99 ವರ್ಷಗಳಿಂದ ನೆಲಮುಟ್ಟದ ಏಕತಾರಿ

ಸೋಮವಾರ, ಮಾರ್ಚ್ 25, 2019
24 °C
24 ಗಂಟೆಯೂ ಸಾಧುಗಳಿಂದ ‘ಓಂ ನಮಃ ಶಿವಾಯ’ ಪಠಣ

99 ವರ್ಷಗಳಿಂದ ನೆಲಮುಟ್ಟದ ಏಕತಾರಿ

Published:
Updated:
Prajavani

ಹುಬ್ಬಳ್ಳಿ: ಇಲ್ಲಿನ ಸಿದ್ಧಾರೂಢ ಮಠದ ಆವರಣದಲ್ಲಿ ಕಾಲಿಡುತ್ತಿದ್ದಂತೆಯೇ ಸಾಧುಗಳು ಪಠಿಸುವ ಷಡಕ್ಷರಿ ಮಂತ್ರ (ಓಂ ನಮಃ ಶಿವಾಯ) ಕಿವಿಗೆ ಬೀಳುತ್ತದೆ. ಇದು ಒಂದೆರಡು ಗಂಟೆಗೆ ಸೀಮಿತವಾದ ಪಠಣವಲ್ಲ; 99 ವರ್ಷಗಳಿಂದ ದಿನದ 24 ತಾಸೂ ನಡೆಯುತ್ತಿರುವ ಶಿವಜ‍ಪ.

ಸಿದ್ಧಾರೂಢರು ಪಂಢರಪುರ ದಿಂದ ತಂದಿದ್ದ ಏಕತಾರಿಯನ್ನು, ಸಾಧುವೊಬ್ಬರು ನೆಲಕ್ಕೆ ತಾಕಿಸದಂತೆ ಸದಾಕಾಲ ಕೊರಳಲ್ಲಿ ಹಾಕಿಕೊಂಡು ‘ಓಂ ನಮಃ ಶಿವಾಯ’ ಎಂದು ಪಠಿಸುವ ಪರಿಪಾಠ ಆರಂಭಿಸಿದ್ದರು. ಅದು ಇಂದಿಗೂ ಮುಂದುವರಿದಿದೆ.

ಷಡಕ್ಷರಿ ಮಂತ್ರೋಚ್ಚಾರಣೆ ನಿರಂತರವಾಗಿದ್ದು, 12 ಮಂದಿ ಸಾಧುಗಳು ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ನಿತ್ಯ ಹಗಲು ಒಂದು ತಾಸು, ರಾತ್ರಿ ಒಂದು ತಾಸಿನಂತೆ ಸರದಿಯಲ್ಲಿ ಜಪ ಮಾಡುತ್ತಿದ್ದಾರೆ.

‘ಶಿವ ನಾಮದ ಜಪದಲ್ಲಿಯೇ ಜೀವನದ ಸಾರ್ಥಕತೆಯನ್ನು ಕಂಡುಕೊ ಳ್ಳುತ್ತಿದ್ದೇವೆ. ಸಿದ್ಧಾರೂಢರ ಆದೇಶ ಪಾಲನೆಯ ಅವಕಾಶ ನಮಗೆ ಸಿಕ್ಕಿರುವುದು ನಮ್ಮ ಪುಣ್ಯ’ ಎನ್ನುತ್ತಾರೆ ಹತ್ತು ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಾಧು ನಂದೀಶ್ವರ.

‘1929 ಆಗಸ್ಟ್‌ 21ಕ್ಕೆ ಸಿದ್ಧಾರೂ ಢರು ಲಿಂಗೈಕ್ಯರಾದರು. ಅದಕ್ಕೂ ಹತ್ತು ವರ್ಷಗಳ ಮೊದಲೇ ಅವರು ಫಂಡರಪುರಕ್ಕೆ ಹೋಗಿದ್ದಾಗ ಅಲ್ಲಿಂದ ಏಕತಾರಿ ತಂದಿದ್ದರು. ಆದರೆ, ವರ್ಷ ನಿಖರವಾಗಿ ಗೊತ್ತಿಲ್ಲ’ ಎಂದು ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಿ.ಡಿ. ಮಾಳಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಠದಲ್ಲಿ ಸದಾಕಾಲ ಶಿವನ ಜಪ, ಜ್ಞಾನ ಪ್ರಸರಣ ಹಾಗೂ ಅನ್ನ ದಾಸೋಹ ನಡೆಯಬೇಕು ಎಂದು ಅಪ್ಪಣೆ ಕೊಟ್ಟಿದ್ದರಿಂದ ಅದನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಸೂರ್ಯ, ಚಂದ್ರರು ಇರುವವರೆಗೂ ಇವು ನಡೆಯಲಿವೆ’ ಎಂದರು.

ಧ್ವನಿವರ್ಧಕ ವ್ಯವಸ್ಥೆ: ಇಲ್ಲಿಯವರೆಗೆ ಸಾಧುಗಳ ಶಿವನಾಮದ ಜಪ ಸಿದ್ಧಾರೂಢರ ಗದ್ದುಗೆ ಬಳಿ ಹೋದಾಗ ಮಾತ್ರ ಕೇಳಿ ಬರುತ್ತಿತ್ತು. ಫೆ.27ರಿಂದ ಮಠದಿಂದ ಮುಖ್ಯ ದ್ವಾರದವರೆಗೆ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ. ಹೀಗಾಗಿ, ಈಗ ಮಠದ ಆವರಣವೆಲ್ಲ ಶಿವನಾಮದಿಂದ ಅನುರಣಿಸುತ್ತಿದೆ.

ಭಕ್ತರು ಹಾಗೂ ಸುತ್ತಲಿನ ನಿವಾಸಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ರಾತ್ರಿ 12 ರಿಂದ ಬೆಳಗಿನ ಜಾವ 4 ಗಂಟೆಯವರೆಗೆ ಧ್ವನಿ ವರ್ಧಕಗಳನ್ನು ಬಂದ್‌ ಮಾಡಲಾಗುತ್ತಿದೆ. ಆದರೆ, ಗದ್ದುಗೆ ಮುಂದೆ ಪಠಣ ನಡೆದಿರುತ್ತದೆ ಎಂದು ಮಾಳಗಿ ತಿಳಿಸಿದರು.

ಸಿದ್ಧಾರೂಢರ ಕಾಲದಿಂದಲೂ ಬೆಳಗುತ್ತಿರುವ ‘ನಂದಾದೀಪ’ ಇಲ್ಲಿದ್ದು, ಆರೂಢ ಜ್ಯೋತಿ ಎನಿಸಿದೆ.

ಬರಹ ಇಷ್ಟವಾಯಿತೆ?

 • 30

  Happy
 • 2

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !