ಬಿಜೆಪಿ ಈ ನೆಲದ ಮೌಲ್ಯಗಳನ್ನು ದುರ್ಬಲಗೊಳಿಸುತ್ತಿದೆ. ದೇಶದಲ್ಲಿ ವೈವಿಧ್ಯ ಮಾಯವಾಗುತ್ತಿದೆ. ಪ್ರಧಾನಿ ಮೋದಿ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಐದು ವರ್ಷದಲ್ಲಿ ಹತ್ತು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಐದು ವರ್ಷದಲ್ಲಿ ಕೇವಲ 27 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ’ ಎಂದು ಹೇಳಿದರು.

**

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಪಾಕಿಸ್ತಾನಕ್ಕೆ ಭಯವಿತ್ತು.ಕೇಂದ್ರ ಸರ್ಕಾರದ ವೈಫಲ್ಯದಿಂದ ಪುಲ್ವಾಮಾ ದಾಳಿ ನಡೆದಿದೆ
- ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT