ಬುಧವಾರ, ಸೆಪ್ಟೆಂಬರ್ 18, 2019
28 °C

ನುಡಿದಂತೆ ನಡೆಯುತ್ತೀರೆಂದು ನಂಬಿದ್ದೇನೆ ಯಡಿಯೂರಪ್ಪನವರೇ: ಸಿದ್ದರಾಮಯ್ಯ ಟ್ವೀಟ್‌

Published:
Updated:

ಬೆಂಗಳೂರು: ‘ಅನ್ನಭಾಗ್ಯ’ ಕಾರ್ಯಕ್ರಮವೂ ಸೇರಿದಂತೆ ಹಿಂದಿನ ಸರ್ಕಾರ ಜಾರಿಗೆ ತಂದ ಜನಪ್ರಿಯ ಕಾರ್ಯಕ್ರಮಗಳನ್ನು ರದ್ದು ಮಾಡುವುದಿಲ್ಲ ಎಂಬ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ಸ್ಪಷ್ಟನೆಯನ್ನು ಸ್ವಾಗತಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನುಡಿದಂತೆ ನಡೆಯುವಿರಿ ಎಂದು ನಂಬಿದ್ದೇನೆ ಯಡಿಯೂರಪ್ಪನವರೇ ಎಂದು ಟ್ವೀಟ್‌ ಮಾಡಿದ್ದಾರೆ.

ರೈತರಿಗೆ ನೇರವಾಗಿ ಹಣ ನೀಡುವ ಕಿಸಾನ್‌ ಸಮ್ಮಾನ್‌ ಯೋಜನೆಗೆ ಅನುದಾನ ಹೊಂದಿಸಲು ಈ ಹಿಂದಿನ ಸರ್ಕಾರಗಳ ಯೋಜನೆಗಳನ್ನು ರದ್ದು ಮಾಡುವ ಅಥವಾ ಅನುದಾನ ಕಡಿತ ಮಾಡುವ ಪ್ರಸ್ತಾವವನ್ನು ಅಧಿಕಾರಿಗಳು ಸರ್ಕಾರದ ಮುಂದಿಟ್ಟಿದ್ದರು. ಇದಕ್ಕೆ ಸರ್ಕಾರವೂ ಸಮ್ಮತಿಸಿದೆ ಎಂಬ ವರದಿಗಳು ಶನಿವಾರ ಸದ್ದು ಮಾಡಿತ್ತು.

ಹಾಗೇನಾದರೂ, ಸರ್ಕಾರ ಯೋಜನೆಗಳಿಗೆ ಕತ್ತರಿ ಹಾಕಿದರೆ, ಅನುದಾನ ಮೊಟಕುಗೊಳಿಸಿದರೆ ಕಾಂಗ್ರೆಸ್‌ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿತ್ತು. ಇದೇ ಹಿನ್ನೆಲೆಯಲ್ಲಿ ಶನಿವಾರ ಟ್ವೀಟ್‌ ಮಾಡಿದ್ದ ಮುಖ್ಯಮಂತ್ರಿ, ‘ಜನಪ್ರಿಯ ಯೋಜನೆಗಳನ್ನು ರದ್ದು ಮಾಡುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಅನ್ನಾಭಾಗ್ಯ ಯೋಜನೆ ಮುಂದುವರಿಸಲು ಈಗಾಗಲೇ ಸಹಿ ಮಾಡಿದ್ದೇನೆ,’ ಎಂದು ಸ್ಪಷ್ಟಪಡಿಸಿದ್ದರು.

ಇದೇ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ, ನೀವು ನುಡಿದಂತೆ ನಡೆಯುತ್ತೀರಿ ಎಂದು ನಂಬಿದ್ದೇನೆ. ಧನ್ಯವಾದಗಳು,’ ಎಂದಿದ್ದಾರೆ.

ಇನ್ನಷ್ಟು...

ವಿವಿಧ ‘ಭಾಗ್ಯ’ಗಳಿಗೆ ಕತ್ತರಿ

‘ಜನಪ್ರಿಯ ಯೋಜನೆಗಳಿಗೆ ಕತ್ತರಿ ಇಲ್ಲ’

Post Comments (+)