ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ?

7
ಪಕ್ಷದಲ್ಲಿ ಹೆಚ್ಚಿದ ಒತ್ತಡ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಒಲವು

ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ?

Published:
Updated:

ಬೆಂಗಳೂರು: ರಾಜ್ಯ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಸಿದ್ದರಾಮಯ್ಯ ಅವರ ಮೇಲೆ ಕಾಂಗ್ರೆಸ್‌ ಹೈಕಮಾಂಡ್‌ ಒತ್ತಡ ಹೇರುತ್ತಿದೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಜೊತೆಗೆ ಕೇಂದ್ರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಿದ್ದರಾಮಯ್ಯ ದೆಹಲಿಗೆ ಬರುವ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ವರಿಷ್ಠರು ವ್ಯಕ್ತಪಡಿಸಿದ್ದಾರೆ.

‘ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಜೊತೆಗೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೆ ಪಕ್ಷ ನೀಡಿದೆ. ಅವರನ್ನು ಮುಂಚೂಣಿಯಲ್ಲಿ ನಿಲ್ಲಿಸಿ, ಲೋಕಸಭೆ ಚುನಾವಣೆ ಎದುರಿಸಲು ಹೈಕಮಾಂಡ್‌ ಉದ್ದೇಶಿಸಿದೆ’ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರು ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ ರೀತಿ ಮತ್ತು ಅವರ ರಾಜಕೀಯ ತಂತ್ರಗಾರಿಕೆ ಕಂಡು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಭಾವಿತರಾಗಿದ್ದಾರೆ. ಆಡಳಿತ ವಿರೋಧಿ ಅಲೆಗೆ ಕಾರಣವಾಗುವ ಅಂಶಗಳಿದ್ದರೂ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ 79 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಜೆಡಿಎಸ್‌ ಜೊತೆ ಮೈತ್ರಿಗೆ ಕೈ ಜೋಡಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ವಿಷಯದಲ್ಲಿ ಸಿದ್ದರಾಮಯ್ಯ ಮಹತ್ವದ ಪಾತ್ರ ವಹಿಸಿದ್ದಾರೆ. ಈ ಕಾರಣಕ್ಕೆ ಅವರನ್ನು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಪಕ್ಷದ ಕಾರ್ಯಕಾರಿ ಸಮಿತಿಗೆ (ಸಿಡಬ್ಲ್ಯೂಸಿ) ಸದಸ್ಯರನ್ನಾಗಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಇತ್ತೀಚೆಗೆ ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಮಾನಮನಸ್ಕ ಪಕ್ಷಗಳ ಜೊತೆ ಕಾಂಗ್ರೆಸ್‌ ಕೈ ಜೋಡಿಸಬೇಕಾದ ಅಗತ್ಯದ ಬಗ್ಗೆ ಪ್ರಸ್ತಾಪಿಸಿದ್ದರು. ಸಭೆಯಲ್ಲಿದ್ದ ಮತ್ತೊಬ್ಬ ಹಿರಿಯ ನಾಯಕ ಅಶೋಕ ಗೆಹ್ಲೋಟ್‌, ಭಾಷಣ ಮೊಟಕುಗೊಳಿಸುವಂತೆ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದಾಗ ಮಧ್ಯಪ್ರವೇಶಿಸಿದ ರಾಹುಲ್‌ ಗಾಂಧಿ, ಭಾಷಣ ಮುಂದುವರಿಸಲು ಸೂಚಿಸಿದ್ದರು. ಅಷ್ಟರಮಟ್ಟಿಗೆ ಸಿದ್ದರಾಮಯ್ಯ ಮೇಲೆ ಹೈಕಮಾಂಡ್‌ ವಿಶ್ವಾಸ ಹೊಂದಿದೆ’ ‌ಎಂದೂ ಮೂಲಗಳು ತಿಳಿಸಿವೆ.

1991ರಲ್ಲಿ ಜೆಡಿಎಸ್‌ ಟಿಕೆಟ್‌ನಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ, ಬಸವರಾಜ ಪಾಟೀಲ ಅನ್ವರಿ ವಿರುದ್ಧ ಸೋಲು ಕಂಡಿದ್ದರು. ಕಡಿಮೆ ಅಂತರದಿಂದ ಅವರು ಸೋತರೂ, ಆ ದಿನಗಳಲ್ಲೇ ಕುರುಬ ಸಮುದಾಯದ ಮತಗಳ ಕ್ರೋಡೀಕರಣಕ್ಕೆ ಕಾರಣರಾಗಿದ್ದರು.

ಆದರೆ, ಇತ್ತೀಚೆಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುವ ಸಂದರ್ಭದಲ್ಲಿ, ‘ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದರು.

ಬರಹ ಇಷ್ಟವಾಯಿತೆ?

 • 18

  Happy
 • 3

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !