ಶನಿವಾರ, ಜುಲೈ 31, 2021
26 °C

ಅವ್ಯವಹಾರ ನಡೆದಿಲ್ಲವೆಂದರೆ ದಾಖಲೆ ಕೊಡಿ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೊರೊನಾ ನಿಯಂತ್ರಣದ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ; ದಾಖಲೆಗಳಿವೆ ಎಂದು ಹೇಳಿದರಷ್ಟೆ ಸಾಲದು. ಅದನ್ನು ಬಿಡುಗಡೆ ಮಾಡಿ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಅವರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ‘ಮಾಹಿತಿ ಇದ್ದರೆ ಮುಚ್ಚಿಡುವುದು ಯಾಕೆ ಎಂದು ಸಚಿವರನ್ನು ಕೇಳಿ. ಮಾಹಿತಿ ಕೇಳಿದ ನನ್ನ ಪತ್ರಕ್ಕೆ ಉತ್ತರಿಸಲು ಹೇಳಿ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನೂ ಕೋರಿದ್ದಾರೆ.

‘ಕೊರೊನಾ ಪರೀಕ್ಷೆ ಹಾಗೂ ಸುರಕ್ಷತಾ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಒಬ್ಬ ಸಚಿವರು ಜೊತೆಯಲ್ಲಿ ಪ್ರವಾಸಕ್ಕೆ ಕರೆದಿದ್ದಾರೆ. ಇನ್ನೊಬ್ಬರು ಆಸ್ಪತ್ರೆಯ ಹೊಣೆ ಹೊರಲು ಹೇಳಿದ್ದಾರೆ. ಇಬ್ಬರಿಗೂ ಒಂದೇ ಉತ್ತರ. ದಯವಿಟ್ಟು ರಾಜೀನಾಮೆ ನೀಡಿ. ನಾವು ಪ್ರವಾಸವನ್ನೂ ಮಾಡುತ್ತೇವೆ. ಒಂದು ಆಸ್ಪತ್ರೆಯದ್ದಲ್ಲ, ಇಡೀ ರಾಜ್ಯದ ಹೊಣೆಯನ್ನೂ ಹೊರುತ್ತೇವೆ’ ಎಂದೂ  ಸಿದ್ದರಾಮಯ್ಯ ಕುಟುಕಿದ್ದಾರೆ.

ನಿಜಸ್ಥಿತಿಗೆ 15 ದಿನ ಕಾಯಬೇಕು: ‘ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುರಕ್ಷಿತವಾಗಿ ನಡೆದಿದೆ ಎಂಬ ಭಾವನೆ ಇನ್ನಷ್ಟು ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರಕ್ಕೆ ಪ್ರೇರಣೆ ಮತ್ತು ಅತಿಯಾದ ಆತ್ಮವಿಶ್ವಾಸ ನೀಡಿದಂತೆ ಕಾಣುತ್ತಿದೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಹೇಳಿರುವ ಸಿದ್ದರಾಮಯ್ಯ, ‘ಎಲ್ಲರೂ ಸುರಕ್ಷಿತವಾಗಿದ್ದಾರೆಂದು ನಾನೂ ಭಾವಿಸುತ್ತೇನೆ. ಆದರೆ, ಈ ಬಗ್ಗೆ ನಿಜ ಸ್ಥಿತಿ ಗೊತ್ತಾಗಲು ಇನ್ನೂ 15 ದಿನ ಕಾಯಬೇಕು’ ಎಂದಿದ್ದಾರೆ.

‘ರಾಜ್ಯ ಸರ್ಕಾರ ಜೂನ್ 15ರಿಂದ ಜುಲೈ 20ರವರೆಗಿನ ಕೋವಿಡ್‌ 19 ರೋಗಿಗಳ ಮಾಹಿತಿ ಸಂಗ್ರಹಿಸಬೇಕು. ಈ ರೋಗಿಗಳ ಪ್ರಾಥಮಿಕ ಸಂಪರ್ಕದಲ್ಲಿದ್ದ ಯಾರಾದರೂ ಎಸ್‌ಎಸ್ಎಲ್‌ಸಿ ಪರೀಕ್ಷೆ ಬರೆದಿದ್ದಾರೆಯೇ ಎಂದು ಪರಿಶೀಲಿಸಬೇಕು’ ಎಂದರು.

‘ಶ್ವೇತಪತ್ರ ಹೊರಡಿಸಲು ಸಿದ್ಧ’
ದಾವಣಗೆರೆ: ‘ಕೋವಿಡ್‌ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿರುವುದು ಕುಣಿಯಲು ಬಾರದವ ನೆಲ ಡೊಂಕು ಎಂಬಂತಿದೆ. ಉಪಕರಣಗಳ ಖರೀದಿ ಬಗ್ಗೆ ಶ್ವೇತಪತ್ರ ಹೊರಡಿಸಲು ನಾವು ಸಿದ್ಧರಿದ್ದೇವೆ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು. ಆಧಾರವಿಲ್ಲದೆ ಈ ರೀತಿ ಆರೋಪ ಮಾಡಬಾರದು. ಅವರಿಗೆ ಶಕ್ತಿ ಇದ್ದರೆ ತನಿಖೆ ನಡೆಸಲಿ. ನಾವು ಯಾವುದೇ ತನಿಖೆಎದುರಿಸಲೂ ಸಿದ್ಧ’ ಎಂದು ಶ್ರೀರಾಮುಲು ಅವರು ಶನಿವಾರ ಇಲ್ಲಿ ಸುದ್ದಿಗಾರರಿಗೆ
ಪ್ರತಿಕ್ರಿಯಿಸಿದರು.

‘ಮಾಹಿತಿ ಕೊಡಿಸುತ್ತೇನೆ’
‘ಕೊರೊನಾ ನಿಯಂತ್ರಿಸುವ ಸಲಕರಣೆಗಳ ಖರೀದಿಯ ಮಾಹಿತಿಯನ್ನು ಕೊಡುವ ಬಗ್ಗೆ ಮುಖ್ಯ ಕಾರ್ಯದರ್ಶಿ ಜತೆ ಮಾತನಾಡುತ್ತೇನೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಪ್ರತ್ಯುತ್ತರ ನೀಡಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್‌ಗೆ ಪ್ರತಿ ಟ್ವೀಟ್ ಮಾಡಿರುವ ಅವರು, ‘ಇಂದೇ ಮಾತನಾಡಿ ವಿವರ ಕೊಡಿಸುತ್ತೇನೆ’ ಎಂದಿದ್ದಾರೆ.

‘ಕೊರೊನಾ‌ ನಿಯಂತ್ರಣದ ಸಲಕರಣೆ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ, ದಾಖಲೆಗಳಿವೆ ಎಂದು ಹೇಳಿದರಷ್ಟೆ ಸಾಲದು. ಅದನ್ನು ಬಿಡುಗಡೆ‌ ಮಾಡಿ ಸುಧಾಕರ್‌’ ಎಂದು ಟ್ವೀಟ್‌ನಲ್ಲಿ ಕುಟುಕಿದ್ದ ಸಿದ್ದರಾಮಯ್ಯ, ‘ಮಾಹಿತಿ ಇದ್ದರೆ ಮುಚ್ಚಿಡುತ್ತಿರುವುದು ಯಾಕೆ’ ಎಂದು
ಪ್ರಶ್ನಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು