ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲೆ, ಸೂರ್ಯಕಾಂತಿಗೂ ಬೆಂಬಲ ಬೆಲೆಗೆ ಸಿದ್ದರಾಮಯ್ಯ ಆಗ್ರಹ

Last Updated 31 ಜನವರಿ 2020, 1:50 IST
ಅಕ್ಷರ ಗಾತ್ರ

ಬೆಂಗಳೂರು: ಕಡಲೆ, ಗೋಧಿ, ಸೂರ್ಯಕಾಂತಿ, ಹೆಸರು, ಜೋಳ, ಹತ್ತಿ, ಉದ್ದು, ಕುಸುಬೆ ಬೆಳೆಗಳಿಗೂ ಬೆಂಬಲ ಬೆಲೆ ಯೋಜನೆ ವಿಸ್ತರಿ
ಸುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ‘ಸಾಮಾನ್ಯವಾಗಿ ನವೆಂಬರ್‌ನಲ್ಲಿ ಫಸಲು ಕೊಯ್ಲಿಗೆ ಬರುತ್ತದೆ. ದಲ್ಲಾಳಿಗಳ ವಿಷವರ್ತುಲಕ್ಕೆ ಸಿಲುಕುವ ರೈತರು, ತಮ್ಮ ತುರ್ತು ಹಣದ ಅವಶ್ಯಕತೆಗಾಗಿ ಅಡ್ಡಾದಿಡ್ಡಿ ಬೆಲೆಗೆ ಬೆಳೆ ಮಾರಿಕೊಳ್ಳುತ್ತಾರೆ. ಇದನ್ನು ತಪ್ಪಿಸಬೇಕಾದರೆ ಡಿಸೆಂಬರ್ ತಿಂಗಳ ಹೊತ್ತಿಗೆ ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರಗಳನ್ನು ತೆರೆಯ
ಬೇಕು. ಜನವರಿ ಅಂತ್ಯದಲ್ಲಿ ಈ ಬಗ್ಗೆ ಯೋಚಿಸುವುದು ಸರಿಯಲ್ಲ’ ಎಂದು ಹೇಳಿದ್ದಾರೆ.

ಮುಂಗಾರು ಪ್ರವಾಹಕ್ಕೆ ಸಿಲುಕಿದ ರಾಜ್ಯದ 22 ಜಿಲ್ಲೆಗಳ ಜನರ ಬದುಕು ಛಿದ್ರಗೊಂಡಿದ್ದು, ರೈತರು ಬೆಳೆದಿದ್ದ ಬೆಳೆ ಸಂಪೂರ್ಣ ಹಾಳಾಗಿತ್ತು. ನಂತರ ಕಷ್ಟಪಟ್ಟು ಬೆಳೆದರೂ ಬೆಲೆ ಸಿಗದಾಗಿದೆ. ಡಾ.ಸ್ವಾಮಿನಾಥನ್ ವರದಿ ಪ್ರಕಾರ ಬೆಳೆಗೆ ಮಾಡಿದ ಖರ್ಚು ಕಳೆದು ಶೇ 50ರಷ್ಟು ಲಾಭಾಂಶವಾದರೂ ರೈತರಿಗೆ ಉಳಿಯಬೇಕು. ಆದರೆ ಕೇಂದ್ರ ಸರ್ಕಾರ ಈ ವರದಿ ಜಾರಿಗೆ ಮುಂದಾಗಿಲ್ಲ. ರಾಜ್ಯ ಸರ್ಕಾರ
ಸಹ ಜಾರಿ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ತಂದಿಲ್ಲ ಎಂದು ಟೀಕಿಸಿದ್ದಾರೆ.

ದೇಶದ ಆರ್ಥಿಕತೆ ಕುಸಿದಿರುವುದಕ್ಕೆ ಕೃಷಿ ನಿರ್ಲಕ್ಷ್ಯ ಮಾಡಿರುವುದು ಕಂಡುಬರುತ್ತದೆ. ಹಳ್ಳಿಗಾಡಿನ ಜನರಲ್ಲಿ ಕೊಳ್ಳುವ ಶಕ್ತಿ ಹೆಚ್ಚಾಗದೆ ಆರ್ಥಿಕತೆ ಸರಿಯಾಗುವುದಿಲ್ಲ. ಬಿತ್ತನೆ ಬೀಜ, ರಸಗೊಬ್ಬರ, ಔಷಧ ಕಂಪನಿಗಳು, ದಲ್ಲಾಳಿಗಳು, ಅಂತರ ರಾಷ್ಟ್ರೀಯ ಮಾರುಕಟ್ಟೆಗಳ ಹುನ್ನಾರಗಳು, ಆಡಳಿತ ಶಾಹಿಯ ನಿರ್ಲಕ್ಷ್ಯಕ್ಕೆ ರೈತರು ಸಿಲುಕಿ ನಲುಗಿದ್ದಾರೆ ಎಂದು ತಿಳಿಸಿದ್ದಾರೆ.

ತೊಗರಿ ನೋಂದಣಿ ಅವಧಿ ವಿಸ್ತರಣೆ

ಕಲಬುರ್ಗಿ: ಬೆಂಬಲ ಬೆಲೆಯಡಿ ತೊಗರಿ ಖರೀದಿಸಲು ಇದೇ 31ರವರೆಗೆ ನಿಗದಿ ಮಾಡಿದ್ದ ನೋಂದಣಿ ಅವಧಿಯನ್ನು ರಾಜ್ಯ ಸಹಕಾರ ಇಲಾಖೆ ಫೆಬ್ರುವರಿ 8ರವರೆಗೆ ವಿಸ್ತರಿಸಿದೆ.

ರಾಜ್ಯ ಕೃಷಿ ಮಾರಾಟ ಮಂಡಳಿ ಅಭಿವೃದ್ಧಿಪಡಿಸಿರುವ ‘ಫ್ರೂಟ್ಸ್‌’ ತಂತ್ರಾಂಶದಲ್ಲಿ ವಿವರ ಭರ್ತಿ ಮಾಡುವಾಗ ತಾಂತ್ರಿಕ ಸಮಸ್ಯೆ ಎದುರಾಗಿದ್ದವು. ಇದರಿಂದ ರೈತರು ಅನಿವಾರ್ಯವಾಗಿ ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳ ಬಳಿ ತೆರಳಿ ಪಹಣಿ ಪತ್ರಿಕೆಯಲ್ಲಿ ಬೆಳೆ ವಿವರ ಸರಿ ಮಾಡಿಸಿಕೊಳ್ಳಬೇಕಿತ್ತು. ಅಲ್ಲದೇ, ಗ್ರಾಮಗಳಲ್ಲಿ ಇಂಟರ್‌ನೆಟ್‌ ಸಮಸ್ಯೆಯಿಂದ ಎಲ್ಲ ರೈತರ ಬೆಳೆ ನೋಂದಣಿ ಆಗಿರಲಿಲ್ಲ ಎಂದು ವಿವಿಧ ರೈತ ಸಂಘಟನೆ ದೂರಿತ್ತು. ಹೀಗಾಗಿ, ನೋಂದಣಿಯನ್ನು ಒಂದು ವಾರ ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT