ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾರ್ಥಕ್ಕಾಗಿ ಕುರುಬ ನಾಯಕರ ಮುಗಿಸಿರುವ ಸಿದ್ದರಾಮಯ್ಯ: ಈಶ್ವರಪ್ಪ ಆರೋಪ

ಈಶ್ವರಪ್ಪ ಆರೋಪ
Last Updated 26 ನವೆಂಬರ್ 2019, 10:43 IST
ಅಕ್ಷರ ಗಾತ್ರ

ಹೊಸಪೇಟೆ: ‘ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ಅವರ ಸ್ವಾರ್ಥಕ್ಕಾಗಿ ಅನೇಕ ಕುರುಬ ನಾಯಕರನ್ನು ವ್ಯವಸ್ಥಿತವಾಗಿ ಮುಗಿಸಿದ್ದಾರೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆ ಸಚಿವ ಕೆ.ಎಸ್‌.ಈಶ್ವರಪ್ಪ ಆರೋಪ ಮಾಡಿದರು.

ವಿಜಯನಗರ ಕ್ಷೇತ್ರದ ಉಪಚುನಾವಣೆ ನಿಮಿತ್ತ ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಹೋದಲ್ಲಿ ಬಂದಲ್ಲಿ ಸಿದ್ದರಾಮಯ್ಯನವರು ಅಹಿಂದ ಮಂತ್ರ ಜಪಿಸುತ್ತಾರೆ. ಆದರೆ, ಇಡೀ ರಾಜ್ಯದಲ್ಲಿ ಕುರುಬ ನಾಯಕರನ್ನು ತುಳಿದರು. ಅವರು ಯಾರಿಗೆಲ್ಲ ಮೋಸ ಮಾಡಿದ್ದಾರೆ ಎನ್ನುವುದು ಕುರುಬರಿಗೆ ಗೊತ್ತಿದೆ. ಅವರೇನೂ ದಡ್ಡರಲ್ಲ’ ಎಂದು ಹೇಳಿದರು.

‘ಅವರನ್ನು ಕಾಂಗ್ರೆಸ್‌ಗೆ ಕರೆತಂದವರೇ ಎಚ್‌. ವಿಶ್ವನಾಥ್‌. ಆದರೆ, ಅವರಿಗೆ ತೊಂದರೆ ಕೊಟ್ಟು ಪಕ್ಷ ಬಿಡುವಂತೆ ಮಾಡಿದರು. ಅನರ್ಹ ಶಾಸಕ ಶಂಕರ್‌ ಅವರನ್ನು ಕೋರ್ಟಿಗೆ ಅಲೆಯುವಂತೆ ಮಾಡಿದರು. ಅನರ್ಹ ಶಾಸಕರಾದ ಬೈರತಿ ಬಸವರಾಜ, ಎಂ.ಟಿ.ಬಿ. ನಾಗರಾಜ್‌ ಅವರನ್ನು ಬಳಸಿಕೊಂಡು ಅವರಿಗೂ ಹಾಗೆಯೇ ಮಾಡಿದರು. ಎಲ್ಲಾ ಕುರುಬರನ್ನು ತುಳಿದು ನಾನೇ ಆ ಸಮುದಾಯದ ನಿಜವಾದ ನಾಯಕನೆಂದು ಬಿಂಬಿಸಿಕೊಳ್ಳಲು ಸಿದ್ದರಾಮಯ್ಯನವರು ಹೊರಟಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

‘ಸಿದ್ದರಾಮಯ್ಯನವರ ಸರ್ವಾಧಿಕಾರ ಧೋರಣೆಯಿಂದ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸೃಷ್ಟಿಯಾಗಿದೆ. ಅವರಿಗೆ ಅವರ ಪಕ್ಷದಲ್ಲಿ ಯಾವ ಮುಖಂಡರ ಬೆಂಬಲವೂ ಸಿಗುತ್ತಿಲ್ಲ. ಒಬ್ಬಂಟಿಯಾಗಿ ಪ್ರಚಾರ ಕೈಗೊಂಡಿದ್ದಾರೆ. ಚುನಾವಣೆ ನಂತರ ಬಿಜೆಪಿ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಿರುವ ಅವರಿಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಉಳಿಯುತ್ತದೆಯೋ ಇಲ್ಲವೋ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT