ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 37 ಡೆಂಗಿ ಪ್ರಕರಣ ಪತ್ತೆ

ಡೆಂಗಿ ಜಾಗೃತಿಗೆ ಜಾಥಾ ಇಂದು, ಸೊಳ್ಳೆಗಳನ್ನು ನಿಯಂತ್ರಿಸಲು ಮನವಿ
Last Updated 25 ಮೇ 2018, 6:53 IST
ಅಕ್ಷರ ಗಾತ್ರ

ಚಾಮರಾಜನಗರ: ರಾಷ್ಟ್ರೀಯ ಡೆಂಗಿ ದಿನಾಚರಣೆ ಆರಂಭವಾಗಿದೆ. ಮೇ 16ರಿಂದ 26ರವರೆಗೆ ಯಾವುದಾದರೂ ಒಂದು ದಿನವನ್ನು ಡೆಂಗಿ ದಿನಾಚರಣೆಯನ್ನಾಗಿ ಆಚರಿಸಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇ 25ರಂದು ಡೆಂಗಿ ದಿನಾಚರಣೆಯನ್ನು ಆಚರಿಸಲಿದೆ.

ಜಿಲ್ಲೆಯಲ್ಲಿ ಈ ವರ್ಷದ ಜನವರಿಯಿಂದ ಇಲ್ಲಿವರೆಗೆ 37 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಚಾಮರಾಜನಗರ ತಾಲ್ಲೂಕಿನಲ್ಲೇ ಅತ್ಯಧಿಕ ಪ್ರಕರಣಗಳು ಒಟ್ಟು 28 ವರದಿಯಾಗಿವೆ. ಉಳಿದಂತೆ, ಗುಂಡ್ಲುಪೇಟೆಯಲ್ಲಿ 4, ಕೊಳ್ಳೇಗಾಲದಲ್ಲಿ 3 ಹಾಗೂ ಯಳಂದೂರಿನಲ್ಲಿ 2 ಪ್ರಕರಣಗಳು ಕಂಡು ಬಂದಿವೆ.

ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿವರೆಗೆ 52 ಚಿಕನ್‌ಗುನ್ಯಾ ಪ್ರಕರಣಗಳು ಕಂಡು ಬಂದಿದೆ. ಚಾಮರಾಜನಗರದಲ್ಲಿ 44, ಗುಂಡ್ಲುಪೇಟೆಯಲ್ಲಿ 4, ಕೊಳ್ಳೇಗಾಲ ಹಾಗೂ ಯಳಂದೂರಿನಲ್ಲಿ ತಲಾ 2 ಪ್ರಕರಣಗಳು ಪತ್ತೆಯಾಗಿವೆ ಮಲೇರಿಯಾ ಕೇವಲ 1 ಪ್ರಕರಣವಷ್ಟೇ ವರದಿಯಾಗಿದೆ.

ಡೆಂಗಿ ಹರಡುವ ಬಗೆ: ‘ಈಡಿಸ್‌ ಈಜಿಪ್ಟೈ’ ಎಂಬ ಸೊಳ್ಳೆ ಕಚ್ಚುವುದರಿಂದ ಡೆಂಗಿ ಹಾಗೂ ಚಿಕೂನ್‌ಗುನ್ಯ ಬರುತ್ತದೆ. ನಿಂತ ನೀರಿನಲ್ಲಿ ಹುಟ್ಟುವ ಈ ಸೊಳ್ಳೆಗಳು ಹೆಚ್ಚಾಗಿ ಹಗಲಿನಲ್ಲಿಯೇ ಕಚ್ಚುತ್ತವೆ. ಅಧಿಕವಾದ ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರತರದ ನೋವು, ಮೈ–ಕೈ ನೋವು, ಕೀಲುಗಳಲ್ಲಿ ನೋವು, ವಾಕರಿಕೆ ಮತ್ತು ವಾಂತಿ ಈ ರೋಗದ ಪ್ರಮುಖ ಲಕ್ಷಣಗಳು. ಈ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರ ಬಳಿ ತೋರಿಸಬೇಕು. ನೀರಿನಾಂಶ ಇರುವಂತಹ ಪದಾರ್ಥ ಹಾಗೂ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು.

ಸೊಳ್ಳೆ ಉತ್ಪತ್ತಿ ತಾಣಗಳು: ಒಡೆದ ಟೈರ್‌ಗಳು, ತೆಂಗಿನ ಚಿಪ್ಪುಗಳು, ಸಿಮೆಂಟ್‌ ತೊಟ್ಟಿಗಳು, ತೆರೆದ ಪ್ಲಾಸ್ಟಿಕ್‌ ಪರಿಕರಗಳು, ಪ್ಲಾಸ್ಟಿಕ್‌ ಡ್ರಮ್‌ಗಳು, ಬಕೆಟ್‌ಗಳು, ನೀರಿನ ತೊಟ್ಟಿಗಳು, ಏರ್‌ಕೂಲರ್‌ಗಳು, ಅನುಪಯುಕ್ತ ಒರಳು ಕಲ್ಲುಗಳು, ಬಿಸಾಡಿದ ಪ್ಲಾಸ್ಟಿಕ್‌ ಲೋಟಗಳು, ಬಾಟಲಿಗಳು, ಮಡಿಕೆಗಳು, ಒಡೆದ ಪಿಂಗಾಣಿ ಪಾತ್ರೆಗಳು, ಹೂವಿನ ಕುಂಡಗಳ ತಟ್ಟೆಗಳು.

ಮುನ್ನೆಚ್ಚರಿಕೆ: ಡೆಂಗಿ ಮತ್ತು ಚಿಕೂನ್‌ಗುನ್ಯಕ್ಕೆ ಇಂತಹದೇ ಎಂದು ಔಷಧವಿಲ್ಲ. ಮುಂಜಾಗ್ರತೆಯೊಂದೇ ಇದಕ್ಕೆ ಮದ್ದು. ಸೊಳ್ಳೆಗಳ ನಿಯಂತ್ರಣದಿಂದ ರೋಗವನ್ನು ಹತೋಟಿಗೆ ತರಬಹುದು. ತೊಟ್ಟಿ, ಡ್ರಮ್‌ ಹಾಗೂ ಮಡಕೆಯಲ್ಲಿ ಶೇಖರಿಸಿದ ನೀರಿನಲ್ಲಿ ಸೊಳ್ಳೆಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಜತೆಗೆ, ಮನೆಯ ಸುತ್ತಲಿನ ಚರಂಡಿ ಹಾಗೂ ಗುಂಡಿಗಳಲ್ಲಿ ನಿಂತಿರುವ ನೀರಿನಲ್ಲೂ ಸೊಳ್ಳೆಗಳ ಸಂತಾನೋತ್ಪತ್ತಿ ನಡೆಯುತ್ತದೆ. ಹೀಗಾಗಿ, ಸಿಮೆಂಟ್‌ ತೊಟ್ಟಿ, ಡ್ರಮ್‌ ಮತ್ತು ಮಡಿಕೆಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ನಂತರ ನೀರು ತುಂಬಿಸಬೇಕು. ಚರಂಡಿ ಹಾಗೂ ಗುಂಡಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.

ಅಕ್ವೇರಿಯಂ ನೀರನ್ನು ಆಗಿಂದಾಗ್ಗೆ ಖಾಲಿ ಮಾಡಿ ಹೊಸ ನೀರು ತುಂಬಿಸಬೇಕು. ಮನಿಪ್ಲಾಂಟ್ ಇರುವ ಬಾಟಲಿಗಳ ನೀರನ್ನು ಎರಡು ದಿನಕ್ಕೊಮ್ಮೆಯಾದರೂ ಬದಲಾಯಿಸುತ್ತಿರಬೇಕು. ಆಗ ಮಾತ್ರ ಈ ಸೊಳ್ಳೆಗಳ ನಿಯಂತ್ರಣ ಸಾಧ್ಯ. ಪೂರ್ವ ಮುಂಗಾರು ಮಳೆ ಬರುತ್ತಿರುವುದರಿಂದ ನೀರು ಶೇಖರಣೆ ಹೆಚ್ಚಾಗುತ್ತದೆ. ಇದರಿಂದ ಸಹಜವಾಗಿಯೇ ಸೊಳ್ಳೆಗಳು ಅಧಿಕವಾಗಿ ಉತ್ಪತ್ತಿಯಾಗುತ್ತವೆ.

ರಾಷ್ಟ್ರೀಯ ಡೆಂಗಿ ದಿನಾಚರಣೆ

ಚಾಮರಾಜನಗರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಡೆಂಗಿ ದಿನವನ್ನು ಮೇ 25ರಂದು ಆಚರಿಸಲಿದೆ. ಇದರ ಅಂಗವಾಗಿ ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಬಳಿ ಜಾಥಾ ಏರ್ಪಡಿಸಲಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡೆಂಗಿ ಹಾಗೂ ಚಿಕೂನ್‌ಗುನ್ಯಾ ಪ್ರಕರಣಗಳು

37 ಡೆಂಗಿ ಪ್ರಕರಣಗಳಲ್ಲಿ ಚಾಮರಾಜನಗರ (28‌), ಗುಂಡ್ಲುಪೇಟೆ(4), ಕೊಳ್ಳೇಗಾಲ (3), ಯಳಂದೂರು‌ (2) ಪ್ರಕರಣಗಳು ಪತ್ತೆಯಾಗಿವೆ. 52 ಚಿಕನ್‌ಗುನ್ಯಾ ಪ್ರಕರಣಗಳಲ್ಲಿ ಚಾಮರಾಜನಗರದಲ್ಲಿ 44, ಗುಂಡ್ಲುಪೇಟೆ 4, ಕೊಳ್ಳೇಗಾಲ 2, ಯಳಂದೂರು 2 ಪ್ರಕರಣ ಪತ್ತೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT