ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ವಿರುದ್ಧ ಬಂಡೆದ್ದ ಕಾಂಗ್ರೆಸ್ ದಂಡು

ವಿರೋಧ ಪಕ್ಷ ನಾಯಕ ಸ್ಥಾನ ತಪ್ಪುವ ಸಾಧ್ಯತೆ: ‘ಪ್ರಶ್ನಾತೀತ’ ನಾಯಕನ ವಿರುದ್ಧವೇ ಬಂಡಾಯ
Last Updated 28 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಸಿದ್ದರಾಮಯ್ಯ ವಿರುದ್ಧ ಒಳಗೊಳಗೆ ಕುದಿಯುತ್ತಿದ್ದ ಅಸಮಾಧಾನ ಈಗ ಕೆಂಡದಂತೆ ನಿಗಿನಿಗಿಸುತ್ತಿದೆ. ‘ನಾಯಕ’ನ ಪ್ರಭಾವಕ್ಕೆ ಅಂಜಿ ದಶಕಗಳಿಂದ ಮೌನಕ್ಕೆ ಶರಣಾಗಿದ್ದ ಹಿರೀಕರು ಸಿಡಿದೆದ್ದಿ
ದ್ದಾರೆ. ಈ ‘ಅವಕಾಶ’ ಬಿಟ್ಟರೆ ಮತ್ತೆಂದೂ ಸಿದ್ದರಾಮಯ್ಯ ಅವರನ್ನು ಹಿಮ್ಮೆಟ್ಟಿಸುವುದು ಸಾಧ್ಯವೇ ಇಲ್ಲ ಎಂಬ ನಿರ್ಣಯಕ್ಕೆ ಬಂದವರಂತೆ ಗರ್ಜಿಸಲಾರಂಭಿಸಿದ್ದಾರೆ.

ಅ. 10ರಿಂದ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದ್ದು, ಅದ ರೊಳಗೆ ವಿರೋಧ ಪಕ್ಷದ ನಾಯಕನ ಸ್ಥಾನ ಅಧಿಕೃತವಾಗಿ ಘೋಷಣೆಯಾ ಗಬೇಕಿದೆ. ನಾಯಕನ ಮೇಲೆ ವಿಶ್ವಾಸ ವಿಲ್ಲ ಎಂಬ ಕೂಗು ಮೊಳಗಿಸಿ, ಆ ಸ್ಥಾನ ತಪ್ಪಿಸುವ ತುರ್ತುಕ್ರಮದ ಜತೆಗೆ ಕಾಂಗ್ರೆಸ್‌ ನಾಯಕತ್ವವನ್ನು ಕೈಗೆ ತೆಗೆದುಕೊಳ್ಳುವುದು ಆ ಪಕ್ಷದ ಮೂಲನಿವಾಸಿಗರ ಮಹತ್ವಾಕಾಂಕ್ಷೆ.

2006ರಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದರು. 2008ರಲ್ಲಿಚುನಾವಣೆ ನಡೆದಾಗ ವಿರೋಧ ಪಕ್ಷ ನಾಯಕ ಸ್ಥಾನ ಮಲ್ಲಿಕಾರ್ಜುನ ಖರ್ಗೆ ಯವರ ಪಾಲಾಯಿತು. 2009ರಲ್ಲಿ ಖರ್ಗೆ ಸಂಸದರಾಗಿ ಆಯ್ಕೆಯಾದಾಗ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಯಾರನ್ನು ಕೂರಿಸಬೇಕು ಎಂಬ ಚರ್ಚೆ ಮುನ್ನೆಲೆಗೆ ಬಂದಿತ್ತು. ಆಗ, ತಮ್ಮದೇ ಆದ ಒತ್ತಡ ಹೇರಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಸಿದ್ದರಾಮಯ್ಯ ಕಷ್ಟಪಟ್ಟು ಗಳಿಸಿದರು. 2013ರಲ್ಲಿ ವಿಧಾನಸಭೆ ಚುನಾವಣೆಯ ಹೊತ್ತಿಗೆ ‘ಮುಖ್ಯಮಂತ್ರಿ’ಯಾಗುವ ಕನಸು ಕಂಡ ಅವರು, ಚುನಾವಣೆಗೆ ಮೊದಲೇ ಅದಕ್ಕೆ ಬೇಕಾದ ತಂತ್ರಗಾರಿಕೆ ಹೆಣೆದು, ತಮ್ಮನ್ನೇ ಆ ಸ್ಥಾನಕ್ಕೆ ಆಯ್ಕೆ ಮಾಡಲೇಬೇಕಾದ ಅನಿವಾರ್ಯತೆಯನ್ನು ಪಕ್ಷದ ನಾಯಕತ್ವದ ಮುಂದೆ ಸೃಷ್ಟಿಸಿದರು.

ಅಷ್ಟೊತ್ತಿಗೆ ಕಾಂಗ್ರೆಸ್ ಹೈಕಮಾಂಡ್‌ ನಲ್ಲಿ ಸಾಕಷ್ಟು ಬದಲಾವಣೆಯಾಗಿ, ಸೋನಿಯಾ ಗಾಂಧಿ ನೇಪಥ್ಯಕ್ಕೆ ಸರಿದು ರಾಹುಲ್ ಗಾಂಧಿ ಅವರ ನಿರ್ಣಯಕ್ಕೆ ಮನ್ನಣೆ ಬರಲು ಆರಂಭವಾಗಿತ್ತು. ಸಿದ್ದರಾಮಯ್ಯನವರ ಪ್ರಭಾವ, ಜನಪ್ರಿಯತೆ ಕಂಡಿದ್ದ ರಾಹುಲ್‌, ಸಹಜವಾಗಿಯೇ ಅವರ ಬೆನ್ನಿಗೆ ನಿಂತರು. ಅಲ್ಲಿಂದೀಚೆಗೆ ಪಕ್ಷದ ಎಲ್ಲ ಸ್ತರಗಳಲ್ಲೂ ತಮ್ಮದೇ ಹಿಡಿತವನ್ನು ಬಿಗಿಗೊಳಿಸುತ್ತಾ ಹೋದ ಸಿದ್ದರಾಮಯ್ಯ ಮೂಲ ಕಾಂಗ್ರೆಸಿಗರನ್ನು ಕಡೆಗಣಿಸತೊಡಗಿದರು. ಅದರಲ್ಲೂ ಸೋನಿಯಾ ಜತೆಗೆ ನಿಕಟ ಬಾಂಧವ್ಯ ಹೊಂದಿರುವ ಆಸ್ಕರ್‌ ಫರ್ನಾಂಡಿಸ್, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ, ಬಿ.ಕೆ. ಹರಿಪ್ರಸಾದ್, ಜಿ. ಪರಮೇಶ್ವರ ಅವರನ್ನು ಲೆಕ್ಕಕ್ಕೆ ತೆಗೆದು ಕೊಳ್ಳಲಿಲ್ಲ. ಸೋನಿಯಾ ಅವರನ್ನು ಒಪ್ಪಿ ಸಬೇಕಾದ ಸನ್ನಿವೇಶ ಸೃಷ್ಟಿಯಾದಾಗಲೆಲ್ಲ ತಮ್ಮ ಜತೆಗೆ ನಿಕಟವಾಗಿ ಗುರುತಿಸಿ ಕೊಂಡಿದ್ದ ಕೆ.ಜೆ. ಜಾರ್ಜ್ ಅವರನ್ನು ಮುಂದೆ ಬಿಟ್ಟು, ತಮ್ಮ ಹಾದಿಯನ್ನು ಸುಗಮಗೊಳಿಸಿಕೊಳ್ಳುತ್ತಿದ್ದರು. ಈ ‘ಪ್ರಭಾವಳಿ’ ಬಳಸಿಕೊಂಡು ತಮ್ಮ ಪ್ರಭಾವ ವಲಯವನ್ನು ವಿಸ್ತರಿಸಿಕೊಂಡರು. ಇದನ್ನು ಕಂಡ ಎಲ್ಲ ನಾಯಕರು ಸಿದ್ದರಾಮಯ್ಯ ಅವರ ಬಗ್ಗೆ ದೂರು ಹೇಳಲಾಗದ ಸ್ಥಿತಿಗೆ ತಲುಪಿಬಿಟ್ಟಿದ್ದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸಚಿವರಾಗಿದ್ದ ಆಸ್ಕರ್, ಖರ್ಗೆ, ಮೊಯಿಲಿ, ಕೆ.ಎಚ್. ಮುನಿಯಪ್ಪ ಅವರು ವಿಧಾನಸೌಧದಲ್ಲಿ ಆಯೋಜಿಸುತ್ತಿದ್ದ ಸಭೆಗೆ ಬಂದರೆ, ಅವರ ಉಪಸ್ಥಿತಿ ಪ್ರಸ್ತಾಪಿಸುವ ಔದಾರ್ಯವನ್ನೂ ತೋರುತ್ತಿರಲಿಲ್ಲ. ರಾಹುಲ್ ಜತೆಗಿನ ಸಿದ್ದರಾಮಯ್ಯ ಅವರ ಒಡನಾಟವನ್ನು ನೋಡಿದ್ದ ಹಿರೀಕರು ದೂರು ಹೇಳಲಾಗದೇ, ನೋವು ಸಹಿಸಿಕೊಂಡು ಸುಮ್ಮನೇ ಇದ್ದರು’ ಎಂಬುದನ್ನು ಹಿರಿಯ ನಾಯಕರೊಬ್ಬರು ನೆನಪಿಸಿಕೊಂಡರು.

‌2018ರ ವಿಧಾನಸಭೆ ಚುನಾವಣೆ ಯಲ್ಲಿ ಸಿದ್ದರಾಮಯ್ಯನವರೇ ಮೇಲುಗೈ ಸಾಧಿಸಿದ್ದರು. ಫಲಿತಾಂಶ ಮಾತ್ರ ನಿರೀಕ್ಷಿತ ಮಟ್ಟಕ್ಕೆ ಬರದೇ ಇದ್ದಾಗ ಹೈಕಮಾಂಡ್ ಕಂಗೆಟ್ಟಿತು. ಬೆಳೆಯುತ್ತಲೇ ಇರುವ ಮೋದಿ ಪ್ರಭಾವ ತಡೆಯಲು ಮುಂದಾದ ಹೈಕಮಾಂಡ್, ಜೆಡಿಎಸ್‌ಗೆ ಬೇಷರತ್ ಬೆಂಬಲಿಸುವ ನಿರ್ಣಯ ಕೈಗೊಂಡಿತು. ಆ ಹಂತದಲ್ಲಿ ಸಿದ್ದರಾಮಯ್ಯನವರ ವಿರೋಧ–ಆಕ್ಷೇಪ ವನ್ನು ಕೇಳಿಸಿಕೊಳ್ಳಲು ಹೈಕಮಾಂಡ್ ಸಿದ್ಧವಿರಲಿಲ್ಲ.

ಮೈತ್ರಿ ಸರ್ಕಾರ ಸುಗಮವಾಗಿ ನಡೆಯಬೇಕು, ಅದೇ ಹೊತ್ತಿಗೆ ಜೆಡಿಎಸ್‌ಗೆ ಒಂದಿಷ್ಟು ಮಟ್ಟಿಗೆ ಅಂಕುಶ ಹಾಕಬೇಕು ಎಂಬ ಕಾರಣಕ್ಕೆ ಸಿದ್ದರಾಮಯ್ಯನವರನ್ನು ಸಮನ್ವಯ ಸಮಿ ತಿಗೆ ಅಧ್ಯಕ್ಷರನ್ನಾಗಿ ಮಾಡಲಾಯಿತು. ‘ಮೈತ್ರಿ ಧರ್ಮ’ ಕಾಯ್ದು ಹಿರಿಯ ರಂತೆ ಮಾರ್ಗದರ್ಶನ ಮಾಡಬೇಕಾದ ಸಿದ್ದ ರಾಮಯ್ಯ, ಮೊದಲ ದಿನದಿಂದಲೇ ವಿರೋಧ ಪಕ್ಷದ ನಾಯಕರಂತೆ ಕೆಲಸ ಮಾಡತೊಡಗಿದ್ದು, ಯೋಜನೆಗಳ ಅನುಷ್ಠಾನಕ್ಕೆ ಅಡಿಗಡಿಗೂ ಅಡ್ಡಗಾಲು ಹಾಕತೊಡಗಿದ್ದನ್ನು ಹೈಕಮಾಂಡ್‌ ಸಹಿಸಿರಲಿಲ್ಲ. ಸಿದ್ದರಾಮಯ್ಯ ಬಿಟ್ಟರೆ ಪಕ್ಷ ಉಳಿಸಲು ಪರ್ಯಾಯ ನಾಯಕನನ್ನು ಕಾಣದ ಹೈಕಮಾಂಡ್ ಮೌನಕ್ಕೆ ಶರಣಾ ಗಿತ್ತು ಎಂಬುದು ಹಿರಿಯರ ಅಭಿಪ್ರಾಯ.

ಯಾವಾಗ ರಾಹುಲ್ ಗಾಂಧಿ ಹಿಂದಕ್ಕೆ ಸರಿದು ಸೋನಿಯಾ ಗಾಂಧಿ ಅವರಿಗೆ ಮತ್ತೆ ಅಧಿಕಾರ ಬಂತೋ ಆಗ ಹಿರಿಯರೆಲ್ಲ ಒಗ್ಗಟ್ಟಾಗಿ ‘ಪಕ್ಷ ಉಳಿಸುವ’ ಹೆಸರಿನಲ್ಲಿ ತಾವು ಉಳಿಯುವ ಹಾದಿ ಹುಡುಕಿದರು. ಹೀಗಾಗಿಯೇ, ಇತ್ತೀಚೆಗೆ ದೆಹಲಿಗೆ ಹೋಗಿದ್ದ ಸಿದ್ದರಾಮಯ್ಯ ಅವರಿಗೆ ಸೋನಿಯಾ ಭೇಟಿಗೆ ಅವಕಾಶವೇ ಸಿಗಲಿಲ್ಲ. ಅದಾಗಿ ಎರಡು ದಿನಕ್ಕೆ ಹೋದ ಜಿ. ಪರಮೇಶ್ವರ ಅವರಿಗೆ ಬಾಗಿಲು ತೆಗೆದ ಪಕ್ಷದ ಅಧಿನಾಯಕಿ, ರಾಜ್ಯ ಕಾಂಗ್ರೆಸ್‌ನ ಸ್ಥಿತಿಗತಿಯ ವರದಿ ಪಡೆದರು.

‘ಮೈತ್ರಿ ಸರ್ಕಾರದ ಪತನಕ್ಕೆ ಮುಹೂರ್ತ ಇಟ್ಟಿದ್ದೇ ಸಿದ್ದರಾಮಯ್ಯ’ ಎಂಬ ಅಹವಾಲನ್ನು ಕಾಂಗ್ರೆಸ್‌ನ ಹಿರಿಯ ನಾಯಕರು ಸೋನಿಯಾ ಗಮನಕ್ಕೆ ತಂದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ವತಂತ್ರ ನಿರ್ಧಾರ ಕೈಗೊಳ್ಳದೇ ಸಿದ್ದರಾಮಯ್ಯ ಹೇಳಿದಂತೆ ಕೇಳುತ್ತಾರೆ. ಅವರು ಹೇಳಿದ್ದೇ ಮುಂದೆಯೂ ನಡೆದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂದೂ ಮನವರಿಕೆ ಮಾಡಿಕೊಟ್ಟರು.

‘ಕೆಪಿಸಿಸಿ ಅಧ್ಯಕ್ಷ ಅಥವಾ ವಿರೋಧ ಪಕ್ಷ ನಾಯಕ ಸ್ಥಾನಗಳ ಪೈಕಿ ಒಂದನ್ನು ನಿಮ್ಮ ಬಣಕ್ಕೆ ಇಟ್ಟುಕೊಳ್ಳಿ. ಒಂದನ್ನು ಬಿಟ್ಟುಕೊಡಿ. ಆಯ್ಕೆ ನಿಮ್ಮದೇ’ ಎಂಬ ಸೂಚನೆಯನ್ನು ಹೈಕಮಾಂಡ್, ಸಿದ್ದರಾಮಯ್ಯಗೆ ನೀಡಿದೆ. ಎರಡನ್ನೂ ಉಳಿಸಿಕೊಳ್ಳುವ ಅಪೇಕ್ಷೆ ಸಿದ್ದರಾಮಯ್ಯ ಅವರದ್ದು. ಒಂದನ್ನು ಕಿತ್ತುಕೊಳ್ಳುವ ಹಟ ಅವರ ವಿರೋಧಿ ಬಣದ್ದಾಗಿದೆ. ಹೀಗಾಗಿ ಪಕ್ಷದ ಕಚ್ಚಾಟ ಬಯಲಿಗೆ ಬಂದಿದೆ’ ಎನ್ನುತ್ತಾರೆ ಹಿರಿಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT