ಶುಕ್ರವಾರ, ಡಿಸೆಂಬರ್ 6, 2019
20 °C
ಅಥಣಿಯಲ್ಲಿ ರೋಡ್‌ ಶೋ ನಡೆಸಿದ ಸಿದ್ದರಾಮಯ್ಯ ಆರೋಪ

ನೆರೆ ಸಂತ್ರಸ್ತರಿಗೆ ಸಿಗದ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ‘ತಾಲ್ಲೂಕಿನಲ್ಲಿ ನೆರೆಯಿಂದ ಸಂತ್ರಸ್ತರಾದವರಿಗೆ ಸಮರ್ಪಕ ಪರಿಹಾರ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮಹಾಪೂರದಿಂದ ಬಾಧಿತವಾಗುವ ಗ್ರಾಮಗಳನ್ನು ಸ್ಥಳಾಂತರಿಸುವ ಕಾರ್ಯ ಪ್ರಾರಂಭವಾಗಿಲ್ಲ. ಈ ಸಿಟ್ಟನ್ನು ಜನರು ಉಪ ಚುನಾವಣೆಯಲ್ಲಿ ತೋರಿಸಬೇಕು’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕೋರಿದರು.

ಇಲ್ಲಿ ಶುಕ್ರವಾರ ರಾತ್ರಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ರೋಡ್ ಶೋ ನಡೆಸಿ ಮತಯಾಚಿಸಿದ ಅವರು ಬಿಜೆಪಿ ಮುಖಂಡರು ಹಾಗೂ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘ಒಂದೂವರೆ ಏನೂ ಕೆಲಸ ಮಾಡದವ ಅಥಣಿ ಅಭಿವೃದ್ಧಿಗಾಗಿ ಬಿಜೆಪಿಗೆ ಹೋಗಿದ್ದೇನೆ ಎನ್ನುತ್ತಿದ್ದಾನೆ. ಈ ಮಾತು ಕೇಳಿದರೆ ಕುಣಿಯಲಾರದವ ನೆಲ ಡೊಂಕು ಎಂದಂತಾಗಿದೆ. ಹಣಕ್ಕೋಸ್ಕರ ಏನಾದರೂ ಮಾಡುವ ಅವರಿಗೆ ಮರ್ಯಾದೆ ಇಲ್ಲ. ಬಿಜೆಪಿಯಿಂದ ಹಣ ಪಡೆದಿದ್ದಾರೆ ಹಾಗೂ ಅವರ ಚುನಾವಣಾ ವೆಚ್ಚವನ್ನೂ ಆ ಪಕ್ಷದವರೇ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ನಾವು ವಿರೋದ ಪಕ್ಷದಲ್ಲಿದ್ದರೂ ಕೆಲಸ ಮಾಡಿಸ್ತೀವಿ. ಧಮ್ ಇದ್ದವರು ಮಾತ್ರ ಕೆಲಸ ಮಾಡಿಸುತ್ತಾರೆ’ ಎಂದರು.

‘ಕೆಲವಡೆ ಅನರ್ಹ ಶಾಸಕರು ನಮ್ಮ ಊರಿಗೆ ಬರಬೇಡಿ ಎಂದು ಜನರು ಬೋರ್ಡ್‌ ಹಾಕಿದ್ದಾರೆ. ಅದರರ್ಥ ನೀವು ನಮಗೆ ಬೇಕಿಲ್ಲ ಎನ್ನುವುದೇ ಆಗಿದೆ’ ಎಂದು ಹೇಳಿದರು.

‘ಯಡಿಯೂರಪ್ಪ ಒಮ್ಮೆಯೂ ಮುಂಬಾಗಿಲಿನಿಂದ ಅಧಿಕಾರಕ್ಕೆ ಬಂದಿಲ್ಲ. ಹಿಂಬಾಗಿಲಿನಿಂದ ಬರುವುದಷ್ಟೇ ಗೊತ್ತು. ಬಿಜೆಪಿಯವರು ಹಣ ಕೊಟ್ಟರೆ ತಗೊಳ್ಳಿ. ಆದರೆ ಮತ ಕಾಂಗ್ರೆಸ್‌ಗೆ ಹಾಕಿ’ ಎಂದು ಕೋರಿದರು.

‘ಮುಸ್ಲಿಮರಿಗೆ ಟಿಕೆಟ್‌ ಕೊಡಬೇಕಾದರೆ ಬಿಜೆಪಿ ಕಚೇರಿಯಲ್ಲಿ 10 ವರ್ಷ ಕಸ ಗುಡಿಸಬೇಕು ಎಂದು ಕೆ.ಎಸ್. ಈಶ್ವರಪ್ಪ ಹೇಳುತ್ತಾರೆ. ಅವರಿಗೆ ಸಾಮಾನ್ಯ ಜ್ಞಾನವಿಲ್ಲ. ಮಿದುಳಿಗೂ ನಾಲಿಗೆಗೆ ಕನೆಕ್ಷನ್ ಇಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ನಾನು ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆ ಆರಂಭಿಸಿದ್ದೆ. ಕೆಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿ ಅಚರಿಸಿದ್ದ ಯಡಿಯೂರಪ್ಪ ಈಗ ನಿಲ್ಲಿಸಿದ್ದೇಕೆ? ಬಿಜೆಪಿಗೆ ಬಂದ ಮೇಲೆ ಟಿಪ್ಪು ಮತಾಂಧ ಎನ್ನುತ್ತಿದ್ದಾರೆ. ಅವರಿಗೆ 2 ನಾಲಿಗೆ ಇವೆ. ಸುಳ್ಳು ಬಿಜೆಪಿಯವರ ಮನೆದೇವರು’ ಎಂದು ಟೀಕಿಸಿದರು.

‘ಬಿಜೆಪಿಯವರಿಂದ ದೇಶಕ್ಕೆ ಒಳ್ಳೆಯವರಲ್ಲ. ಏಕೆಂದರೆ, ಸಂವಿಧಾನ ಮುಗಿಸಲು ಅವರು ಹೊರಟಿದ್ದಾರೆ. ಎಲ್ಲರಿಗೂ ಸಮಾನ ಅವಕಾಶ ಕೊಟ್ಟ ಪ್ರಪಂಚದ ದೊಡ್ಡ ಸಂವಿಧಾನ ನಮ್ಮದು. ಅದನ್ನು ಕಂಡರೆ ಬಿಜೆಪಿಯವರಿಗೆ ಸಹಿಸಲಾಗದು. ಆ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಎಲ್ಲರ ನಾಶವಾಗಿದೆ’ ಎಂದು ದೂರಿದರು.

ಶಾಸಕ ಎಂ.ಬಿ. ಪಾಟೀಲ, ಮುಖಂಡ ವಿನಯ ಕುಲಕರ್ಣಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು