ರಾಜ್ಯಮಟ್ಟದ ಭಜನಾ ಸ್ಪರ್ಧೆ ಏಪ್ರಿಲ್‌ 7 ರಿಂದ

ಭಾನುವಾರ, ಮೇ 26, 2019
29 °C
ಹುಬ್ಬಳ್ಳಿಯ ಶ್ರೀ ಸದ್ಗುರು ಸಿದ್ಧಾರೂಢಮಠ

ರಾಜ್ಯಮಟ್ಟದ ಭಜನಾ ಸ್ಪರ್ಧೆ ಏಪ್ರಿಲ್‌ 7 ರಿಂದ

Published:
Updated:
Prajavani

ಹುಬ್ಬಳ್ಳಿ: ಶ್ರೀ ಸದ್ಗುರು ಸಿದ್ಧಾರೂಢ ಮಠದಲ್ಲಿ ಐದನೇ ವರ್ಷದ ರಾಜ್ಯಮಟ್ಟದ ಭಜನಾ ಸ್ಪರ್ಧೆಯನ್ನು ಏಪ್ರಿಲ್‌ 7ರಿಂದ 12ರ ವರೆಗೆ ಆಯೋಜಿಸಲಾಗಿದೆ ಎಂದು ಭಜನಾ ಸ್ಪರ್ಧಾ ಸಮಿತಿ ಅಧ್ಯಕ್ಷ ಶಾಮಾನಂದ ಪೂಜೇರಿ ತಿಳಿಸಿದರು.

ಶ್ರೀ ಸದ್ಗುರು ಸಿದ್ಧಾರೂಢ ಮಹಾಸ್ವಾಮಿಯವರ ಜಯಂತ್ಯುತ್ಸವದ ಅಂಗವಾಗಿ ಏರ್ಪಡಿಸಲಾಗಿರುವ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುವ ಭಜನಾ ತಂಡದವರು ಏಪ್ರಿಲ್‌ 2ರ ಒಳಗಾಗಿ ಶ್ರೀಮಠದ ಟ್ರಸ್ಟ್‌ ಕಮಿಟಿಯ ಕಾರ್ಯಾಲಯದಲ್ಲಿ ಹೆಸರು ನೋಂದಾಯಿಸಬೇಕು ಎಂದು ಸೋಮವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬಹುಮಾನ: ಭಜನಾ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಥಮ ₹ 80 ಸಾವಿರ, ದ್ವಿತೀಯ ₹ 60 ಸಾವಿರ, ತೃತೀಯ ₹ 50 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದರು.

10 ತಂಡಗಳಿಗೆ ಸಮಧಾನಕರ ಬಹುಮಾನವಾಗಿ ತಲಾ ₹ 7 ಸಾವಿರ ನಗದು ನೀಡಲಾಗುವುದು. 16 ವರ್ಷದ ಒಳಗಿನ ಬಾಲಕ ಮತ್ತು ಬಾಲಕಿಯರ ಭಜನಾ ತಂಡಕ್ಕೆ ತಲಾ ₹ 8 ಸಾವಿರ ಪ್ರತಿಭಾ ಪುರಸ್ಕಾರ ಹಾಗೂ ಮಹಿಳಾ ಭಜನಾ ತಂಡಕ್ಕೆ ₹ 8 ಸಾವಿರ ನಗದು ಪುರಸ್ಕಾರ ನೀಡಲಾಗುವುದು ಎಂದರು.

ಉತ್ತಮ ಹಾಡುಗಾರರಿಗೆ, ಉತ್ತಮ ಹಾರ್ಮೊನಿಯಂ ವಾದಕರಿಗೆ, ಉತ್ತಮ ತಬಲಾ ವಾದಕರಿಗೆ, ಉತ್ತಮ ಡಗ್ಗಾ ವಾದಕರಿಗೆ, ಉತ್ತಮ ತಾಳ ವಾದಕರಿಗೆ ಮತ್ತು ಉತ್ತಮ ಧಮಡಿ ವಾದಕರಿಗೆ ತಲಾ ₹ 3,500 ಸಮಾಧಾನಕರ ಬಹುಮಾನ ನೀಡಲಾಗುವುದು ಎಂದರು.

ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ಭಜನಾ ತಂಡದವರು ಬರುವಾಗ ತಮ್ಮ ಸ್ವಂತ ಖರ್ಚಿನಿಂದ ಬರಬೇಕು. ಹೋಗುವಾಗ ಮಾತ್ರ ಪ್ರತಿಯಿಂದು ಭಜನಾ ತಂಡದ 6 ಜನ ಸದಸ್ಯರಿಗೆ ಬಸ್‌ ‍ಚಾರ್ಜ್‌ನ್ನು ಶ್ರೀಮಠದಿಂದ ಕೊಡಲಾಗುವುದು ಎಂದು ತಿಳಿಸಿದರು.

ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳ 300ಕ್ಕೂ ಅಧಿಕ ಭಜನಾ ತಂಡಗಳಿಗೆ ಆಹ್ವಾನ ಪತ್ರಿಕೆ ಕಳುಹಿಸಲಾಗಿದೆ ಎಂದು ಹೇಳಿದರು.

ನಿಯಮಗಳು:

ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡದವರಿಗೆ ಮೂರು ಪದಗಳನ್ನು ಹಾಡಲು ಅವಕಾಶವಿದ್ದು, ಮೂರೂ ಪದಗಳನ್ನು 18 ನಿಮಿಷಗಳಲ್ಲಿ ಹಾಡಬೇಕು. ಪ್ರತಿ ತಂಡದವರು ಎರಡು ಪದ್ಯಗಳನ್ನು ಕೈವಲ್ಯ ಸಾಹಿತ್ಯದ ಮೇಲೆ ಕಡ್ಡಾಯವಾಗಿ ಹಾಡಬೇಕು. ಪ್ರತಿ ತಂಡದವರು ಮೂರನೇ ಪದ್ಯವನ್ನು ಶ್ರೀ ಸಿದ್ಧಾರೂಢರ ಮೇಲಿನ ಪದ್ಯ ಅಥವಾ ದಾಸರ ಪದ್ಯ ಅಥವಾ ಶಿಶುನಾಥ ಶರೀಫರ ಪದ್ಯ ಅಥವಾ ವಚನ ಸಾಹಿತ್ಯದಲ್ಲಿ ಯಾವುದಾದರೊಂದು ಹಾಡಬೇಕು. ತಂಡದ ಕಲಾವಿದರ ಸಂಖ್ಯೆ 6ಕ್ಕಿಂತ ಕಡಿಮೆ ಇರಬಾರದು ಮತ್ತು 10ಕ್ಕಿಂತ ಹೆಚ್ಚಿಗೆ ಇರಬಾರದು. ಒಂದು ತಂಡದಲ್ಲಿ ಭಾಗವಹಿಸಿದ ಕಲಾವಿದರಿಗೆ ಮತ್ತೊಂದು ತಂಡದಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

ಮಠದ ಟ್ರಸ್ಟ್‌ ಕಮಿಟಿ ಅಧ್ಯಕ್ಷ ದೇವೇಂದ್ರಪ್ಪ ಮಾಳಗಿ, ಧರ್ಮದರ್ಶಿಗಳಾದ ವೈ.ಎ. ದೊಡ್ಡಮನಿ, ವಿಜಯಲಕ್ಷ್ಮಿ ಪಾಟೀಲ, ವೀರಣ್ಣ ತುಪ್ಪದ, ಕೆ.ಎಲ್‌.ಪಾಟೀಲ, ಎಸ್‌.ಐ.ಕೋಳಕೂರ, ಶಿವರುದ್ರಪ್ಪ ಉಕ್ಕಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !