ಭಾನುವಾರ, ಸೆಪ್ಟೆಂಬರ್ 22, 2019
25 °C
ಕನಿಷ್ಠ ಜ್ಞಾನ ಇಲ್ಲದ ಸಂಸದ ಎಂದು ಟೀಕೆ

ಬಿಜೆಪಿ ನಾಟಕ ಮಂಡಳಿಯ ಕಾಮಿಡಿ ಪಾತ್ರ ನಳಿನ್ ಕುಮಾರ್ ಕಟೀಲ್: ಸಿದ್ದರಾಮಯ್ಯ ಲೇವಡಿ

Published:
Updated:

ಬೆಂಗಳೂರು: ಶಾಸಕ ಡಿ.ಕೆ.ಶಿವಕುಮಾರ್ ಬಂಧನಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ತಿರುಗೇಟು ನೀಡಿದ್ದಾರೆ.

‘ರಾಜ್ಯದ ಬಿಜೆಪಿ ನಾಟಕ‌ ಮಂಡಳಿಗೆ ಕಾಮಿಡಿ ಪಾತ್ರದ ಅಗತ್ಯ ಇತ್ತು, ಅದಕ್ಕಾಗಿ ನಳಿನ್ ಕುಮಾರ್ ಕಟೀಲ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರನ್ನು ಅವರ ಪಕ್ಷದವರೂ ಸೇರಿದಂತೆ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದ್ದರಿಂದ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

‘ಒಬ್ಬ ಸಂಸದರಿಗೆ, ಅದರಲ್ಲೂ ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಿಗೆ ಇ.ಡಿ, ಐ.ಟಿ ಇಲಾಖೆ ಯಾರ ಅಧೀನದಲ್ಲಿ ಬರುತ್ತದೆ ಎಂಬ ಕನಿಷ್ಠ ಜ್ಞಾನವಾದರೂ ಬೇಡವೇ? ಇದುವರೆಗೂ ಬಿಜೆಪಿ ಬೇರೆ ಬೇರೆ ಕೋಮುಗಳ ನಡುವೆ ಬೆಂಕಿಹಚ್ಚಿ ತನ್ನ ಸ್ವಾರ್ಥ ಸಾಧಿಸಿಕೊಳ್ಳುತ್ತಿತ್ತು, ಈಗ ತನ್ನ ಎದುರಾಳಿ ನಾಯಕರ ನಡುವೆ ಹುಳಿ ಹಿಂಡುವ ಹೀನ ಕಾರ್ಯಕ್ಕೆ ಇಳಿದಿದೆ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ಡಿ.ಕೆ.ಶಿವಕುಮಾರ್ ರಾಜಕೀಯವಾಗಿ ಬೆಳೆಯುತ್ತಾರೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡಿದ್ದಾರೆ. 2017ರಲ್ಲಿ ಶಿವಕುಮಾರ್ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ (ಐಟಿ) ದಾಳಿ ಆದಾಗ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿ ಇತ್ತು. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರು. ಅವರು ಮನಸ್ಸು ಮಾಡಿದ್ದರೆ ಆಗ ಐಟಿ ದಾಳಿ ತಡೆಯಬಹುದಿತ್ತು’ ಎಂದು ಬಾಗಲಕೋಟೆಯಲ್ಲಿ ಭಾನುವಾರ ನಳಿನ್ ಹೇಳಿದ್ದರು.

ಯಡಿಯೂರಪ್ಪ ವಿರುದ್ಧವೂ ಟೀಕೆ

ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನೂ ಕಟುವಾಗಿ ಟೀಕಿಸಿರುವ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಡಿಕೆಶಿ ಬಂಧನದ ಹಿಂದೆ ಸಿದ್ದರಾಮಯ್ಯ ಕೈವಾಡ: ನಳಿನ್‌ ಕುಮಾರ್ ಕಟೀಲ್ ಆರೋಪ

‘ನಮ್ಮ ಸರ್ಕಾರದ ಜನಪರ ಯೋಜನೆಗಳನ್ನು ಸ್ಥಗಿತಗೊಳಿಸಲು ಯಡಿಯೂರಪ್ಪನವರು ಹೊಸ ತಂತ್ರಗಳ ಹುಡುಕಾಟದಲ್ಲಿದ್ದಾರೆ. ತನಿಖಾ ಪ್ರಹಸನ ಇದರಲ್ಲೊಂದು. ತನಿಖೆಯನ್ನು ಬೇಡ ಎನ್ನುವುದಿಲ್ಲ, ತನಿಖೆಯ ನೆಪದಲ್ಲಿ ಯೋಜನೆಗಳನ್ನು ನಿಲ್ಲಿಸಿದರೆ ಬೀದಿಗಿಳಿಯುವ ಜನರ ಜತೆ ನಾನೂ ಇರುತ್ತೇನೆ ಎನ್ನುವುದು ತಿಳಿದಿರಲಿ’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ದಿನದಿಂದ ವರ್ಗಾವಣೆ ಮತ್ತು ದ್ವೇಷ ರಾಜಕಾರಣ ಬಿಟ್ಟು ಬೇರೇನೂ ಮಾಡುತ್ತಿಲ್ಲ. ಪ್ರವಾಹದಿಂದ ಎಲ್ಲವನ್ನೂ ಕಳೆದುಕೊಂಡವರ ಬದುಕು ಬೀದಿಗೆ ಬಂದಿದೆ, ಈಶ್ವರಪ್ಪನವರು ಈ ನಿರಾಶ್ರಿತರಿಗೆ ಹತ್ತು ಸಾವಿರ ರೂಪಾಯಿ ಕೊಟ್ಟಿರುವುದೇ ಹೆಚ್ಚು ಎನ್ನುತ್ತಾರೆ. ಇಂಥವರಿಗೆ ಜನರ ಬಗ್ಗೆ ಕಾಳಜಿ, ಕರುಣೆ ಏನಾದರೂ ಇದೆಯೇ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ನಮ್ಮ ಸರ್ಕಾರದ ಅವಧಿಯ 5 ಯೋಜನೆಗಳನ್ನು ಯಡಿಯೂರಪ್ಪ ಅವರು ತನಿಖೆಗೆ ಒಳಪಡಿಸುತ್ತಿರುವುದು ಬಹಳ ಸಂತೋಷ. ಬೆಟ್ಟ ಅಗೆದು ಇಲಿ ಹಿಡಿಯುವುದಿದ್ದರೆ ನಾವ್ಯಾಕೆ ಬೇಡ ಎನ್ನಲಿ! ಇದು ತಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿಹಾಕಲು ಪ್ರಾರಂಭಿಸಿರುವ ಹೊಸ ನಾಟಕ ಎನ್ನುವುದನ್ನು ಅರಿಯದಷ್ಟು ರಾಜ್ಯದಜನ ಮುಗ್ಧರಲ್ಲ’ ಎಂದೂ ಅವರು ಟ್ವೀಟ್ ಮಾಡಿದ್ದಾರೆ.

Post Comments (+)