ಪ್ರವಾಸ ಮೊಟಕುಗೊಳಿಸಿ ಸಿದ್ದರಾಮಯ್ಯ ವಾಪಸ್‌

7

ಪ್ರವಾಸ ಮೊಟಕುಗೊಳಿಸಿ ಸಿದ್ದರಾಮಯ್ಯ ವಾಪಸ್‌

Published:
Updated:

ಬೆಳಗಾವಿ: ವಿಧಾನ ಪರಿಷತ್‌ ಸಭಾಪತಿ ಆಯ್ಕೆಯ ದಿಢೀರ್‌ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಪ್ರವಾಸ ಮೊಟಕುಗೊಳಿಸಿ ಬುಧವಾರ ರಾತ್ರಿ ರಾಜ್ಯಕ್ಕೆ ಮರಳಿದ್ದಾರೆ.

ಮಲೇಷ್ಯಾದಲ್ಲಿ ಆಪ್ತರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಡಿ.10ರಂದು ತೆರಳಿದ್ದರು. ಎಸ್‌.ಆರ್‌.ಪಾಟೀಲ ಅವರನ್ನು ವಿಧಾನ ಪರಿಷತ್ ಸಭಾಪತಿಯನ್ನಾಗಿ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಅವರಿಗೆ ಸೂಚನೆ ನೀಡಿದ್ದರು. ಮಂಗಳವಾರ ಬೆಳಿಗ್ಗೆ ನಾಮಪತ್ರ ಸಲ್ಲಿಸುವಂತೆ ತಿಳಿಸಿದ್ದರು. ಈ ನಡುವೆ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ ರಂಗಪ್ರವೇಶ ಮಾಡಿದ್ದರು. ಆಸ್ಕರ್‌ ಫೆರ್ನಾಂಡಿಸ್‌ ಮೂಲಕ ವರಿಷ್ಠರಿಗೆ ಒತ್ತಡ ಹೇರಿ ಪ್ರತಾಪಚಂದ್ರ ಶೆಟ್ಟಿ ಅವರನ್ನು ಕಣಕ್ಕೆ ಇಳಿಸಿದ್ದರು. ಇದರಿಂದ, ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗಿತ್ತು.

ಈ ಬಗ್ಗೆ ಆಪ್ತ ಶಾಸಕರು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ದೂರು ಹೇಳಿದ್ದರು. ಈ ಬೆಳವಣಿಗೆ ಬಳಿಕ ಸಿದ್ದರಾಮಯ್ಯ ಅವರು ಪ್ರವಾಸ ಮೊಟಕುಗೊಳಿಸುವ ನಿರ್ಧಾರಕ್ಕೆ ಬಂದರು ಎನ್ನಲಾಗಿದೆ. ಅವರು ಇದೇ 18ಕ್ಕೆ ವಾಪಸ್‌ ಬರಬೇಕಿತ್ತು. ಆದರೆ, ಅವರು ಸದನಕ್ಕೆ ಬರುವುದು ಸೋಮವಾರವೇ. ಶನಿವಾರ ಅಥವಾ ಭಾನುವಾರ ಆಪ್ತ ಶಾಸಕರ ಸಭೆ ಕರೆದು ಸಮಾಲೋಚನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ಶಾಸಕರ ಗೈರು?

ಇದೇ 18ಕ್ಕೆ ಶಾಸಕಾಂಗ ಪಕ್ಷದ ಸಭೆಯನ್ನು ಸಿದ್ದರಾಮಯ್ಯ ಕರೆದಿದ್ದಾರೆ. ಈ ಸಭೆಗೆ ಹಿರಿಯ ಶಾಸಕರು ಗೈರುಹಾಜರಾಗುವ ಮೂಲಕ ಅಸಮಾಧಾನ ತೋರ್ಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ಶಾಸಕರಾದ ಎಚ್.ಕೆ.ಪಾಟೀಲ, ರಾಮಲಿಂಗಾ ರೆಡ್ಡಿ, ಆರ್.ರೋಷನ್‌ ಬೇಗ್‌ ಸೇರಿದಂತೆ ಹಲವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಹಿರಿಯರಿಗೆ ಸಂಪುಟದಲ್ಲಿ ಸ್ಥಾನ ನೀಡುವುದಿಲ್ಲ ಎಂದು ಪಕ್ಷದ ವರಿಷ್ಠರು ಮೌಖಿಕ ನಿರ್ದೇಶನ ನೀಡಿದ್ದರು. ಆರ್‌.ರೋಷನ್‌ ಬೇಗ್‌ ನೇತೃತ್ವದಲ್ಲಿ ಶಾಸಕರು ಇತ್ತೀಚೆಗೆ ಸಭೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ, ರಾಮಲಿಂಗಾ ರೆಡ್ಡಿ ಮೌನ ಮುರಿದಿದ್ದರು. ’ಹಿರಿಯ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಇಲ್ಲ ಎಂದಾದರೆ ಆರ್‌.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್‌ ಅವರಿಗೆ ಸ್ಥಾನ ನೀಡಿದ್ದು ಏಕೆ‘ ಎಂದೂ ಪ್ರಶ್ನಿಸಿದ್ದರು. ಶಾಸಕಾಂಗ ಪಕ್ಷದ ಸಭೆಗೆ ಗೈರುಹಾಜರಾಗುವ ಮೂಲಕ ಬಿಸಿ ಮುಟ್ಟಿಸುವುದು ಅವರ ಗುರಿ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 13

  Happy
 • 2

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !