ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರಕ್ಕೆ ಕಠಿಣ ಶಬ್ಧದಲ್ಲಿ ಪತ್ರ ಬರೆಯಿರಿ: ಸಿಎಂಗೆ ಸಿದ್ದರಾಮಯ್ಯ ಸಲಹೆ

ಹಿಂದಿ ಹೇರಿಕೆ: ಸಿಎಂ ಕುಮಾರಸ್ವಾಮಿಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸಲಹೆ
Last Updated 30 ಜೂನ್ 2019, 15:02 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಕೇಂದ್ರ ಸರ್ಕಾರ ರಾಷ್ಟ್ರೀಯ ಕರಡು ಭಾಷಾ ನೀತಿ ಮೂಲಕ ಹಿಂದಿ ಕಲಿಕೆ ಕಡ್ಡಾಯಗೊಳಿಸಲು ಹೊರಟಿದೆ. ಅದನ್ನು ನಾನು ವಿರೋಧಿಸಿ ಹಿಂದಿ ಬಲಾತ್ಕಾರವಾಗಿ ಹೇರುವ ಕ್ರಮ ಸರಿಯಲ್ಲ ಎಂದು ಹೇಳಿದ್ದೇನೆ. ರಾಜ್ಯ ಸರ್ಕಾರ ಕೂಡ ಆ ಬಗ್ಗೆ ಕಠಿಣ ಶಬ್ಧಗಳಿಂದ ಕೇಂದ್ರಕ್ಕೆ ಪತ್ರ ಬರೆಯಬೇಕು’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಭಾನುವಾರ ಇಲ್ಲಿ ಆಯೋಜಿಸಿದ್ದ ಬೆಳಗಾವಿ ವಿಭಾಗಮಟ್ಟದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದಅವರು, ‘ನ್ಯಾಯಾಲಯಗಳು ಕೂಡ ಭಾಷಾ ಮಾಧ್ಯಮದ ಪರ ಇಲ್ಲ, ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಕೊಡುವ ಸರ್ಕಾರದ ನಿರ್ಧಾರಕ್ಕೆ ಅಗತ್ಯ ಬೆಂಬಲ ಸಿಗಲಿಲ್ಲ. ಸುಪ್ರೀಂಕೋರ್ಟ್ ಕೂಡ ನಮ್ಮ ಪರವಾಗಿ ತೀರ್ಪು ಕೊಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಭಾಷಾ ಮಾಧ್ಯಮದ ಆಯ್ಕೆ ಪೋಷಕರಿಗೆ ಬಿಟ್ಟದ್ದು ಹೊರತು ಸರ್ಕಾರದ್ದಲ್ಲ ಎಂದು ನ್ಯಾಯಾಲಯ ಹೇಳಿತು. ಮೇಲ್ಮನವಿ ಸಲ್ಲಿಸಿದರೂ ಅದಕ್ಕೆ ಮನ್ನಣೆ ಸಿಗಲಿಲ್ಲ. ಇದನ್ನೇ ಮುಂದಿಟ್ಟುಕೊಂಡು ಪೋಷಕರು ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗೆ ಸೇರಿಸುತ್ತಿದ್ದಾರೆ. ಈ ಬೆಳವಣಿಗೆ ಸ್ವಾಗತಾರ್ಹವಲ್ಲ’ ಎಂದರು.

ಪ್ರಧಾನಿಯೂ ಸ್ಪಂದಿಸಲಿಲ್ಲ:‘ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆಯಿರಿ. ಸಂವಿಧಾನಕ್ಕೆ ತಿದ್ದುಪಡಿ ತರೋಣ’ ಎಂದು ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರಧಾನಿಗೆ ಪತ್ರ ಬರೆದಿದ್ದೆನು. ಅದಕ್ಕೆ ಸ್ಪಂದನೆಯೇ ಸಿಗಲಿಲ್ಲ. ಕನ್ನಡ ಭಾಷೆಯನ್ನು ಕನ್ನಡಿಗರಲ್ಲದೇ ಮತ್ತೆ ಯಾರು ಉಳಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಯಾವುದೇ ಭಾಷೆ ಕಲಿಯಬೇಡಿ ಎಂದು ಯಾರಿಗೂ ಹೇಳೊಲ್ಲ. ನಾನು ಯಾವುದೇ ಭಾಷೆಯ ವಿರೋಧಿಯೂ ಅಲ್ಲ. ಆದರೆ ಮಾತೃಭಾಷೆಯನ್ನು ಅನಾದಾರಣೆಯಿಂದ ನೋಡಬೇಡಿ’ ಎಂದು ಮಕ್ಕಳು ಹಾಗೂ ಪೋಷಕರಿಗೆ ಕಿವಿಮಾತು ಹೇಳಿದರು.

391 ವಿದ್ಯಾರ್ಥಿಗಳಿಗೆ ಸನ್ಮಾನ:ಬೆಳಗಾವಿ ವಿಭಾಗದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕಗಳಿಸಿದ 224 ಮಕ್ಕಳು ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕಪಡೆದ 167 ವಿದ್ಯಾರ್ಥಿಗಳನ್ನು ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸನ್ಮಾನಿಸಿ ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT