ಶುಕ್ರವಾರ, ಸೆಪ್ಟೆಂಬರ್ 24, 2021
26 °C

ಸಿದ್ದರಾಮಯ್ಯ ಒಳ್ಳೆಯ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಲಿ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ನನ್ನ ನಾಲಗೆ ಮಿದುಳಿಗೆ ಲಿಂಕ್ ಇಲ್ಲ ಎಂದು ಆರೋಪ ಮಾಡುವ ಸಿದ್ದರಾಮಯ್ಯ ಅವರು ಮೊದಲು ಒಳ್ಳೆಯ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಲಿ’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಪಕ್ಷ ಬಿಡುತ್ತೇನೆ ಎಂದು ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ ಮಾತನ್ನೇ ನಾನು ಪುನರುಚ್ಚರಿಸಿದ್ದೇನೆ. ಸಿದ್ದರಾಮಯ್ಯ ತಮ್ಮ ಪಕ್ಷದ ಶಾಸಕರೇ ಅಗಿರುವ ರಮೇಶ ಜಾರಕಿಹೊಳಿ ಅವರನ್ನು ಈ ಬಗ್ಗೆ ಕೇಳಿ ಖಚಿತಪಡಿಸಿಕೊಳ್ಳಲಿ. ಇಲ್ಲವಾದರೆ, ಯಾವ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡರೆ ಸೂಕ್ತ ಎಂದು ರಮೇಶ್ ಜಾರಕಿಹೊಳಿ ಅವರಿಂದಲೇ ಸಲಹೆ ಪಡೆಯಲಿ’ ಎಂದು ವ್ಯಂಗ್ಯವಾಡಿದರು.

‘ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಿರುವ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ ಹಾಗೂ ಕೆಲವು ಶಾಸಕರಿಗೆ ರಾಹುಲ್ ಗಾಂಧಿ ಅವರು ನೋಟಿಸ್ ನೀಡಿ ಕ್ರಮ ಕೈಗೊಳ್ಳಲಿ. ಆ ಮೂಲಕವಾದರೂ ಪಕ್ಷ ಇನ್ನೂ ಜೀವಂತ ಇದೆ ಎಂದು ತೋರಿಸಲಿ ಎಂದು’ ಲೇವಡಿ ಮಾಡಿದರು.

ಕುಂಟ ಕುರುಡನ‌ಮೇಲೆ ಹೊರಟಂತಿದೆ ಈ ಸರ್ಕಾರ. ಯಾವುದೇ ಕಾರಣಕ್ಕೂ ಗುರಿ ತಲುಪುವುದಿಲ್ಲ. ಕಾಂಗ್ರೆಸ್ ಹಿರಿಯ ನಾಯಕ ಗುಲಾಂನಬಿ ಆಜಾದ್ ಅವರು ಜೆಡಿಎಸ್ ಗೆ ಬೇಷರತ್ ಬೆಂಬಲ ಅಂದಿದ್ದರು. ಆದರೆ ಈಗ ಕುಮಾರಸ್ವಾಮಿ ಅವರಿಗೆ ತೊಂದರೆ ನೀಡುತ್ತಿದ್ದಾರೆ. ಕಾಂಗ್ರೆಸ್ ಕಾಟ ತಾಳಲಾರದೆ ಕುಮಾರಸ್ವಾಮಿ ಒಂದು ವರ್ಷದಲ್ಲಿ ಅದೆಷ್ಟೋ ಬಾರಿ ಕಣ್ಣೀರು ಹಾಕಿದ್ದಾರೆ’ ಎಂದರು.

ಈಶ್ವರಪ್ಪ ಬಿರುಸಿನ ಪ್ರಚಾರ:

ಕುಂದಗೋಳ ತಾಲ್ಲೂಕಿನ ಇಂಗಳಗಿ, ಕುಬಿಹಾಳ, ತೀರ್ಥ, ದೇವನೂರು ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ ಪರ ಈಶ್ವರಪ್ಪ ಬುಧವಾರ ಬಿರುಸಿನ ಪ್ರಚಾರ ನಡೆಸಿದರು. ಕುರುಬ ಸಮುದಾಯ ಮತಗಳು ಹೆಚ್ಚಿರುವ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಅವರು ಮತಬೇಟೆ ಮಾಡಿದರು.

ಗ್ರಾಮಗಳಲ್ಲಿ ಸಭೆ ಮಾಡಿ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಸಂಖ್ಯಾಬಲ ಹೆಚ್ಚಾಗುತ್ತದೆ. ಮುಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲು ಅನುಕೂಲವಾಗುತ್ತದೆ ಎಂದು ಮನದಟ್ಟು ಮಾಡಿಕೊಡಲು ಪ್ರಯತ್ನಿಸಿದರು.

ಸ್ಥಳೀಯ ಮುಖಂಡರೊಂದಿಗೆ ಮಾತನಾಡಿದ ಅವರು, ಗ್ರಾಮದಲ್ಲಿ ಯಾವ್ಯಾವ ಸಮುದಾಯಗಳಿವೆ. ಅವರು ಯಾವ ಪಕ್ಷದ ಪರ ಒಲವು ಹೊಂದಿದ್ದಾರೆ ಎಂಬ ವಿಷಯಗಳನ್ನು ತಿಳಿದುಕೊಂಡರು. ಬಿಜೆಪಿ ಪರ ಮತ ಹಾಕಿಸುವಂತೆ ತಾಕೀತು ಮಾಡಿದರು. ವೀರಶೈವ– ಲಿಂಗಾಯತ ಒಡೆಯಲು ಹೋಗಿದ್ದ ಕಾಂಗ್ರೆಸ್, ಈ ಚುನಾವಣೆಯಲ್ಲಿಯೂ ಜಾತಿ ರಾಜಕೀಯ ಮಾಡುತ್ತಿದೆ. ಆದರೆ ಜನರು ಅವರಿಗೆ ತಕ್ಕ ಉತ್ತರ ನೀಡುವರು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು