ಸೋಮವಾರ, ಡಿಸೆಂಬರ್ 9, 2019
20 °C

ಆಪರೇಷನ್ ಹಸ್ತ ಇಲ್ಲ, ಪಕ್ಷ ಬಿಡೋರನ್ನು ಬಿಜೆಪಿ ತಡೆಯಲಿ: ಸಿದ್ದರಾಮಯ್ಯ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಾವು ಆಪರೇಷನ್ ಹಸ್ತ ಮಾಡುತ್ತಿಲ್ಲ. ಆಪರೇಷನ್ ಕಮಲ್ ಮಾಡಲು ಶುರು ಮಾಡಿದವರು ಮಿಸ್ಟರ್ ಯಡ್ಡಿ ಅವರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಆಪರೇಷನ್ ಹಸ್ತ ಇಲ್ಲ, ಅದು ಬಿಜೆಪಿ‌ ಕೆಲಸ. 2009ರಲ್ಲಿ ಯದ್ವಾತದ್ವಾ ದುಡ್ಡು ಖರ್ಚು ಮಾಡಿ 15 ಜನರನ್ನು ಖರೀದಿಸಿ ಸರ್ಕಾರ ಮಾಡಿದರು. ಈಗಲೂ ಅದನ್ನೇ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಬಿಜೆಪಿಯಿಂದ ಬರುವವರನ್ನು ತಡೆಯಲಿ

ಇನ್ನಷ್ಟು ಜನ ಬಿಜೆಪಿಗೆ ಸೇರಲು ಬರುತ್ತಾರೆ ಎಂಬ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅನೈತಿಕ ರಾಜಕಾರಣ ಮಾಡುವುದೇ ಬಿಜೆಪಿ ಕೆಲಸ. ಅವರ ಬಳಿ ದುಡ್ಡಿದೆ. ಬಿಜೆಪಿ ಬಿಟ್ಟು ಬರುವವರನ್ನು ಮೊದಲು ತಡೆಯುವ ಕೆಲಸವನ್ನು ಬಿಜೆಪಿಯವರು ಮಾಡಲಿ. ಕಾಂಗ್ರೆಸ್‌ಗೆ ಬಿಜೆಪಿಯಿಂದ ಕೆಲವರು ಬರಲಿದ್ದಾರೆ. ನನ್ನ ಸಂಪರ್ಕದಲ್ಲಿ ಯಾರೂ ಇಲ್ಲ. ಆದರೂ ಬಿಜೆಪಿಯಿಂದ ಕೆಲವರು ಬರಬಹುದು, ಖಚಿತವಾಗಿ ಗೊತ್ತಿಲ್ಲ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಶಿವಸೇನೆಯೊಂದಿಗೆ ಹೊಂದಾಣಿಕೆ ವಿಚಾರವಾಗಿ ಮಾತನಾಡಿ, ಆ ಕುರಿತು ಹೈಕಮಾಂಡ್ ಇನ್ನು ತೀರ್ಮಾನ ಮಾಡಿಲ್ಲ. ಯಾವುದೂ ಫೈನಲ್ ಆಗಿಲ್ಲ. ಹೈಕಮಾಂಡ್ ಏನು ಮಾಡುತ್ತದೋ ನೋಡೋಣ ಎಂದರು.

ಹದಿನೈದು ಕ್ಷೇತ್ರಗಳಲ್ಲಿ ಜೆಡಿಎಸ್ ನಿಲ್ಲಿಸಲಿ. ಅವರದ್ದು ಪಕ್ಷವಿದೆ, ಅವರೂ ಸ್ಪರ್ಧೆ ಮಾಡುತ್ತಾರೆ. ನಾನು ಹೈದಿನೈದು ಕ್ಷೇತ್ರ ಗೆಲ್ಲುತ್ತದೆ ಎಂದು ಹೇಳಿಲ್ಲ. 12 ಎಂದು ಹೇಳಿದ್ದೇನೆ. ಹನ್ನೆರಡು ಗೆಲ್ಲುತ್ತೇವೆ. ಆದರೆ ಹದಿನೈದು ಗೆದ್ದರೂ ಆಶ್ವರ್ಯವಿಲ್ಲ‌ ಎಂದು ಕಾಂಗ್ರೆಸ್ ಹದಿನೈದು ಸೀಟು ಗೆದ್ದರೆ ಎಚ್‌ಡಿಡಿ ಕ್ಷಮೆ ಕೇಳುವ ವಿಚಾರವಾಗಿ ಮಾತನಾಡಿದರು.

ಖರ್ಗೆ ಅವರನ್ನು ಸಿಎಂ ಮಾಡಬಾರದು ಎಂದು ನಾನು ಹೇಳಿದ್ದೇನೆ ಎನ್ನುವುದು ಸುಳ್ಳು. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡಿದೆ. ಆಮೇಲೆ ನನ್ನ ಕೇಳಿದರು. ದೇವೇಗೌಡರು ಹೈಕಮಾಂಡ್ ಜತೆ ಮಾತನಾಡುವಾಗ ನಾನು ಅಲ್ಲಿರಲಿಲ್ಲ ಎಂದ ಮೇಲೆ ನಾನು ವಿರೋಧಿಸಿದ್ದೆ ಎಂದು ಹೇಗೆ ಹೇಳುತ್ತಾರೆ? ಬಿಜೆಪಿ ಕೋಮುವಾದಿ ಸರ್ಕಾರ ಬರಬಾರದು ಎಂದು ಹೈಕಮಾಂಡ್ ಹೇಳಿತ್ತು. ಅದರಂತೆ ಜೆಡಿಎಸ್ ಜತೆ ಸೇರಿ ಸರ್ಕಾರ ಮಾಡಿದೆವು ಎಂದು ತಿಳಿಸಿದರು.

ಅನರ್ಹ ಶಾಸಕರ ತೀರ್ಪು ಬಂದಮೇಲೆ ಅಭ್ಯರ್ಥಿಗಳ ಆಯ್ಕೆ

ಉಪ ಚುನಾವಣೆಗಾಗಿ ಈಗಾಗಲೇ ಎಂಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅನರ್ಹ ಶಾಸಕರ ತೀರ್ಪು ಬಂದ ಕೂಡಲೇ ಉಳಿದ ಕ್ಷೇತ್ರಗಳಲ್ಲಿ ತಿರ್ಮಾನ ಮಾಡಲಾಗುವುದು. ಉಳಿದ ಕ್ಷೇತ್ರಗಳಲ್ಲಿ ಎಲ್ಲರ ಅಭಿಪ್ರಾಯ ಬಂದ ಮೇಲೆ ಉಳಿದ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ. ಉಪ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ಕಾಂಗ್ರೆಸ್ ನಾಯಕರ‌ ಮದ್ಯೆ ವಾಗ್ವಾದ ಆಗಿಲ್ಲ. ಅದೆಲ್ಲ‌ ಸುಳ್ಳು ಎಂದು ಹೇಳಿ ಹೊರಟರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು