ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರರಿಗೆ ಘೋಷಿಸಿದ ಪರಿಹಾರ ಪ್ಯಾಕೇಜ್‌ ಶೀಘ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ

ಎರಡು ತಿಂಗಳು ಕಳೆದರೂ ಪರಿಹಾರ ಸಿಕ್ಕಿಲ್ಲ ಎಂದು ಟೀಕೆ
Last Updated 25 ಜೂನ್ 2020, 7:39 IST
ಅಕ್ಷರ ಗಾತ್ರ

ಬೆಂಗಳೂರು: ‘ನೇಕಾರರಿಗೆ ಘೋಷಿಸಿರುವ ಪರಿಹಾರ ಪ್ಯಾಕೇಜ್‍ನ್ನು ಶೀಘ್ರವೇ ಜಾರಿಗೆ ತಂದು ಹಣ ಬಿಡುಗಡೆ ಮಾಡಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

‘ಪ್ರತಿ ನೇಕಾರರ ಕುಟುಂಬಕ್ಕೆ ₹ 2,000 ನೀಡುವುದಾಗಿ ಸರ್ಕಾರ ಘೋಷಿಸಿ ಎರಡು ತಿಂಗಳು ಕಳೆದರೂ ಈವರೆಗೂ ಒಂದೇ ಒಂದು ರೂಪಾಯಿ ಕೂಡ ಈ ಕುಟುಂಬಗಳಿಗೆ ತಲುಪಿಲ್ಲ. ಸರ್ಕಾರ ಸಂಪೂರ್ಣವಾಗಿ ನೇಕಾರರನ್ನು ನಿರ್ಲಕ್ಷಿಸಿದೆ ಮತ್ತು ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಹೀಗಾಗಿ ಅತ್ಯಂತ ತುರ್ತಾಗಿ ಹಣ ಬಿಡುಗಡೆ ಮಾಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ನೇಕಾರರ ಸಂಕಷ್ಟಗಳನ್ನು ನೀಗಿಸಲು ಕೃಷಿ ಕ್ಷೇತ್ರದಲ್ಲಿ ಅನುಸರಿಸಲಾಗುತ್ತಿರುವ ಆವರ್ತ ನಿಧಿ ಪದ್ಧತಿಯನ್ನು ನೇಕಾರಿಕೆಗೂ ಅಳವಡಿಸಿ ಬಿಕ್ಕಟ್ಟು ಬಂದಾಗ ಉಪಯೋಗಿಸಲು ಕ್ರಮವಹಿಸಬೇಕು’ ಎಂದೂ ಅವರು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.

‘ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಸುಮಾರು 2 ಲಕ್ಷ ಸಂಖ್ಯೆಯ ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳಿವೆ. ಸುಮಾರು 7ಲಕ್ಷದಿಂದ 8 ಲಕ್ಷ ಕುಟುಂಬಗಳು ಈ ವೃತ್ತಿಯನ್ನು ಅವಲಂಬಿಸಿ ಬದುಕುತ್ತಿವೆ. ಸರ್ಕಾರ 20 ಎಚ್.ಪಿ ಗಿಂತ ಕಡಿಮೆ ವಿದ್ಯುತ್ ಬಳಸುವ ಮಗ್ಗಗಳನ್ನು ಮಾತ್ರ ಲೆಕ್ಕ ಹಾಕಿ ಕಡಿಮೆ ಸಂಖ್ಯೆ ತೋರಿಸುತ್ತಿದೆ’ ಎಂದರು.

‘ಪ್ರತಿ ದಿನದ ದುಡಿಮೆಯನ್ನು ನಂಬಿ ಬದುಕುವ ನೇಕಾರ ಸಮುದಾಯ ಸರ್ಕಾರದ ನೀತಿಗಳಿಂದಾಗಿ ಮತ್ತು ನಿರ್ಲಕ್ಷ್ಯ ಧೋರಣೆಗಳಿಂದಾಗಿ ತೀವ್ರ ರೀತಿಯ ಬಿಕ್ಕಟ್ಟು ಎದುರಿಸುತ್ತಿದೆ. ಇದರಿಂದಾಗಿ ಆಯಾ ದಿನದ ಅನ್ನವನ್ನು ಹೊಂದಿಸಿಕೊಳ್ಳಲಾಗದ ಪರಿಸ್ಥಿತಿ ಈ ಕುಟುಂಬಗಳಲ್ಲಿ ಉದ್ಭವವಾಗಿದೆ. ಏಳೆಂಟು ತಿಂಗಳಿನಿಂದ ತಯಾರಿಸಿದ ಸೀರೆ, ಬಟ್ಟೆ ಮತ್ತು ಇನ್ನಿತರೆ ಉತ್ಪನ್ನಗಳು ಮಾರಾಟವಾಗದೆ ಹಾಗೆ ಉಳಿದಿವೆ. ನೇಕಾರಿಕೆ ಬಿಟ್ಟು ಇತರೆ ಯಾವುದೆ ಕಸುಬು ಗೊತ್ತಿಲ್ಲದೆ ಇರುವ ಇತರೆ ಕುಶಲಕರ್ಮಿ ಜಾತಿಗಳಂತೆ ನೇಕಾರಿಕೆಯೂ ಒಂದಾಗಿರುವುದರಿಂದ ಸಮಸ್ಯೆ ಇಷ್ಟೊಂದು ಬಿಗಡಾಯಿಸಲು ಕಾರಣವಾಗಿದೆ’ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

‘15 ದಿನಗಳಿಂದ ರಾಜ್ಯದ ಬೆಳಗಾವಿ, ದೊಡ್ಡಬಳ್ಳಾಪುರ, ಧಾರವಾಡ ಮುಂತಾದ ಕಡೆ 6 ಜನ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಆಘಾತಕಾರಿ ಮಾಹಿತಿ ಇದೆ. ಬಿಕ್ಕಟ್ಟಿನ ಆರಂಭ ಇದು. ದುಡಿದು ಬದುಕುವ ಇಂತಹ ಸಮುದಾಯಗಳ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರೆ, ಇದು ಸರ್ಕಾರದ ವೈಫಲ್ಯದ ನೇರ ಫಲ’ ಎಂದು ಅವರು ಆರೋಪಿಸಿದ್ದಾರೆ.

‘ಐದಾರು ತಿಂಗಳಿಂದ ಸುಮಾರು ₹ 1000 ಕೋಟಿ ಮೌಲ್ಯದ ಉತ್ಪನ್ನವನ್ನು ನೇಕಾರರು ಸಿದ್ಧಪಡಿಸಿದ್ದಾರೆ. ಇದರಲ್ಲಿ ಕೈ ಮಗ್ಗದಲ್ಲಿ ಉತ್ಪಾದಿಸಿದ ಬಟ್ಟೆಗಳ ಮೌಲ್ಯ ಸುಮಾರು ₹ 15 ಕೋಟಿ. ಉಳಿದದ್ದು ವಿದ್ಯುತ್ ಮಗ್ಗಗಳಲ್ಲಿ ತಯಾರಿಸಿದ್ದು. ಇದನ್ನು ನಿಭಾಯಿಸುವುದಕ್ಕೆ ಸರ್ಕಾರಕ್ಕೆ ಯಾವ ಸಮಸ್ಯೆಯೂ ಇಲ್ಲ. ಅಂಗನವಾಡಿ ಕಾರ್ಯಕರ್ತರು, ಸರ್ಕಾರಿ ನೌಕರರು, ಆಶಾ ಕಾರ್ಯಕರ್ತೆಯರು ಮತ್ತು ಪಡಿತರ ವಿತರಣೆ ವ್ಯವಸ್ಥೆಗಳ ಮೂಲಕ ವಿತರಿಸಿ ನಿಭಾಯಿಸಬಹುದು. ಇದನ್ನು ಮಾಡುವುದಕ್ಕೆ ಸರ್ಕಾರಕ್ಕೆ ಇಚ್ಛಾಶಕ್ತಿ ಬೇಕು’ ಎಂದಿದ್ದಾರೆ

‘ಇದರಲ್ಲಿ ಕೆಲವು ರೀತಿಯ ಸೀರೆಗಳನ್ನು ಪಾಲಿಶಿಂಗ್ ಮುಂತಾದ ಪ್ರಕ್ರಿಯೆ ಮಾಡಿ ಪರಿಪೂರ್ಣಗೊಳಿಸಬೇಕಾಗಿರುತ್ತದೆ. ಇಂಥದನ್ನು ಕೆ.ಎಸ್.ಐ.ಸಿ ಮೂಲಕ ನಿಭಾಯಿಸಬಹುದು ಹಾಗೂ ಎಂಎಸ್ಐಎಲ್, ಕೆಎಸ್‌ಟಿಐಡಿಸಿ ಅಥವಾ ಕೆ‌ಎಚ್‌ಡಿಸಿ ಮೂಲಕವಾದರೂ ಖರೀದಿ ಮಾಡಿ ಮಾರುಕಟ್ಟೆ ಮಾಡುವ ಯೋಜನೆ ರೂಪಿಸಬೇಕು. ಸರ್ಕಾರ ಈ ರೀತಿಯ ಉಪಕ್ರಮಗಳನ್ನು ತುರ್ತಾಗಿ ಅನುಸರಿಸಿ ನೇಕಾರರ ಸಂಕಷ್ಟಗಳನ್ನು ನಿಭಾಯಿಸಬೇಕು. ಇಲ್ಲದಿದ್ದರೆ ಗಂಭೀರ ಅನಾಹುತಗಳಿಗೆ ನೇಕಾರರ ಕುಟುಂಬಗಳನ್ನು ಸರ್ಕಾರವೇ ದೂಡಿದಂತಾಗುತ್ತದೆ’ ಎಂದೂ ಅವರು ಹೇಳಿದ್ದಾರೆ.

‘ಮುಖ್ಯಮಂತ್ರಿಗಳು ನೇಕಾರರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದರು. ಆದರೆ, ಆಗಸ್ಟ್ 2019 ರಿಂದ ಮಾರ್ಚ್ 2020 ರವರೆಗೆ ಮನ್ನಾ ಮಾಡಿದ್ದು 4,500 ಜನರ ಸುಮಾರು ₹ 18.05 ಕೋಟಿ ಮಾತ್ರ. ಏಪ್ರಿಲ್ 1 ರಿಂದ ಈವರೆಗೆ ಕೇವಲ 6,000 ಜನರ ₹ 26 ಕೋಟಿಗಳನ್ನು ಮಾತ್ರ ಮನ್ನಾ ಮಾಡಲಾಗಿದೆ. ಆದುದರಿಂದ, ಶೀಘ್ರವಾಗಿ ಬಾಕಿ ಉಳಿದಿರುವ ಎಲ್ಲ ನೇಕಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಕೇಂದ್ರ ಸರ್ಕಾರವು ದೊಡ್ಡ ದೊಡ್ಡ ಬಂಡವಾಳ ಹೂಡಿಕೆದಾರರ ಲಕ್ಷಾಂತರ ಕೋಟಿ ಸಾಲವನ್ನು ಕೈಬಿಡುತ್ತಿರುವಾಗ ಬಡವರ ಸಾಲ ಮನ್ನಾ ಮಾಡುವುದು ಅಪರಾಧವಲ್ಲ’ ಎಂದಿದ್ದಾರೆ

‘ಸಂಕಷ್ಟದಲ್ಲಿರುವ ನೇಕಾರರು ಸೇರಿದಂತೆ ಪ್ರತಿ ಕುಟುಂಬಕ್ಕೆ ಕನಿಷ್ಠ ₹ 10 ಸಾವಿರ ತುರ್ತಾಗಿ ನೀಡಬೇಕು ಮತ್ತು ಕೊರೊ ಬಿಕ್ಕಟ್ಟು ಬಗೆಹರಿಯುವವರೆಗೆ ಉಚಿತವಾಗಿ ಆಹಾರ ಧಾನ್ಯಗಳ ಕಿಟ್‍ಗಳನ್ನು ನೀಡಿ ಸಂರಕ್ಷಿಸಬೇಕು. ನೇಕಾರರು ತಯಾರಿಸಿದ ಉತ್ಪನ್ನಗಳನ್ನು ಆಧರಿಸಿ ಅವುಗಳ ಮೇಲೆ ಸಾಲ ಸೌಲಭ್ಯವನ್ನು ತುರ್ತಾಗಿ ಕಲ್ಪಿಸಿ ಬಿಕ್ಕಟ್ಟು ಬಗೆಹರಿಸಬೇಕು. ವಿದ್ಯುತ್ ಶುಲ್ಕವನ್ನು ಪೂರ್ಣ ಪ್ರಮಾಣದಲ್ಲಿ ಮನ್ನಾ ಮಾಡಬೇಕು ಮತ್ತು ಛಿದ್ರಗೊಂಡಿರುವ ತಮ್ಮ ಬದುಕನ್ನು ಪುನರ್ ನಿರ್ಮಾಣ ಮಾಡಿಕೊಳ್ಳಲು ನೇಕಾರರಿಗೆ ಸಹಕಾರಿ ಮತ್ತು ಇನ್ನಿತರೆ ಬ್ಯಾಂಕುಗಳ ಮೂಲಕ ಸುಲಭವಾಗಿ ಸಾಲ ಸಿಗುವಂತೆ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

‘ಕಚ್ಚಾ ವಸ್ತುಗಳು ಸುಲಭ ದರದಲ್ಲಿ ಕೈಗೆಟುಕುವಂತೆ ಮಾಡಬೇಕು ಮತ್ತು ಜಿಎಸ್‌ಟಿ ಮುಂತಾದವುಗಳ ಬಾಕಿ ಮೊತ್ತದ ವಸೂಲಾತಿ ಸಂಪೂರ್ಣವಾಗಿ ಸಮಸ್ಯೆ ಬಗೆಹರಿಯುವವರೆಗೆ ಕೈಬಿಡಬೇಕು. ಈ ಎಲ್ಲ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ನೇಕಾರರ ಸಂಕಷ್ಟಗಳನ್ನು ಶೀಘ್ರವಾಗಿ ಪರಿಹರಿಸಲು ಸರ್ಕಾರ ಮುಂದಾಗಬೇಕು’ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT