ಜಂಟಿ ಪ್ರಚಾರದಿಂದ ಭಿನ್ನಾಭಿಪ್ರಾಯ ದೂರ

ಮಂಗಳವಾರ, ಏಪ್ರಿಲ್ 23, 2019
31 °C
ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿಶ್ವಾಸ

ಜಂಟಿ ಪ್ರಚಾರದಿಂದ ಭಿನ್ನಾಭಿಪ್ರಾಯ ದೂರ

Published:
Updated:
Prajavani

ಬೆಂಗಳೂರು: ‘ನಾನು ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಜಂಟಿ ಪ್ರಚಾರ ಮಾಡಿದ ಬಳಿಕ ಜೆಡಿಎಸ್‌–ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಇರುವ ಸಣ್ಣಪುಟ್ಟ ಭಿನ್ನಾಭಿಪ್ರಾಯ ದೂರ ಆಗಲಿದೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಪ್ರೆಸ್‌ ಕ್ಲಬ್‌ ಸೋಮವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ಮೈತ್ರಿಕೂಟದ ಅಭ್ಯರ್ಥಿಗಳು 20ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ’ ಎಂದರು.

‘ಹಳೆ ಮೈಸೂರು ಭಾಗದಲ್ಲಿ ನಾವು ಮೊದಲಿನಿಂದಲೂ ಪರಸ್ಪರ ಹೋರಾಟ ಮಾಡುತ್ತಿದ್ದೇವೆ. ಹಾಗಾಗಿ, ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಸರ್ಕಾರದಲ್ಲಿ ಸಮನ್ವಯ ಇದ್ದ ಕಾರಣಕ್ಕೆ 10 ತಿಂಗಳ ಆಡಳಿತ ಪೂರ್ಣಗೊಳಿಸಿದ್ದೇವೆ. ಸಚಿವ ಸಾ.ರಾ. ಮಹೇಶ್ ಅವರಿಗೆ ಮಂಡ್ಯ ಜಿಲ್ಲೆಯ ಹೊಣೆ ಇದೆ. ಸಚಿವ ಜಿ.ಟಿ.ದೇವೇಗೌಡರು ಊರಿನಲ್ಲಿ ಇರಲಿಲ್ಲ. ಹಾಗಾಗಿ, ಅವರು ನಮ್ಮ ಸಭೆಗೆ ಬರಲಿಲ್ಲ. ಬರುತ್ತಾರೆ ಬಿಡಿ’ ಎಂದು ಅವರು ಪ್ರತಿಕ್ರಿಯಿಸಿದರು.

‘ಮೈತ್ರಿ ಸರ್ಕಾರ ಪತನಕ್ಕೆ ಭೂಮಿ ಆಕಾಶ ಒಂದು ಮಾಡಿ ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ‍ಪ್ರತಿನಿತ್ಯ ಮುಖ್ಯಮಂತ್ರಿ ಹುದ್ದೆಯ ಕನಸು ಬೀಳುತ್ತಿದೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರುವ ಅವರ ಕನಸು ನನಸಾಗದು’ ಎಂದು ಅವರು ವ್ಯಂಗ್ಯವಾಡಿದರು.

ಡೈರಿ ಪ್ರಕರಣವನ್ನು ಸಾಬೀತುಪಡಿಸುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಬಿ.ಎಸ್‌.ಯಡಿಯೂರಪ್ಪ ಸವಾಲು ಎಸೆದಿದ್ದಾರಲ್ಲ ಎಂಬ ಪ್ರಶ್ನೆಗೆ ‍‍ಪ್ರತಿಕ್ರಿಯಿಸಿದ ಅವರು, ‘ಡೈರಿ ಪ್ರಕರಣವನ್ನು ರಾಹುಲ್‌ ಗಾಂಧಿ ಯಾಕೆ ಸಾಬೀತುಪಡಿಸಬೇಕು. ಆ ಡೈರಿಯಲ್ಲಿ ಯಡಿಯೂರಪ್ಪ ಅವರ ಸಹಿ ಇದೆ. ಈ ಸಹಿ ನಕಲಿ ಎಂದು ಆದಾಯ ತೆರಿಗೆ ಇಲಾಖೆಯ ಆಯುಕ್ತ ಬಾಲಕೃಷ್ಣನ್‌ ಕ್ಲೀನ್‌ಚಿಟ್‌ ಕೊಡುವ ಅಗತ್ಯ ಏನಿತ್ತು. ಅವರಿಗೆ ಆ ಅಧಿಕಾರ ಕೊಟ್ಟವರು ಯಾರು’ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಹಾಗೂ ಎಚ್‌.ಡಿ.ಕುಮಾರಸ್ವಾಮಿ ‘ಅವರಪ್ಪನಾಣೆಗೆ ಮುಖ್ಯಮಂತ್ರಿಯಾಗಲ್ಲ’ ಎಂದು ಈ ಹಿಂದೆ ಹೇಳಿಕೆ ನೀಡಿದ್ದೀರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿಲ್ಲವಲ್ಲ. ನಾವು ಬೆಂಬಲ ಕೊಟ್ಟ ಕಾರಣಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ ಅಷ್ಟೇ’ ಎಂದರು.

‘ಗೋಧ್ರಾ ಹತ್ಯಾಕಾಂಡದ ಸಂದರ್ಭದಲ್ಲಿ ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದರು. ಮನುಷ್ಯರನ್ನು ಕೊಲ್ಲಿಸುವವರನ್ನು ನರಹಂತಕ ಎನ್ನದೆ ಏನೆಂದು ಕರೆಯಬೇಕು’ ಎಂದು ಮರುಪ್ರಶ್ನೆ ಹಾಕಿದರು.

ಇವಿಎಂ ಮುಗಿದ ಅಧ್ಯಾಯ. ಆದರೂ, ಅದರ ಬಗ್ಗೆ ನನಗೆ ಇನ್ನೂ ಅನುಮಾನ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪುನಃ ‍ಪುನಃ ಹೇಳಬೇಕಾ’

* ಹಾಗಿದ್ದರೆ ನೀವು ಮಂಡ್ಯ ಕ್ಷೇತ್ರದ ಪ್ರಚಾರಕ್ಕೆ ಹೋಗುತ್ತೀರಾ?
ಜಂಟಿ ಪ್ರಚಾರ ಮಾಡುತ್ತೇವೆ ಎಂದು ಹೇಳಿದ್ದೇನಲ್ಲ. ಮಂಡ್ಯಕ್ಕೆ ಹೋಗುತ್ತೇನೆ ಎಂದು ಪುನಃ ಹೇಳಬೇಕಾ. ಪ್ರವಾಸದ ಪಟ್ಟಿ ಸಿದ್ಧಪಡಿಸುತ್ತಿದ್ದೇವೆ. ಎಲ್ಲಿಗೆಲ್ಲ ಪ‍್ರವಾಸ ಮಾಡಲಿಕ್ಕೆ ಆಗುತ್ತದೆ, ನೋಡೋಣ.

ಸಿದ್ದರಾಮಯ್ಯ ವಾಗ್ಬಾಣ

* ಇದು ರಾಹುಲ್ ಗಾಂಧಿ ಹಾಗೂ ನರೇಂದ್ರ ಮೋದಿ ನಡುವೆ ನಡೆಯುತ್ತಿರುವ ಚುನಾವಣೆ ಅಲ್ಲ. ಪ್ರಜಾಪ್ರಭುತ್ವ ಹಾಗೂ ಸರ್ವಾಧಿಕಾರದ ನಡುವಿನ ಚುನಾವಣೆ.
* ಸರ್ಜಿಕಲ್‌ ಸ್ಟ್ರೈಕ್‌ ಅನ್ನು ಬಿಜೆಪಿಯವರು ದೊಡ್ಡ ಸಾಧನೆ ಎಂದು ತಿಳಿದುಕೊಂಡಿದ್ದಾರೆ. ಇದರಿಂದಲೇ ಚುನಾವಣೆ ಗೆಲ್ಲಲು ಸಾಧ್ಯ ಅಂದುಕೊಂಡರೆ ಮೂರ್ಖತನವಾಗಲಿದೆ. ನಾವು ಇದ್ದಾಗ 10–12 ಸಲ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ್ದೆವು. ಪಾಕಿಸ್ತಾನವನ್ನು ಎರಡು ಸಲ ಸೋಲಿಸಿದ್ದೆವು. ಆಗ ಮೋದಿ ಇದ್ದರಾ?
* ಉಗ್ರರು ನಮ್ಮ ಸೇನೆಯ 44 ಸೈನಿಕರನ್ನು ಹತ್ಯೆ ಮಾಡಿದರು. ಆ ಸೈನಿಕರಿಗೆ ಸರ್ಕಾರ ಯಾಕೆ ರಕ್ಷಣೆ ನೀಡಲಿಲ್ಲ. ದಾಳಿ ನಡೆಯುತ್ತಿದೆ ಎಂಬುದು ಮುಂಚಿತವಾಗಿ ಯಾಕೆ ಗೊತ್ತಾಗಲಿಲ್ಲ. ನಮ್ಮ ಗುಪ್ತಚರ ಇಲಾಖೆ ಸತ್ತು ಹೋಗಿತ್ತಾ?
* ಆರ್‌ಬಿಐ, ‌ಸಿಬಿಐ ಹಾಗೂ ಸಿಇಸಿಯಂತಹ ಸಂವಿಧಾನಾತ್ಮಕ ಸಂಸ್ಥೆಗಳು ಅಪಾಯ ಎದುರಿಸುತ್ತಿವೆ. ನ್ಯಾಯಾಲಯಗಳು ಕೂಡ ಬೀದಿಗೆ ಬರುವಂತಾಗಿದೆ. ಮಾತು ಎತ್ತಿದರೆ ಎಲ್ಲರೂ ಚೌಕಿದಾರ್ ಎನ್ನುತ್ತಾರೆ. ಇದು ಒಂದು ರೀತಿಯ ಚಟ ಆಗಿಬಿಟ್ಟಿದೆ. ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಬಿಜೆಪಿಯ ಎಲ್ಲ ಮುಖಂಡರು ಕೂಡ ಚೌಕಿದಾರ್ ಆಗಿಬಿಟ್ಟಿದ್ದಾರೆ. ಅವರಿಗೆ ಸಾಮಾಜಿಕ ಬದ್ಧತೆ ಎಷ್ಟಿದೆ? ಇವರು ಯಾರಿಗೆ ಚೌಕಿದಾರ್?

**
ಕೋಮುವಾದಿಗಳು, ಪ್ರಜಾಪ್ರಭುತ್ವ ವಿರೋಧಿಗಳು ನಮ್ಮ ಮೊದಲ ರಾಜಕೀಯ ವೈರಿಗಳು. ಬಿಜೆಪಿ ನಮ್ಮ ಮೊದಲ ಶತ್ರು.
–ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !