ಚೌಕೀದಾರ್‌ ಅಲ್ಲ, ಭ್ರಷ್ಟಾಚಾರದ ಭಾಗೀದಾರ್‌: ಮೋದಿ ವಿರುದ್ಧ ಸಿದ್ದು ವಾಗ್ದಾಳಿ

ಬುಧವಾರ, ಏಪ್ರಿಲ್ 24, 2019
25 °C
‘ಮೈತ್ರಿ’ ಅಭ್ಯರ್ಥಿ ಪರ ಸಿದ್ದರಾಮಯ್ಯ ರೋಡ್‌ ಶೋ

ಚೌಕೀದಾರ್‌ ಅಲ್ಲ, ಭ್ರಷ್ಟಾಚಾರದ ಭಾಗೀದಾರ್‌: ಮೋದಿ ವಿರುದ್ಧ ಸಿದ್ದು ವಾಗ್ದಾಳಿ

Published:
Updated:

ಬೆಂಗಳೂರು: ‘ಮಾತ್ ಎತ್ತಿದ್ರೆ ಮನ್ ಕೀ ಬಾತ್, ಮನ್ ಕೀ ಬಾತ್ ಅಂತಾನೆ ಪುಣ್ಯಾತ್ಮ. ಆ ಪುಣ್ಯಾತ್ಮನಿಗೆ ಮಾತ್ ಒಂದ್ಬಿಟ್ರೆ ಬೇರೆ ಏನೂ ಬರಲ್ಲ. ಹೆಚ್ಚು ಮಾತಾಡ್ಬೇಡಪ್ಪ... ರೈತರು ಕಷ್ಟದಲ್ಲಿದ್ದಾರೆ. ಅವರ ಬಗ್ಗೆ ಯೋಚಿಸು ಅಂದ್ರೆ ಆ ಪುಣ್ಯಾತ್ಮ ತಲೆನೇ ಕೆಡಿಸ್ಕೊಳ್ಳಲ್ಲ’

– ಮೈತ್ರಿಕೂಟದ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಪರ ಚುನಾವಣಾ ಪ್ರಚಾರದ ಅಂಗವಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವಿವಿಧೆಡೆ ನಡೆದ ರೋಡ್‌ ಶೋ ಸಂದರ್ಭದಲ್ಲಿ ಪ್ರಧಾನಿ ಬಗ್ಗೆ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದು ಹೀಗೆ.

‘ಪಿ.ಸಿ. ಮೋಹನ್ ಯಾರು ಎಂದು ಗೊತ್ತೇ’ ಎಂದು ಸಿದ್ದರಾಮಯ್ಯ ಕೇಳಿದಾಗ, ‘ಯಾರೆಂದೇ ಗೊತ್ತಿಲ್ಲ’ ಎಂದ ಕಾರ್ಯಕರ್ತರು ಜೋರಾಗಿ ಕೂಗಿದರು. ಆಗ, ‘ಗೊತ್ತಿಲ್ಲ ಎಂದು ಹೇಳಬಾರದು. ಈ ಕ್ಷೇತ್ರದ ಸಂಸದ’ ಎಂದೂ ವ್ಯಂಗ್ಯವಾಡಿದರು.

‘ಹಾಲಿ ಸಂಸದರೂ ಆಗಿರುವ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್, ಲೋಕಸಭೆಯಲ್ಲಿ ಹತ್ತು ವರ್ಷಗಳಲ್ಲಿ ಒಂದೇ ಒಂದು ದಿನ ಮಾತನಾಡಿಲ್ಲ. ಮೋದಿ ಮುಖ ನೋಡಿ ನನಗೆ ಮತ ಹಾಕಿ ಎಂದು ಹೇಳುತ್ತಾರೆ. ಮೋಹನ್ ಕೆಲಸ ಮಾಡಿದ್ದರೆ, ಮೋದಿ ಮುಖ ನೋಡಿ ಮತ ಹಾಕಿ ಎಂದು ಯಾಕೆ ಕೇಳುತ್ತಾರೆ’ ಎಂದು ಪ್ರಶ್ನಿಸಿದರು.

‘ಯುವಕರು ಉದ್ಯೋಗ ಕೇಳಿದರೆ ಮೋದಿ, ಅಮಿತ್ ಶಾ ಪಕೋಡ ಮಾರಿ ಎಂದು ಹೇಳುತ್ತಾರೆ. ಮೋದಿ ಭ್ರಷ್ಟಾಚಾರದಲ್ಲಿ ಭಾಗೀದಾರ್ ವಿನಃ ಚೌಕೀದಾರ್‌ ಅಲ್ಲ. ಶ್ರೀಮಂತರಿಗೆ ಅಚ್ಛೇ ದಿನ ಬಂದಿದೆ ಹೊರತು ಬಡವರಿಗೆ ಬಂದಿಲ್ಲ. ಉದ್ಯಮಿಗಳ ಮೂರೂವರೆ ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಜೈಲಿಗೆ ಹೋದವರು ಈಗ ಚೌಕೀದಾರ್ ಆಗಿದ್ದಾರೆ’ ಎಂದು ಟೀಕಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌  ಗುಂಡೂರಾವ್‌ ಮಾತನಾಡಿ, ‘ರಾಜ್ಯದಲ್ಲಿ ಬಿಜೆಪಿ ಲೆಕ್ಕಕ್ಕೇ ಇಲ್ಲ. ಅದಕ್ಕೆ ಬಿಜೆಪಿಯವರು ‘ಮೋದಿ... ಮೋದಿ...’ ಎಂದು ಹೇಳುತ್ತಿದ್ದಾರೆ’ ಎಂದರು.

‘ರಾಜ್ಯಕ್ಕೆ ಪ್ರಧಾನಿಯವರ ಕೊಡುಗೆ ಶೂನ್ಯ. ವಾಸ್ತವ ಸ್ಥಿತಿ ನೋಡಿ ಅವರು ಭಯಭೀತರಾಗಿದ್ದಾರೆ. ಮೋದಿ ಎಷ್ಟು ಬಾರಿ ರಾಜ್ಯಕ್ಕೆ ಬಂದರೂ ಪ್ರಯೋಜನ ಇಲ್ಲ’ ಎಂದರು.

ಸಿ.ವಿ. ರಾಮನ್ ನಗರ, ರಾಜಾಜಿನಗರ, ಬಿನ್ನಿಪೇಟೆ ಪ್ರಮುಖ ರಸ್ತೆಗಳಲ್ಲಿ ರೋಡ್‌ ಶೋ ನಡೆಯಿತು. ಸಚಿವರಾದ ಜಮೀರ್ ಅಹ್ಮದ್ ಖಾನ್, ಕೆ.ಜೆ. ಜಾರ್ಜ್ ಅವರು ರೋಡ್‌ ಶೋದಲ್ಲಿ ಇದ್ದರು.

ರೋಡ್‌ ಶೋ ಮಧ್ಯೆ ಸುಮಲತಾ ಪರ ಕೂಗು!
ರಿಜ್ವಾನ್ ಅರ್ಷದ್‌ಗೆ ಮತ ಹಾಕುವಂತೆ ಸಿದ್ದರಾಮಯ್ಯ ಮನವಿ ಮಾಡಿದಾಗ ಕಾಂಗ್ರೆಸ್‌ ಕಾರ್ಯಕರ್ತನೊಬ್ಬ, ‘ಇಲ್ಲಿ ರಿಜ್ವಾನ್ ಅರ್ಷದ್ ಅವರನ್ನು ಗೆಲ್ಲಿಸುತ್ತೇವೆ. ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರನ್ನು ಗೆಲ್ಲಿಸಿಕೊಡಿ ಅಣ್ಣಾ...’ ಎಂದು ಕೂಗಿದ ಪ್ರಸಂಗ ನಡೆಯಿತು. ಆ ಕೂಗು ಕೇಳಿಸಿಕೊಂಡರೂ ಅದಕ್ಕೆ ಕಿವಿಗೊಡದೆ ಸಿದ್ದರಾಮಯ್ಯ, ತಮ್ಮ ಭಾಷಣ ಮುಂದುವರೆಸಿದರು.

*
ಯುವಕರು ಉದ್ಯೋಗ ಕೇಳಿದರೆ ಮೋದಿ, ಅಮಿತ್ ಶಾ ಪಕೋಡ ಮಾರಿ ಎಂದು ಹೇಳುತ್ತಾರೆ.
-ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !