ಬುಧವಾರ, ನವೆಂಬರ್ 13, 2019
28 °C

ಹೊಣೆ ಮರೆತ ಪ್ರಾಧಿಕಾರ; ವರ್ಷ ಕಳೆದರೂ ಆರಂಭವಾಗದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ

Published:
Updated:
Prajavani

ಶಿರಸಿ: ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ದೊರಕದಿದ್ದರೂ ವರ್ಷದ ಹಿಂದೆಯೇ ಪರಿವರ್ತಿತ ರಾಷ್ಟ್ರೀಯ ಹೆದ್ದಾರಿ ‘766–ಇ’ಯ ಅಭಿವೃದ್ಧಿ ಕಾಮಗಾರಿಗೆ ಟೆಂಡರ್‌ ಕರೆದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ‘ಫಾರೆಸ್ಟ್ ಕ್ಲಿಯರೆನ್ಸ್’ ದೊರಕಿಲ್ಲ ಎನ್ನುವ ಕಾರಣ ಮುಂದಿಟ್ಟು ಗುಂಡಿ ಬಿದ್ದ ರಸ್ತೆ ರಿಪೇರಿಯನ್ನೂ ನಿರ್ಲಕ್ಷಿಸಿದೆ. ಇದರ ಪರಿಣಾಮದಿಂದ ಶಿರಸಿ– ಕುಮಟಾ ರಸ್ತೆಯಲ್ಲಿ ಪ್ರತಿದಿನ ಪ್ರಯಾಣಿಕರು ಸಂಚಾರ ಯಾತನೆ ಅನುಭವಿಸುವಂತಾಗಿದೆ.

ಹಾವೇರಿ– ಎಕ್ಕಂಬಿ (ರಾಜ್ಯ ಹೆದ್ದಾರಿ–2) ಹಾಗೂ ಎಕ್ಕಂಬಿಯಿಂದ ಕುಮಟಾ, ಬೇಲೆಕೇರಿ (ರಾಜ್ಯ ಹೆದ್ದಾರಿ –69)ವರೆಗಿನ ರಸ್ತೆಯು 2018ರ ಆ.28ರಂದು ರಾಷ್ಟ್ರೀಯ ಹೆದ್ದಾರಿಯಾಗಿ ಅಧಿಕೃತವಾಗಿ ಘೋಷಣೆಯಾಗಿದೆ. ತಕ್ಷಣದಲ್ಲೇ ಲೋಕೋಪಯೋಗಿ ಇಲಾಖೆಯಿಂದ ಈ ರಸ್ತೆಯ ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ವಹಿಸಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಡಿಪಿಆರ್ ಆಧರಿಸಿ ಅದೇ ವರ್ಷ ಏಪ್ರಿಲ್‌ನಲ್ಲೇ ಆರ್.ಎನ್‌.ಎಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮತ್ತು ಗಾಯತ್ರಿ ಪ್ರಾಜೆಕ್ಟ್ಸ್‌ ಲಿಮಿಟೆಡ್ ಕಂಪನಿಗಳಿಗೆ ₹360.60 ಕೋಟಿ ವೆಚ್ಚದ ಕಾಮಗಾರಿಗೆ ಗುತ್ತಿಗೆ ನೀಡಿದೆ. ಆದರೆ, ಇನ್ನೂ ಕೆಲಸ ಪ್ರಾರಂಭಿಸದ ಪ್ರಾಧಿಕಾರದ ವಿರುದ್ಧ ಜನರು ಸಿಡಿದೆದ್ದಿದ್ದಾರೆ.

‘ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತೆ ಎನ್ನುವ ಗಾದೆಯಂತೆ, ಅರಣ್ಯ ಇಲಾಖೆ ಅನುಮತಿ ಪಡೆಯುವ ಮೊದಲೇ ಯಾಕೆ ಟೆಂಡರ್‌ ಕರೆಯಬೇಕಿತ್ತು? ಅರಣ್ಯ ಇಲಾಖೆ ಮೇಲೆ ಆರೋಪ ಮಾಡುವ ಎನ್‌ಎಚ್ಎಐ, ಹೊಣೆ ವಹಿಸಿಕೊಂಡ ಮೇಲೆ ಈ ರಸ್ತೆಯ ಕನಿಷ್ಠ ನಿರ್ವಹಣೆ ಮಾಡಿಲ್ಲ. ಇದರ ಪರಿಣಾಮ ರಸ್ತೆ ಅಲ್ಲಲ್ಲಿ ಚಿಂದಿಯಾಗಿದೆ. ರಸ್ತೆಯ ತಾತ್ಕಾಲಿಕ ದುರಸ್ತಿ ಮಾಡಬೇಕು. ಇಲ್ಲವಾದಲ್ಲಿ, ಸಂಚಾರಕ್ಕೆ ಯೋಗ್ಯವಿಲ್ಲದ ಈ ರಸ್ತೆಯಲ್ಲಿ ಜಿಲ್ಲಾಡಳಿತ ಸಂಚಾರ ನಿರ್ಬಂಧ ಹೇರಬೇಕು’ ಎಂದು ವಕೀಲ ಎ.ರವೀಂದ್ರ ನಾಯ್ಕ ಆಗ್ರಹಿಸಿದರು.

‘10 ಮೀಟರ್ ಅಗಲದ ರಸ್ತೆ ನಿರ್ಮಾಣಕ್ಕೆ ಅನುಮತಿ ಕೋರಿ, ಕೇಂದ್ರ ಅರಣ್ಯ ಸಚಿವಾಲಯಕ್ಕೆ ಕಳೆದ ಜೂನ್‌ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಲಾಗಿದೆ. ದಾಖಲೆ ಹಾಗೂ ತಾಂತ್ರಿಕ ಕಾರಣ ಮುಂದಿಟ್ಟು ಅರಣ್ಯ ಇಲಾಖೆ ಎರಡು ಬಾರಿ ಸ್ಪಷ್ಟನೆ ಕೇಳಿದೆ. ಅದನ್ನು ಪೂರೈಸಿರುವ ಜತೆಗೆ, ಸ್ಥಳೀಯವಾಗಿ ಭೂಸ್ವಾಧೀನ, ಗಡಿ ಗುರುತು ಹಾಕುವ ಸಂಬಂಧ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಅನುಮತಿ ದೊರೆತರೆ ಶೀಘ್ರ ಕಾಮಗಾರಿ ಆರಂಭವಾಗುತ್ತದೆ’ ಎನ್ನುವುದು ಪ್ರಾಧಿಕಾರದ ಅಧಿಕಾರಿಗಳು ನೀಡುವ ಸಮಜಾಯಿಷಿ.

‘ಗಡಿ ಗುರುತು ಹಾಕುವ ಸಿಬ್ಬಂದಿಗೆ ರಸ್ತೆ ವಿಸ್ತರಣೆಯ ಅಳತೆಯ ಕುರಿತು ಸ್ಪಷ್ಟತೆಯಿಲ್ಲ. ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ರಸ್ತೆಯಂತೂ ವಾಹನ ಚಲಾಯಿಸಲು ಸಾಧ್ಯವಾಗದಷ್ಟು ದುಃಸ್ಥಿತಿಗೆ ತಲುಪಿದೆ. ಹೊಂಡ ತಪ್ಪಿಸುವ ಭರದಲ್ಲಿ ಬೈಕ್ ಸವಾರರು ಬಿದ್ದು ಗಾಯಗೊಂಡ ಪ್ರಕರಣಗಳಿಗಂತೂ ಲೆಕ್ಕವಿಲ್ಲ’ ಎನ್ನುತ್ತಾರೆ ಮಂಜುಗುಣಿಯ ಶ್ರೀಧರ ನಾಯ್ಕ.

ಕಣ್ಣೆದುರೇ ದೃಷ್ಟಾಂತ

‘ಕುಮಟಾ ರಸ್ತೆ ಅಭಿವೃದ್ಧಿಗೆ ಪರಿಸರ ಸಂಘಟನೆಗಳು ಅಡ್ಡಿಪಡಿಸಿವೆ ಎಂಬುದು ತಪ್ಪು ಕಲ್ಪನೆ. ನಾವು ನ್ಯಾಯಾಲಯಕ್ಕೆ ಹೋಗಿಲ್ಲ. ರಸ್ತೆ ಅಭಿವೃದ್ಧಿಗೆ ನಮ್ಮ ವಿರೋಧವೂ ಇಲ್ಲ. ಆದರೆ, ಘಟ್ಟ ಪ್ರದೇಶದಲ್ಲಿ ಗುಡ್ಡ ಕಡಿದು ವಿಸ್ತರಣೆ ಮಾಡಿದರೆ, ಭೂಕುಸಿತ, ಸುಮಾರು 10 ಸಾವಿರ ಮರಗಳು ನಾಶವಾಗುವ ಸಾಧ್ಯತೆ ಇರುವುದರಿಂದ ಅದನ್ನು ವಿರೋಧಿಸಿದ್ದೇವೆ. ಈ ಬಾರಿಯ ಚಾರ್ಮಾಡಿ, ಅರಬೈಲ್ ಘಟ್ಟದ ಭೂ ಕುಸಿತಗಳು ಅರಣ್ಯದೊಳಗಿನ ಅಭಿವೃದ್ಧಿಯ ಪರಿಣಾಮ ತೆರೆದಿಟ್ಟಿವೆ’ ಎಂದು ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ ಹೇಳಿದರು.

**

ಹೆದ್ದಾರಿ ವಿಸ್ತರಣೆ ಯೋಜನೆಯಿಂದ ಕೊಡಲಿಯೇಟು ಬೀಳಲಿರುವ ಮರಗಳ ಲೆಕ್ಕ ಹಾಕಿ, ವಾರದಲ್ಲಿ ಅರಣ್ಯ ಭವನಕ್ಕೆ ವರದಿ ಸಲ್ಲಿಸಲಾಗುವುದು
- ಡಿ.ಯತೀಶಕುಮಾರ್, ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

ಪ್ರತಿಕ್ರಿಯಿಸಿ (+)