ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯಗೆ ತಡೆ ಒಡ್ಡಲು ಎಚ್‌ಡಿಕೆ ನಡೆ!

ಕಾಂಗ್ರೆಸ್–ಬಿಜೆಪಿ ಕಡೆ ವಾಲುತ್ತಿರುವ ಜೆಡಿಎಸ್ ಶಾಸಕರ ಹಿಡಿದಿಡಲು ಕುಮಾರಸ್ವಾಮಿ ಒಳತಂತ್ರ
Last Updated 29 ಅಕ್ಟೋಬರ್ 2019, 18:56 IST
ಅಕ್ಷರ ಗಾತ್ರ

ಕಾಂಗ್ರೆಸ್‌ನಲ್ಲಿದ್ದ ಆಂತರಿಕ ಪ್ರತಿರೋಧವನ್ನು ಹಿಮ್ಮೆಟ್ಟಿಸಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನ ಗಳಿಸಿಕೊಂಡ ಸಿದ್ದರಾಮಯ್ಯ ಅವರ ವೇಗದ ಓಟಕ್ಕೆ ತಡೆ ಹಾಕುವುದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಹೊಸ ನಡೆಯ ಹಿಂದಿನ ರಹಸ್ಯ ತಂತ್ರ.

2018ರ ವಿಧಾನಸಭೆ ಚುನಾವಣೆಗೆ ಮುನ್ನ ‘ಶತ್ರು’ಗಳಂತೆ ವರ್ತಿಸಿ, ಚುನಾವಣೆ ಎದುರಿಸಿದ್ದ ಸಿದ್ದರಾಮಯ್ಯ–ಕುಮಾರಸ್ವಾಮಿ, ಆಕಸ್ಮಿಕವಾಗಿ ಸೃಷ್ಟಿಯಾದ ಸನ್ನಿವೇಶದಲ್ಲಿ ‘ಮಿತ್ರ’ರಾದರು. ಮೈತ್ರಿ ಸರ್ಕಾರ ರಚನೆ ಸಿದ್ದರಾಮಯ್ಯ ಅವರಿಗೆ ಕಿಂಚಿತ್ತೂ ಇಷ್ಟವಿರಲಿಲ್ಲ. ಹೈಕಮಾಂಡ್ ಸೂಚನೆ ಪಾಲಿಸಿದ ಸಿದ್ದರಾಮಯ್ಯ, ಒಲ್ಲದ ಮನಸ್ಸಿನಿಂದಲೇ ಸರ್ಕಾರದ ಜತೆಗಿದ್ದರು. ಸುಗಮವಾಗಿ ಸರ್ಕಾರ ನಡೆಸಲು ಸಹಕಾರ ನೀಡಿದ್ದಕ್ಕಿಂತ ಮಾತು–ನಡಾವಳಿಗಳಿಂದ ‘ಅಸಹಕಾರ’ ನೀಡಿದ್ದೇ ಹೆಚ್ಚು.

ಹೀಗಾಗಿ, ಲೋಕಸಭೆ ಚುನಾವಣೆ ಬಳಿಕ ಮೈತ್ರಿ ಸರ್ಕಾರ ಪತನವಾಯಿತು. ಸರ್ಕಾರ ಉರುಳಲು ‘ಆಪರೇಷನ್‌ ಕಮಲ’ ತಕ್ಷಣದ ಕಾರಣವಾಯಿತು. ಆದರೆ, ಸರ್ಕಾರ ಉಳಿಸಬೇಕಾಗಿದ್ದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ವರ್ತನೆಗಳೇ ಮೈತ್ರಿ ಸರ್ಕಾರಕ್ಕೆ ಮುಳುವಾಗಿದ್ದು ಈಗ ಇತಿಹಾಸ. ಆ ಬಳಿಕ, ಇಬ್ಬರು ನಾಯಕರು ಪರಸ್ಪರ ಬೈದಾಡಿಕೊಂಡು, ಕಾಲೆಳೆದುಕೊಂಡಿದ್ದು ಮುಂದುವರಿಯುತ್ತಲೇ ಇದೆ.

‘ರಾಹುಲ್‌ ಗಾಂಧಿ ಅವರ ಕೃಪೆಯಿಂದ ನಾನು ಮುಖ್ಯಮಂತ್ರಿಯಾದೆ. ದೇಶದಲ್ಲಿ ಇನ್ನು ಮುಂದೆ ಬಿಜೆಪಿಗೆ ಭವಿಷ್ಯವಿಲ್ಲ. ಜಾತ್ಯತೀತ ತತ್ವದ ಆಧಾರದ ಮೇಲೆ ನಿಂತಿರುವ ಪ್ರಾದೇಶಿಕ ಪಕ್ಷಗಳು ಇನ್ನು ಮುಂದೆ ಬಲಿಷ್ಠವಾಗಲಿವೆ’ ಎಂದೆಲ್ಲ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಹೇಳಿಕೆ ನೀಡುತ್ತಿದ್ದುದು ಉಂಟು. ಲೋಕಸಭೆ ಚುನಾವಣೆ ಹೊತ್ತಿಗಂತೂ ಬಿಜೆಪಿ ಮೇಲಿನ ಅವರ ಪ್ರಹಾರ ಇನ್ನಷ್ಟು ಬಿರುಸುಗೊಂಡಿತ್ತು. ಹಾಗಂತ, ಕುಮಾರಸ್ವಾಮಿ ‘ಜಾತ್ಯತೀತ’ ಪಕ್ಷದ ನೇತಾರರಾಗಿ ಅದೇ ತತ್ವವನ್ನು ಅನುಸರಿಸುತ್ತಾ ಬಂದಿದ್ದಾರೆಯೇ ಎಂದು ಹುಡುಕಹೊರಟರೆ ರಾಜ್ಯದ ಮತದಾರರಿಗೆ, ಅವರ ಪಕ್ಷವನ್ನು ನಂಬಿಕೊಂಡವರಿಗೆ ನಿರಾಶೆ ಎಂಬುದು ಕಟ್ಟಿಟ್ಟ ಬುತ್ತಿ. ಏಕೆಂದರೆ, 2006ರಲ್ಲಿ ಬಿಜೆಪಿ ಕೂಡಿಕೊಂಡು ಸರ್ಕಾರ ರಚಿಸಿದ ಹೊತ್ತಿನಲ್ಲಿ, ತಮ್ಮ ಪಕ್ಷದ ಹೆಸರಿನಲ್ಲೇ ಇರುವ ‘ಜಾತ್ಯತೀತ’ ಪದದ ಅರ್ಥವೇ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದುಂಟು.

ಬದಲಾದ ವರಸೆ: ಮೊನ್ನೆ ಮೊನ್ನೆಯವರೆಗೂ ಉಪಚುನಾವಣೆಗೆ ಸಿದ್ಧತೆ ಮಾಡಿಕೊಂಡು ಸರಣಿ ಸಭೆಗಳನ್ನು ನಡೆಸಿದ್ದ ಕುಮಾರಸ್ವಾಮಿ ಹಾಗೂ ಅವರ ತಂದೆ ಎಚ್.ಡಿ. ದೇವೇಗೌಡರು, ‘ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ. ಎಲ್ಲ 15 ಕ್ಷೇತ್ರಗಳನ್ನೂ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇವೆ. ಪಕ್ಷಕ್ಕೆ ದ್ರೋಹ ಎಸಗಿ ಹೋದವರನ್ನು (ಮೂವರು ಜೆಡಿಎಸ್ ಅನರ್ಹ ಶಾಸಕರು) ಸೋಲಿಸಿ, ಬಿಜೆಪಿಗೆ ಪಾಠ ಕಲಿಸುವುದೇ ತಮ್ಮ ಗುರಿ’ ಎಂದು ಪ್ರತಿಪಾದಿಸಿದ್ದರು.

‘ಉಪಚುನಾವಣೆ ಬಳಿಕ ಯಡಿಯೂರಪ್ಪ ಸರ್ಕಾರ ಇರುವುದಿಲ್ಲ’ ಎಂದೂ ಕುಮಾರಸ್ವಾಮಿ ಏರುಧ್ವನಿಯಲ್ಲಿ ಹೇಳಿದ್ದರು.

ಆದರೆ, ಕಳೆದ ಎರಡು ದಿನಗಳಿಂದ ಕುಮಾರಸ್ವಾಮಿ ಮಾತಿನ ವರಸೆ ಬದಲಾಗಿದೆ. ‘ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಚುನಾವಣೆ ನಡೆಯಲು ಬಿಡುವುದಿಲ್ಲ. ಅಂತಹ ಸನ್ನಿವೇಶ ಸೃಷ್ಟಿಯಾದರೆ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಚಿಂತನೆ ಮಾಡುತ್ತೇವೆ’ ಎಂದು ಹೊಸ ರಾಗ ಹಾಡುತ್ತಿದ್ದಾರೆ.

‘ಉಪಚುನಾವಣೆ ನಡೆದಲ್ಲಿ ಬಿಜೆಪಿಯು ಅಪೇಕ್ಷಿತ (ಕನಿಷ್ಠ 8) ಕ್ಷೇತ್ರಗಳಲ್ಲಿ ಗೆಲ್ಲದೇ ಹೋದರೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಪತನಗೊಳ್ಳಲಿದೆ. ಆಗ ಚುನಾವಣೆ ಎದುರಾದರೆ, ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶ ಒದಗುತ್ತದೆ’ ಎಂಬ ‘ಭರವಸೆ’ಯಲ್ಲಿರುವ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯನವರ ಕನಸಿಗೆ ಭಂಗ ತರುವುದು ಕುಮಾರಸ್ವಾಮಿಯವರ ತಕ್ಷಣದ ತಂತ್ರ. ಏಕೆಂದರೆ ವಿರೋಧ ಪಕ್ಷದ ನಾಯಕರಾದ ಬಳಿಕ, ಅತಿ ಹುಮ್ಮಸ್ಸಿನಲ್ಲಿ ರಾಜ್ಯವ್ಯಾಪಿ ಓಡಾಡುತ್ತಿರುವ ಸಿದ್ದರಾಮಯ್ಯ, ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾಗುವ ಕನಸಿನಲ್ಲಿದ್ದಾರೆ. ಅದನ್ನು ಬಹಿರಂಗವಾಗಿಯೇ ಅವರು ಹೇಳಿ
ಕೊಂಡಿದ್ದಾರೆ.

ಚುನಾವಣೆ ನಡೆದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆಯೋ ಇಲ್ಲವೋ ಬೇರೆ ಪ್ರಶ್ನೆ. ಆದರೆ, ಅಂತಹ ಚುನಾವಣೆಗೆ ಅವಕಾಶವನ್ನೇ ನೀಡಬಾರದೆನ್ನುವುದು ಕುಮಾರಸ್ವಾಮಿ ಲೆಕ್ಕಾಚಾರ. ಇದರ ಹಿಂದೆ ಅವರದೊಂದು ಸ್ವಾರ್ಥವೂ ಇದೆ. ಜೆಡಿಎಸ್‌ನಲ್ಲಿ ವಿಜೃಂಭಿಸುತ್ತಿರುವ ಕುಟುಂಬ ರಾಜಕಾರಣದಿಂದ ಬೇಸತ್ತಿರುವ ಶಾಸಕರ ಪೈಕಿ ಆರೇಳು ಜನ ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಒಲವು ಹೊಂದಿದ್ದು, ಕಾಂಗ್ರೆಸ್‌ಗೆ ಸೇರುವ ಇರಾದೆಯಲ್ಲಿದ್ದಾರೆ. ಚುನಾವಣೆ ನಡೆಯುವುದಿಲ್ಲ ಎಂಬ ಸುದ್ದಿ ಹರಿಬಿಟ್ಟು ಕಾಂಗ್ರೆಸ್ ಕಡೆ ಮುಖ ಮಾಡಿರುವವರನ್ನು ಮುಂದಿನ ಚುನಾವಣೆ (2023) ವರೆಗಾದರೂ ಹಿಡಿದಿಟ್ಟುಕೊಳ್ಳುವುದು ಕುಮಾರಸ್ವಾಮಿ ಸಂಕಲ್ಪ.

ಅತ್ತ, ಜೆಡಿಎಸ್‌ನ ನಾಲ್ಕೈದು ಶಾಸಕರು ಬಿಜೆಪಿ ಸೇರಲು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ‘ನೀವು ಸೇರುವ ಮೊದಲೇ ನಾನೇ ಯಡಿಯೂರಪ್ಪನವರ ಬೆನ್ನಿಗೆ ನಿಲ್ಲುತ್ತೇನೆ; ಆಗ ನೀವು ಬಿಜೆಪಿ ನಾಯಕರ ಲೆಕ್ಕಕ್ಕೇ ಇರುವುದಿಲ್ಲ’ ಎಂಬ ಸಂದೇಶವನ್ನು ‘ಕಮಲ’ ಪಾಳಯದತ್ತ ಹೊರಟ ಶಾಸಕರಿಗೆ ರವಾನಿಸುವುದೂ ಕುಮಾರಸ್ವಾಮಿಯವರ ಒಳತರ್ಕ.

ಕಾಂಗ್ರೆಸ್–ಬಿಜೆಪಿಯತ್ತ ವಾಲುತ್ತಿರುವ ಶಾಸಕರನ್ನು ಹೇಗಾದರೂ ಮಾಡಿ ಹಿಡಿದಿಟ್ಟು ಪಕ್ಷ ಉಳಿಸಿಕೊಳ್ಳುವುದು ಕುಮಾರಸ್ವಾಮಿಯವರ ಹೊಸ ನಡೆಯ ಹಿಂದಿನ ಅಸಲು ಆಶಯ. ಈ ಎಲ್ಲ ರಾಜಕೀಯದಾಚೆಗೆ ಕುಮಾರಸ್ವಾಮಿ ಅವರಿಗೆ ಇರುವ ಇನ್ನೊಂದು ಅಪೇಕ್ಷೆ ಎಂದರೆ, ಬಿಜೆಪಿ ಸರ್ಕಾರ ಇದ್ದರೂ ಮುಂದಿನ ನಾಲ್ಕು ವರ್ಷ, ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಿಸುವುದೂ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT