ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿತಕಾಯುವ ಸಿದ್ಧಸೂತ್ರದ ಸಿಕ್ಕು

Last Updated 7 ಮಾರ್ಚ್ 2019, 6:57 IST
ಅಕ್ಷರ ಗಾತ್ರ

ಇಂದು ನಗರದ ಹೆಣ್ಣುಮಕ್ಕಳ ದಿನಚರಿ ಬದಲಾಗಿದೆ. ಅವರ ಆಯ್ಕೆಗಳನ್ನು ಪರಿಗಣಿಸಲೇಬೇಕಿದೆ. ಪೋಷಕರು ತಮ್ಮ ‘ಹದ್ದುಬಸ್ತು’ ಭಾಷೆಯನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಮಕ್ಕಳು ಅವರ ಟೈಂ ಟೇಬಲ್ ಅವರೇ ನಿರ್ಧರಿಸಿಸಿಕೊಳ್ಳಲು ತೊಡಗಿದ್ದಾರೆ. ಈಗ ಸ್ಕೂಲು, ಟ್ಯೂಷನ್ನು, ಹಾಡು, ಡಾನ್ಸು, ಅವರಿಗೆಂದೇ ಫ್ಯಾಷನ್ ಪರೇಡುಗಳು, ಸ್ವಯಂರಕ್ಷಣೆಗಾಗಿ ಕರಾಟೆ–ಕುಂಗ್‌ಫೂಗಳು, ಬಾಸ್ಕೆಟ್ ಬಾಲ್, ಕ್ರಿಕೆಟ್ ಇತ್ಯಾದಿ ಕ್ರೀಡೆಗಳು ಹೀಗೆ ಆಸಕ್ತಿಗೆ ಪೂರಕವಾದ ತರಬೇತಿಗಳು ಕೂಗಳತೆಯಲ್ಲಿ ಲಭ್ಯವಿದೆ. ಮಕ್ಕಳ ಕೈಗೆ ಮೊಬೈಲು, ಟ್ಯಾಬುಗಳು ಬಂದಿವೆ. ಅವರಿಗೆ ಬೇಕಾದನ್ನು ಆನ್‌ಲೈನಿನಲ್ಲಿ ಅವರೇ ಎಕ್ಸ್‌ಪ್ಲೋರ್‌ ಮಾಡಿಕೊಳ್ಳುವಷ್ಟು ಸ್ಮಾರ್ಟ್ ಆಗಿದ್ದಾರೆ. ಪೋಷಕರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದಾರೆ. ಅರ್ಥಾತ್ ಅವರಲ್ಲಿ ಸ್ನೇಹಿತರನ್ನು ನೋಡಲು ಬಯಸುತ್ತಿದ್ದಾರೆ. ಹಾಗೇ, ಟ್ರೆಂಡಿನ ಹಿಂದೆಯೂ ಓಡುತ್ತಿದ್ದಾರೆ.

ಮಕ್ಕಳಿಗೆ, ಅದರಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳಿಗೆ ಈಗ ಸದ್ಯದ ತುರ್ತಿರುವುದು ತಮ್ಮ ‘ಬಾಡಿ ಇಮೇಜ್’ ಇಶ್ಯೂಗಳನ್ನು ಮೀರಿಕೊಳ್ಳುವ ಕಲೆ. ಈಗ್ಗೆ ಹಲದಿನಗಳ ಹಿಂದೆ ಚೆನ್ನಾಗಿ ತಿಂದುಂಡು ಆಡುತ್ತಿದ್ದ ಹೆಣ್ಣುಮಗುವೊಂದು ಏಕಾಏಕಿ ಊಟ ಕಡಿಮೆ ಮಾಡತೊಡಗಿತು. ಏನೇ ಬಲವಂತಪಡಿಸಿದರೂ ಉಣ್ಣುತ್ತಿರಲಿಲ್ಲ. ಡಾಕ್ಟರ್‌ ಕಂಡು ಪ್ರಯೋಜನವಾಗಲಿಲ್ಲ. ಒಂದು ದಿನ ಆ ಮಗು ಟೀವಿ ನೋಡುತ್ತಾ ಬಾಯಿಬಿಟ್ಟಿತು. ‘ನಾನೂ ಅವಳಂತೆ ಆಗಬೇಕು, ಅವಳ ಹಾಗೆ ಡ್ರೆಸ್, ಹೈಹೀಲ್ಡ್ ಹಾಕಬೇಕು. ಅದೇ ನನ್ನ ಏಮ್.’

ಹೌದು, ಕೆಲ ವರ್ಷದಿಂದೀಚೆಗೆ ಬಾರ್ಬಿ ಅನ್ನುವ ಒಂದು ಸಪೂರ ದೇಹದ ಯುವತಿಯ ಗೊಂಬೆಯೊಂದು ಅವರ ಬದುಕಿಗೆ ಕಾಲಿಟ್ಟಿತು ನೋಡಿ... ಅನೇಕ ಮನೆಗಳ ಟೀವಿ, ಇಂಟರ್‌ನೆಟ್‌ ಅದರದೇ ಪಾರಮ್ಯ. ಅದಕ್ಕೊಂದು ಬಾಚಣಿಕೆ, ಹತ್ತಾರು ಡೆಸ್ಸುಗಳು, ಲೆಕ್ಕವಿಲ್ಲದಷ್ಟು ಚಪ್ಪಲಿಗಳು, ಲಿಪ್‌ಸ್ಟಿಕ್‌, ನೇಲ್ ಪಾಲೀಶ್, ವಾರ್ಡ್ ರೋಬ್, ಟಾಯ್ಲೆಟ್.. ಹೀಗೇ ಆ ಬಾರ್ಬಿಯದೇ ಬೇರೆ ಜಗತ್ತು. ಅವಳನ್ನು ಸಿಂಗಾರ ಮಾಡುತ್ತಾ ಅವಳ ಪರಿಚಾರಿಕೆಯಲ್ಲಿ ತೊಡಗುವುದೇ ಆ ಮಕ್ಕಳ ದಿನಚರಿ.

ಇಂಥ ಗೊಂಬೆಗಳು ಕೇವಲ ಮಕ್ಕಳ ಮನರಂಜನೆಯ ಆಟಿಕೆಗಳಾಗದೆ, ತಾವು ದಪ್ಪ–ಸಣ್ಣ, ಉದ್ದ–ಗಿಡ್ಡ, ಬಿಳಿ–ಕಪ್ಪು, ಹಲ್ಲುಬ್ಬು, ಮೆಳ್ಳಗಣ್ಣು, ಸೋಡಾಬುಡ್ಡಿ ಇತ್ಯಾದಿ ಸೌಂದರ್ಯದ ಶ್ರೇಷ್ಠ–ಕನಿಷ್ಠ ಮೌಲ್ಯಗಳನ್ನು ಬಿತ್ತುತ್ತವೆ. ಮೇಲರಿಮೆಯು ಅವರ ಮತ್ತು ಸುತ್ತಲಿನ ಜನರ ಮೇಲೆ ಅಪಾಯಕಾರಿ ಪರಿಣಾಮವನ್ನು ಬೀರಬಹುದು. ಹಾಗೆ ಅನೇಕ ಮಕ್ಕಳು ಕೀಳರಿಮೆಯಲ್ಲೂ ಬಳಲಿ ಅಂತರ್ಮುಖಿಗಳಾಗಬಹುದು. ಇದು ಭವಿಷ್ಯದಲ್ಲಿ ಖಿನ್ನತೆಗೂ ಕಾರಣವಾಗಬಹುದು. ಇದು ಕೇವಲ ಬಾರ್ಬಿಯ ಪರಿಣಾಮಗಳಲ್ಲ. ಅನೇಕ ಕಿರಿಹಿರಿತೆರೆಯ ಸಿನಿಮಾ, ರಿಯಾಲಿಟೀ ಷೋಗಳ ಮರ್ಮ. ಅವುಗಳ ಲಾಭ ಅದನ್ನು ಪ್ರಾಯೋಜಿಸುವ ಜಾಹೀರಾತು ಕಂಪನಿಗಳ ಬೊಕ್ಕಸಕ್ಕೆ. ಇವೇ ಮಕ್ಕಳ ವ್ಯಕ್ತಿತ್ವ ಮತ್ತು ಪ್ರತಿಭೆಯ ಅಳತೆಗೋಲುಗಳಾಗದಂತೆ ಎಚ್ಚರವಹಿಸಬೇಕಿದೆ.

ಇವು ಮಾರುಕಟ್ಟೆಯ ಮಾತಾದರೆ, ಇನ್ನು ನಮ್ಮ ಸಾಮಾಜಿಕ ಪರಿಸ್ಥಿತಿಯಲ್ಲಿ ನಮ್ಮ ಮನೆಯ ಹೆಣ್ಣುಮಕ್ಕಳು ಎಷ್ಟು ಸುರಕ್ಷಿತರು ಅನ್ನುವ ಪ್ರಶ್ನೆ ಕಾಡುತ್ತವೆ. ಪುಸ್ತಕೋದ್ಯಮಿಯೊಬ್ಬರು ಇತ್ತೀಚೆಗೆ ಮಗಳನ್ನು ಶಾಲೆಗೆ ಬಿಡಲು ಹೊರಟವರು ಅರ್ಧದಾರಿಯಲ್ಲಿ ಪರ್ಸ್ ಮರೆತದ್ದನ್ನು ನೆನಪಿಸಿಕೊಂಡು ಅದೇ ಆಟೋದಲ್ಲಿ ಮನೆಗೆ ಮರಳಿದಾಗ ‘ಮಗುವನ್ನು ಅರೆಗಳಿಗೆ ಆಟೋದಲ್ಲೇ ಬಿಟ್ಟು ಮನೆಯೊಳಗೆ ಹೋಗಿ ಪರ್ಸ್ ತರಲು ಅಂಜಿಕೊಳ್ಳುವಂತಾಯಿತು’ ಎಂದು ಬರೆದಿದ್ದರು. ಅವರ ಆತಂಕ ಅತ್ಯಂತ ಸಹಜವಾದುದು. ಇದು ಬಹುತೇಕ ಎಲ್ಲ ಹೆಣ್ಣುಮಕ್ಕಳ ಪೋಷಕರ ಚಿಂತೆಯೇ. ಎಲ್ಲರೂ ಕ್ರೂರಿಗಳು, ಹೆಣ್ಣುಬಾಕರೇ ಇರುತ್ತಾರೆಂದು ಹೇಳಲು ಬರುವುದಿಲ್ಲವಾದರೂ, ಅವರನ್ನು ಗುರುತಿಸುವುದು, ವಿಂಗಡಿಸುವುದು ಹೇಗೆ ಎಂಬುದು ಬಗೆಹರಿಸಲಾಗದ ಪ್ರಶ್ನೆ.

ಮುಂಚೆಲ್ಲಾ ಕೂಡುಕುಟುಂಬದಲ್ಲಿ ಇರುತ್ತಿದ್ದ ಮಕ್ಕಳಿಗೆ ಕುಟುಂಬದಲ್ಲೇ ಯಾರಾದರೊಬ್ಬರು ಒಡನಾಡಿಗಳಾಗಿ ಸಿಗುತ್ತಿದ್ದರು. ಈಗ ಮಕ್ಕಳನ್ನು ಬಾಗಿಲಿನಿಂದ ಆಚೆ ಬಿಡಲು ಅಂಜುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರಾದರೂ ಮಗಳನ್ನು ಕೆನ್ನೆಮುಟ್ಟಿ ಮುದ್ದಾಡಿ ಮಾತನಾಡಿಸುವಾಗ ಒಳಗೊಂದು ಅನುಮಾನ ಜಾಗೃತವಾಗುತ್ತದೆ. ಅವರ ಜೊತೆ ನಾವು ಸದಾಕಾಲ ಇರಲಾಗದ ನಮ್ಮ ಧಾವಂತದ ಓಟವೂ ಹಾಗೂ ಮಕ್ಕಳು ಬಯಸುತ್ತಿರುವ ಸ್ವತಂತ್ರ ಚಲನವಲನ ಮತ್ತು ಆಲೋಚನೆಯನ್ನು ಉತ್ತೇಜಿಸಲು ಸ್ವಯಂರಕ್ಷಣೆಯ ಕೌಶಲ್ಯಗಳನ್ನು ಕಲಿಸಿಕೊಡಬೇಕಾದ ಅನಿವಾರ್ಯತೆ ಇದೆ.

ಹೀಗೆ ಸಾರ್ವಕಾಲಿಕವಾದ ಹೆಣ್ಣುಮಕ್ಕಳನ್ನು ಬೆಳೆಸುವ ಪ್ರಶ್ನೆಯನ್ನು ಕಾಲದಿಂದ ಕಾಲಕ್ಕೆ ಪೋಷಕರು ಪರಿಷ್ಕರಿಸುತ್ತಾ, ಉತ್ತರ ಹುಡುಕುತ್ತಾ ಸಾಗುತ್ತಲಿದ್ದಾರೆ. ಆದರೂ ಮಕ್ಕಳ ಹಿತಕಾಯುವ ಸಿದ್ಧಸೂತ್ರವೆಂಬುದು ಬಿಡಿಸಲಾಗದ ಸಿಕ್ಕು.

ದೀಪಾ ಗಿರೀಶ್ , ಲೇಖಕಿ ಕವಯಿತ್ರಿ, ಸಾಮಾಜಿಕ ಕಾರ್ಯಕರ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT