ಬಜೆಟ್‌ , ಸಾಲ ಮನ್ನಾ ಕುರಿತ ಸಂಭಾಷಣೆ ತುಣುಕು ಬಹಿರಂಗ: ಸಿದ್ದರಾಮಯ್ಯ ಅಸಮಾಧಾನ

7
ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರ

ಬಜೆಟ್‌ , ಸಾಲ ಮನ್ನಾ ಕುರಿತ ಸಂಭಾಷಣೆ ತುಣುಕು ಬಹಿರಂಗ: ಸಿದ್ದರಾಮಯ್ಯ ಅಸಮಾಧಾನ

Published:
Updated:

ಮಂಗಳೂರು/ ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರದ ಸುಗಮ ನಡೆಗೆ ರಚನೆಗೊಂಡ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ, ತಮ್ಮ ಆಪ್ತರ ಜೊತೆ ಭಾನುವಾರ ಬೆಳಿಗ್ಗೆ ನಡೆಸಿದ ಮಾತುಕತೆಯ ವಿಡಿಯೊ ತುಣುಕು ಬಹಿರಂಗಗೊಂಡಿದ್ದು, ಕಾಂಗ್ರೆಸ್‌ ವಲಯದಲ್ಲಿ ಕಸಿವಿಸಿ ಉಂಟು ಮಾಡಿದೆ.

ಉಜಿರೆಯಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರು, ಶಾಸಕರಾದ ಬೈರತಿ ಬಸವರಾಜು, ಮುನಿರತ್ನ,ಎಸ್‌.ಟಿ. ಸೋಮಶೇಖರ್‌, ರಹೀಂ ಖಾನ್‌ ಹಾಗೂ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಜೊತೆ  ನಡೆಸಿದ ಸಂಭಾಷಣೆಯ ತುಣುಕುಗಳು ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಖಾಸಗಿ ವಾಹಿನಿಯೊಂದು ಪ್ರಸಾರ ಮಾಡಿದೆ.

ಹೊಸ ಬಜೆಟ್‌ ಮಂಡನೆ, ಸಂಪುಟ ವಿಸ್ತರಣೆ ವೇಳೆ ಉಂಟಾದ ಅತೃಪ್ತಿ ಮತ್ತು ರೈತರ ಸಾಲ ಮನ್ನಾಬಗ್ಗೆ ಸಿದ್ದರಾಮಯ್ಯ ತೀವ್ರ ಅಸಮಾಧಾನಗೊಂಡಿರುವುದು ಅವರ ಮಾತುಗಳಲ್ಲಿ ವ್ಯಕ್ತವಾಗಿದೆ. ಸರ್ಕಾರದ ನಡೆಯ ಬಗ್ಗೆಯೂ ಅವರು
ಅತೃಪ್ತಿ ಹೊಂದಿರುವುದು ಬಹಿರಂಗವಾಗಿದೆ.

ವಿಡಿಯೊದಲ್ಲಿ ಏನಿದೆ?: ಕೊಠಡಿಯಲ್ಲಿ ಕುಳಿತು ಮಾತುಕತೆ ನಡೆಸುತ್ತಿದ್ದಾಗ ಶಾಸಕರು ಹೊಸ ಬಜೆಟ್‌ನ ವಿಷಯ ಪ್ರಸ್ತಾಪಿಸಿದ್ದಾರೆ. ಆಗ ಮಾತನಾಡಿದ ಸಿದ್ದರಾಮಯ್ಯ, ‘ಏನ್‌ ಬಜೆಟ್‌ ಮಂಡನೆ ಮಾಡ್ತಾರೆ? ರಾಹುಲ್‌ ಗಾಂಧಿ ಹತ್ತಿರ ಹೋಗಿದ್ದಾರೆ. ಅಲ್ಲಿಂದ ಬಂದು ರಾಹುಲ್‌ ಗಾಂಧಿ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ ಅಂತಾ ಹೇಳ್ಕೊಂಡು ಓಡಾಡ್ತಾರೆ. ನಮ್ಮ ಪರಮೇಶ್ವರ ಕೂಡ ಹೊಸ ಸರ್ಕಾರದಲ್ಲಿ ಹೊಸ ಬಜೆಟ್‌ ಸ್ವಾಭಾವಿಕ ಅಂತಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಒಂದೇ ಪಕ್ಷ ಅಧಿಕಾರಕ್ಕೆ ಬಂದಿದ್ದರೆ ಮಾಡಲಿ. ಕಾಂಗ್ರೆಸ್‌ ಪಕ್ಷದ ಬೆಂಬಲದಿಂದ ಅವರು ಮುಖ್ಯಮಂತ್ರಿ ಆಗಿದ್ದಾರೆ. ಕಾಂಗ್ರೆಸ್‌ ಸರ್ಕಾರವೇ ಮಂಡಿಸಿದ ಬಜೆಟ್‌ ಇದೆ. ಅದನ್ನೇ ಮುಂದುವರಿಸಲಿ’ ಎಂದು ಸಿದ್ದರಾಮಯ್ಯ ಹೇಳುತ್ತಾರೆ.

‘ಇದು ಸಮ್ಮಿಶ್ರ ಸರ್ಕಾರ. ಮುಂದಿನ ವರ್ಷ ಅವರಿದ್ದರೆ ಬಜೆಟ್‌ ಮಾಡಿಕೊಳ್ಳಲಿ. ನಮ್ಮ ವಿರೋಧವೇನೂ ಇಲ್ಲ. ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಪಟ್ಟಿಯನ್ನೇ ಅಂತಿಮಗೊಳಿಸಿಲ್ಲ. ಈಗಾಗಲೇ ಅವರು ಬಜೆಟ್‌ಗೆ ತಯಾರಿ ಮಾಡಿಕೊಳ್ಳುತ್ತಿ
ದ್ದಾರೆ’ ಎಂದು ಅವರು ಅತೃಪ್ತಿ ಹೊರಹಾಕಿದ್ದಾರೆ.

ಶಾಸಕರ ಸಭೆಗೆ ವಿರೋಧ: ‘ಎಂ.ಬಿ.ಪಾಟೀಲ ಮತ್ತು ಡಾ.ಕೆ.ಸುಧಾಕರ್‌ ಮತ್ತೆ ಸಭೆ ಕರೆದಿದ್ದಾರೆ ಸಾರ್‌’ ಎಂದು ಶಾಸಕರೊಬ್ಬರು ಹೇಳುತ್ತಾರೆ. ‘ಯಾಕಂತೆ ಮೀಟಿಂಗ್‌? ಏನ್‌ ಹೇಳಿದ್ರು ಮೀಟಿಂಗ್‌ನಲ್ಲಿ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಸಭೆ ಮಾಡಿದ್ರೆ ಮಂತ್ರಿಗಿರಿ ಸಿಗುತ್ತಾ? ಸಿಗೋದು ತಪ್ಪಿಹೋಗುತ್ತೆ’ ಎಂದು ಹೇಳುವ ಸಿದ್ದರಾಮಯ್ಯ, ‘ಅದು ರಾಹುಲ್‌ ಗಾಂಧಿ ಒಪ್ಪಿಗೆ ನೀಡಿದ ಪಟ್ಟಿ. ಸಭೆ ನಡೆಸಿದರೆ ರಾಹುಲ್‌ ಗಾಂಧಿ ವಿರುದ್ಧ ಹೋದಂತೆ ಆಗುವುದಿಲ್ಲವೇ? ರಾಹುಲ್‌ ಗಾಂಧಿ ಕಾಂಗ್ರೆಸ್‌ ಸರ್ವೋಚ್ಚ ನಾಯಕ. ಅತೃಪ್ತಿ ಬೇರೆ, ಸಭೆ ನಡೆಸೋದು ಬೇರೆ. ಅತೃಪ್ತಿ ವ್ಯಕ್ತಪಡಿಸುವುದಕ್ಕೆ ಬೇರೆ ಮಾರ್ಗವಿದೆ’ ಎಂದು ಸ್ವಪಕ್ಷೀಯರ ವಿರುದ್ಧವೇ ಗರಂ ಆಗಿದ್ದಾರೆ.

ಸಾಲ ಮನ್ನಾಕ್ಕೆ ತಗಾದೆ: ‘ರೈತರ ಸಾಲ ಮನ್ನಾ ಮಾಡುವ ಬದಲಿಗೆ ಎಲ್ಲ ರೈತರಿಗೂ ಅನುಕೂಲ ಆಗುವಂತಹ ಯೋಜನೆ ಮಾಡಲಿ. ಒಣ ಬೇಸಾಯ ಮಾಡುವವರಿಗೆ ಪ್ರೋತ್ಸಾಹಧನ ನೀಡುವ ಹಿಂದಿನ ಸರ್ಕಾರದ ಯೋಜನೆಯನ್ನು ಮುಂದುವರಿ
ಸುವುದು ಉತ್ತಮ’ ಎಂದಿದ್ದಾರೆ.

‘ಯಾರಾದರೂ ಸತ್ತರೆ ಜನರು ಅದನ್ನು ರೈತರ ಆತ್ಮಹತ್ಯೆ ಎಂದು ಬಿಂಬಿಸುತ್ತಾರೆ. ನಾವು ಅದರ ವಿರುದ್ಧ ಮಾತಾಡುವ ಹಾಗಿಲ್ಲ’ ಎಂದು ಸೋಮಶೇಖರ್‌ ಹೇಳುತ್ತಾರೆ. ‘ಆತ್ಮಹತ್ಯೆ ಅಂತ ಹೇಳಿ ಎಂದು ಜನ ನಿಮಗೆ ಹೇಳ್ತಾರೆ ಅಲ್ವಾ’ ಎಂದು ಸಿದ್ದರಾಮಯ್ಯ ಕೇಳುತ್ತಾರೆ.

‘ನಾನು ಹಳ್ಳಿಯಿಂದ ಬಂದವನು. ನಮ್ಮೂರಲ್ಲಿ ಸಾಲ ಮಾಡಿ ಸತ್ತವರನ್ನು ಒಬ್ಬರನ್ನೂ ನೋಡಿಲ್ಲ’ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ‘ಹೌದು ಈ ಸಾಲ ಮನ್ನಾ ಅನ್ನೋದು ದೊಡ್ಡ ದೋಖಾ’ ಎಂದು ಸೋಮಶೇಖರ್‌ ಪ್ರತಿಕ್ರಿಯಿಸಿರುವುದು ವಿಡಿಯೊದಲ್ಲಿದೆ.

ಗೌಡರ ಸ್ಪರ್ಧೆ ಬಗ್ಗೆ ಪ್ರಶ್ನೆ: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಹಾಸನ ಲೋಕಸಭಾ ಕ್ಷೇತ್ರವನ್ನು ಬಿಟ್ಟು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಹೊರಟಿರುವ ಸುದ್ದಿಯ ಬಗ್ಗೆಯೂ ಸಿದ್ದರಾಮಯ್ಯ ಶಾಸಕರನ್ನು ಪ್ರಶ್ನಿಸಿದ್ದಾರೆ. ‘ಏನೋ ಎಲ್ಲಾನೂ ಆಕ್ರಮಿಸಿಕೊಳ್ಳುತ್ತೇವೆ ಅಂತಾ ಹೊರಟಿದ್ದಾರೆ. ನೋಡೋಣ ಬಿಡು’ ಎಂದು ಹೇಳಿದ್ದಾರೆ.

ಸಂಪುಟ ದರ್ಜೆ ಸ್ಥಾನ?

ಸಿದ್ದರಾಮಯ್ಯ ಅವರಿಗೆ ಸಂಪುಟ ದರ್ಜೆ ಸ್ಥಾನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸೋಮವಾರ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಭಾನುವಾರ ಮಾತನಾಡಿದ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ‘ಸಮನ್ವಯ ಸಮಿತಿ ಅಧ್ಯಕ್ಷರಿಗೆ ದೆಹಲಿಮಟ್ಟದಲ್ಲಿ ಸಂಪುಟ ದರ್ಜೆ ಸ್ಥಾನ ನೀಡಿದ ನಿದರ್ಶನವಿದೆ. ಹೀಗಾಗಿ, ಸಿದ್ದರಾಮಯ್ಯ ಅವರಿಗೂ ಅದೇ ರೀತಿಯ ಸ್ಥಾನ ನೀಡುವ ಚಿಂತನೆ ಇದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ನೇಮಕ ಕುರಿತು ಮಾತನಾಡಿದ ಅವರು, ‘ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಲಾಗುವುದು. ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ವಹಿಸಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಮತ್ತು ನಾನು ಚರ್ಚೆ ನಡೆಸುತ್ತಿದ್ದೇವೆ’ ಎಂದರು.

ನಿಗಮ ಮಂಡಳಿ, ಸಚಿವರ ಪಟ್ಟಿ ಸಿದ್ಧ‌

ಬಜೆಟ್ ಮಂಡನೆಗೆ (ಜುಲೈ 5) ಮೊದಲೇ ಸಂಪುಟ ವಿಸ್ತರಣೆ ಮತ್ತು 20 ನಿಗಮ– ಮಂಡಳಿಗಳಿಗೆ ನೇಮಕ ಮಾಡಬೇಕೆಂಬ ಪಕ್ಷದ ವರಿಷ್ಠರ ಸೂಚನೆ ಪಾಲಿಸಲು ರಾಜ್ಯ ಕಾಂಗ್ರೆಸ್‌ ನಾಯಕರು ಕಸರತ್ತು ನಡೆಸುತ್ತಿದ್ದಾರೆ.

ಪಕ್ಷದಿಂದ ಸಚಿವ ಸ್ಥಾನಕ್ಕೆ ಐದು ಹೆಸರು ಅಂತಿಮಗೊಂಡಿದ್ದು, 20 ನಿಗಮ ಮಂಡಳಿಗೂ ಶಾಸಕರನ್ನು ಆಯ್ಕೆ ಮಾಡಲಾಗಿದೆ. ಈ ಪಟ್ಟಿಯೊಂದಿಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರು  ಸಿದ್ದರಾಮಯ್ಯ ಜತೆ ಚರ್ಚೆ ನಡೆಸಲು ತೆರಳಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಮೂವರು ಹಿರಿಯರು ಮತ್ತು ಇಬ್ಬರು ಹೊಸಬರಿಗೆ ಮಂತ್ರಿ ಸ್ಥಾನ, ಉಳಿದ ಅತೃಪ್ತರಿಗೆ ನಿಗಮ ಮಂಡಳಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ನೀಡಲಾಗುತ್ತದೆ. ಎರಡು ವರ್ಷಗಳ ಬಳಿಕ ಸಚಿವ ಸಂಪುಟ ಪುನರ್‌ರಚನೆ ನಡೆಯಲಿದ್ದು, ಆ ಸಂದರ್ಭದಲ್ಲಿ ಅವಕಾಶ ನೀಡುವ ಭರವಸೆಯನ್ನು ಕೆಲವು ಶಾಶಕರಿಗೆ ನೀಡಲಾಗಿದೆ.

 

ಬರಹ ಇಷ್ಟವಾಯಿತೆ?

 • 39

  Happy
 • 9

  Amused
 • 3

  Sad
 • 1

  Frustrated
 • 4

  Angry

Comments:

0 comments

Write the first review for this !